ರಾಜ್ಯದಲ್ಲಿ ಲ್ಯಾಂಡ್ ಜಿಹಾದ್‌ಗೆ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಸ್ಥ: ಸಂಸದ ಬ್ರಿಜೇಶ್ ಚೌಟ ಆರೋಪ

Spread the love

ರಾಜ್ಯದಲ್ಲಿ ಲ್ಯಾಂಡ್ ಜಿಹಾದ್‌ಗೆ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಸ್ಥ: ಸಂಸದ ಬ್ರಿಜೇಶ್ ಚೌಟ ಆರೋಪ
 
ಮಂಗಳೂರು: ರಾಜ್ಯದಲ್ಲಿ ಲ್ಯಾಂಡ್ ಜಿಹಾದ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಸ್ಥರಾಗಿದ್ದು, ಸಿಎಂ ನಿರ್ದೇಶನ, ಸಚಿವ ಝಮೀರ್ ಅಹ್ಮದ್ ಖಾನ್ ಸೂಚನೆಯಂತೆ ವಕ್ಫ್ ಇಲಾಖೆ ರೈತರ ಜಮೀನನ್ನು ತನ್ನ ಖಾತೆಗೆ ಭೂಪರಿವರ್ತನೆ ಮಾಡಿಕೊಳ್ಳುತ್ತಿದೆ ಎಂದು ಸಂಸದ ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.

ರಾಜ್ಯದಲ್ಲಿ ವಕ್ಫ್ ಕಾನೂನಿನ ಮೂಲಕ ರಾಜ್ಯ ಕಾಂಗ್ರೆಸ್ ಆಸ್ತಿ ಕಬಳಿಕೆ ಮಾಡುತ್ತಿದೆ ಎಂದು ಆರೋಪಿಸಿದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ವಕ್ಫ್ ಹೆಸರಿನಲ್ಲಿ ರಾಜ್ಯದಲ್ಲಿ ಜಮೀನು ಕಬಳಿಕೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಝಮೀರ್ ಅಹ್ಮದ್ ಅವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಸಂಸದ ಬ್ರಿಜೇಶ್ ಚೌಟ ಆಗ್ರಹಿಸಿದರು.

ವಕ್ಫ್ ಕಾನೂನು ಮೂಲಕ ಕಬಳಿಕೆ ಮಾಡಿದ ರೈತರ ಹಾಗೂ ಇತರರ ಜಮೀನನ್ನು ಟ್ರಿಬ್ಯುನಲ್‌ನಲ್ಲಿ ಮಾತ್ರ ಪ್ರಶ್ನೆ ಮಾಡಬಹುದು. ಟ್ರಿಬ್ಯುನಲ್‌ನಲ್ಲಿ ವಕ್ಫ್ ಭೂಮಿ ಎಂದು ಅಂತಿಮಗೊಂಡರೆ ಮುಂದಕ್ಕೆ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ವಕ್ಫ್ ಕಾನೂನು ತಿದ್ದುಪಡಿಗೆ ಕೇಂದ್ರ ಸರಕಾರ ಮುಂದಾಗಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೂಚನೆಯಂತೆ ವಕ್ಫ್ ಕಾನೂನು ತಿದ್ದುಪಡಿ ಕುರಿತ ಜಂಟಿ ಸಂಸದೀಯ ಸಮಿತಿಯಲ್ಲಿ ಕಾಂಗ್ರೆಸ್ ಸದಸ್ಯರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದೇ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಗೂ ಸಚಿವ ಝಮೀರ್ ಅಹ್ಮದ್ ಅವರು ರೈತರ ಭೂಮಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿವರ್ತನೆ ಮಾಡುತ್ತಿದ್ದಾರೆ ಎಂದರು.

ಬಡ ಮುಸ್ಲಿಮರ ಶಿಕ್ಷಣ ಸೇರಿದಂತ ಇತರ ಉದ್ದೇಶಕ್ಕೆ ಮೀಸಲಿಟ್ಟ 59 ಸಾವಿರ ಎಕರೆ ಭೂಮಿಯಲ್ಲಿ 27 ಸಾವಿರ ಎಕರೆ ಭೂಮಿಯನ್ನು ಮುಸ್ಲಿಂ ಮುಖಂಡರೇ ಶಾಮೀಲಾಗಿ ಅವರ ಸಮುದಾಯಕ್ಕೆ, ಅಲ್ಲಾಹುವಿಗೆ ದ್ರೋಹವೆಸಗಿದ್ದಾರೆ. ವಕ್ಫ್ ಆಸ್ತಿ ರಕ್ಷಿಸಲು ಅನ್ವರ್ ಮಾಣಿಪ್ಪಾಡಿ ವರದಿ ಜಾರಿಗೊಳಿಸಬೇಕು. ವಕ್ಫ್ ಕಾನೂನಿಗೆ ಕೇಂದ್ರ ಸರಕಾರ ತಿದ್ದುಪಡಿ ತರ ಲಿದ್ದು, ರೈತರ, ಹಿಂದುಗಳ ಜಾಗ ಉಳಿಸಲು ಬದ್ಧವಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಪ್ರತಿಯೊಂದು ಹಗರಣದಲ್ಲೂ ಆರೋಪ ಸಾಬೀತಾಗಿದ್ದು, ಭೂಮಿ, ನೋಟಿಸು ವಾಪಸ್ ಮಾಡಿದ ಕೂಡಲೇ ಹಗರಣ ಮುಕ್ತವಾಗುವುದಿಲ್ಲ ಎಂದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರಿನಲ್ಲಿ ಕೆಲ ಮಸೀದಿ ಅಂಗಡಿಗಳ ಬಾಡಿಗೆ ಹಣ ದುರುಪಯೋಗ ಆಗುತ್ತಿದೆ ಎಂಬ ಬಗ್ಗೆ ಮುಸಲ್ಮಾನರಿಂದಲೇ ನನಗೆ ದೂರು ಬಂದಿದೆ. ಈಗ ರೈತರ ಜಮೀನನ್ನು ವಕ್ಫ್ ಇಲಾಖೆ ವಶಪಡಿ ಸಿಕೊಂಡಿದೆ. ಬಿಜೆಪಿ ಹೋರಾಟದ ಫಲವಾಗಿ ನೋಟಿಸ್ ಹಿಂಪಡೆಯುವ ಭರವಸೆ ಸರಕಾರದಿಂದ ದೊರೆತಿದೆ. ಕಾಂಗ್ರೆಸ್ ಭೂಮಿ ದರೋಡೆಕೋರತನದ ಬಗ್ಗೆ ಜನರು ಜಾಗೃತಗೊಂಡು ಪ್ರಶ್ನಿಸಬೇಕಿದೆ ಎಂದರು.

ಶಾಸಕ ಭರತ್ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಎಲ್ಲ ಹಿಂದುಗಳು ತಮ್ಮ ಜಮೀನಿನ ಆರ್‌ಟಿಸಿ ಪರಿಶೀಲನೆ ಮಾಡಬೇಕಾದ ಭಯದ ವಾತಾವರಣ ಸೃಷ್ಟಿಯಾಗಿದೆ. ಇಸ್ಲಾಂ ಹುಟ್ಟುವುದಕ್ಕೆ ಮುಂಚೆಯೇ ಇದ್ದಂತಹ ಸಾವಿರಾರು ವರ್ಷಗಳ ಹಿಂದಿನ ದೇವಸ್ಥಾನಗಳ ಆಸ್ತಿ ಕೂಡಾ ವಕ್ಫ್ ಆಸ್ತಿಯಾಗಿ ಪರಿವರ್ತನೆ ಆಗಿದೆ. ಈ ರೀತಿ ಭೂ ಪರಿವರ್ತನೆ ಮಾಡುವ, ನೋಟಿಸ್ ನೀಡುವ ಅಧಿಕಾರಿಗಳಿಗೂ ಆತ್ಮಸಾಕ್ಷಿ ಬೇಕಿದೆ ಎಂದರು.


Spread the love