Home Mangalorean News Kannada News ರಾಜ್ಯದ “ಅನಿಲಭಾಗ್ಯ” ಕೇಂದ್ರಕ್ಕೆ ತಲೆನೋವು – ಯು.ಟಿ.ಖಾದರ್, ಧರ್ಮೇಂದ್ರ ಪ್ರಧಾನ್ ಮಧ್ಯೆ ಚರ್ಚೆ

ರಾಜ್ಯದ “ಅನಿಲಭಾಗ್ಯ” ಕೇಂದ್ರಕ್ಕೆ ತಲೆನೋವು – ಯು.ಟಿ.ಖಾದರ್, ಧರ್ಮೇಂದ್ರ ಪ್ರಧಾನ್ ಮಧ್ಯೆ ಚರ್ಚೆ

Spread the love

ರಾಜ್ಯದ “ಅನಿಲಭಾಗ್ಯ” ಕೇಂದ್ರಕ್ಕೆ ತಲೆನೋವು – ಯು.ಟಿ.ಖಾದರ್, ಧರ್ಮೇಂದ್ರ ಪ್ರಧಾನ್ ಮಧ್ಯೆ ಚರ್ಚೆ

ಮಂಗಳೂರು: ರಾಜ್ಯದ ಸಿದ್ದರಾಮಯ್ಯ ಸರಕಾರ ಹೊರತಂದ ಜನಪ್ರಿಯ ಅನಿಲಭಾಗ್ಯ ಯೋಜನೆ ಕೇಂದ್ರ ಸರಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಮಂಗಳವಾರ ದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರದಾನ್ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಮಧ್ಯೆ ಬಿಸಿಬಿಸಿ ಚರ್ಚೆ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಆಸಕ್ತಿ ಮತ್ತು ಮುತುವರ್ಜಿಯಿಂದ ಪ್ರಾರಂಭವಾದ “ಅನಿಲ ಭಾಗ್ಯ” ಯೋಜನೆಯಲ್ಲಿ ಬಡಜನತೆಗೆ ಉಚಿತ ಸಿಲಿಂಡರ್, ಸ್ಟೌ, ಕನೆಕ್ಟರ್, ಲೈಟರ್ ಎಲ್ಲವೂ ನೀಡುವುದಲ್ಲದೆ ಎರಡು ಬಾರಿ ಉಚಿತವಾಗಿ ಅನಿಲ ರೀಫಿಲ್ ಮಾಡಿ ಕೊಡಲಾಗುತ್ತದೆ. ಇದರ ಸಂಪೂರ್ಣ ಅನುದಾನ ರಾಜ್ಯ ಸರಕಾರದ್ದಾಗಿದೆ. ಈ ಯೋಜನೆಯಿಂದಾಗಿ ಕರ್ನಾಟಕದಲ್ಲಿ ಕೇಂದ್ರ ಸರಕಾರದ ಪ್ರದಾನ ಮಂತ್ರಿ ಉಜ್ವಲ ಯೋಜನೆ ಮಂಕಾಗಿದೆ.

ಈ ಕುರಿತು ಚರ್ಚೆ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್, ಅನಿಲಭಾಗ್ಯ ಯೋಜನೆ ಉತ್ತಮವಾದುದು. ಕರ್ನಾಟಕ ರಾಜ್ಯದ ಆಹಾರ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ. ಅಕ್ಕಿ, ಸೀಮೆ ಎಣ್ಣೆ ಮತ್ತಿತರ ಸಾಮಾಗ್ರಿಗಳ ಸೋರಿಕೆಯನ್ನು ತಡೆಗಟ್ಟಿರುವುದನ್ನು ನಾನು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿ ಕರ್ನಾಟಕ ಮಾದರಿ ತರಲು ಇತರ ರಾಜ್ಯಕ್ಕೆ ತಿಳಿಹೇಳಿದ್ದೇನೆ. ನೀವು ಮಾಡಿರುವ ಅನಿಲಭಾಗ್ಯ ಯೋಜನೆ ಉತ್ತಮವಾಗಿದೆ. ಆ ಯೋಜನೆಗೆ ರಾಜ್ಯದ ಹಣವಾದರೂ ಅದಕ್ಕೆ ಕೇಂದ್ರದ ಹೆಸರನ್ನೂ ಸೇರ್ಪಡೆ ಮಾಡಬೇಕು ಹಾಗೂ ಎರಡು ಬಾರಿ ಉಚಿತ ರೀಫಿಲ್ ಗ್ಯಾಸ್ ನೀಡುವುದನ್ನು ನಿಲ್ಲಿಸಬೇಕು. ಇದಾಗದಿದ್ದಲ್ಲಿ ಕೇಂದ್ರದಿಂದ ಅನಿಲ ನೀಡುವುದನ್ನು ನಿಲ್ಲಿಸುತ್ತೇವೆ ಎಂದು ಯು.ಟಿ.ಖಾದರ್ ಅವರಿಗೆ ಧರ್ಮೇಂದ್ರ ಪ್ರದಾನ್ ಸೂಚಿಸಿದರು. ಇದಕ್ಕುತ್ತರಿಸಿದ ಯು.ಟಿ.ಖಾದರ್ ರಾಜ್ಯ ಸರಕಾರದ ಸಂಪೂರ್ಣ ನೂರು ಶೇಕಡಾ ಅನುದಾನದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯರ ಕನಸಿನಂತೆ ಅನಿಲಭಾಗ್ಯ ಯೋಜನೆ ನಡೆಯುತ್ತಿದೆ. ಕೇಂದ್ರದ ಯಾವುದೇ ಅನುದಾನ ಈ ಯೋಜನೆಗೆ ಪಡೆಯುತ್ತಿಲ್ಲ. ಅನಿಲ ಕೇಂದ್ರ ಉತ್ಪಾದನೆ ಮಾಡುವುದಾದರೂ ಅದಕ್ಕೆ ಹಣ ನೀಡಲಾಗುತ್ತಿದೆ ಎಂದು ಹೇಳಿದರು.

ಇದನ್ನೊಪ್ಪದ ಕೇಂದ್ರ ಸಚಿವ ಪ್ರದಾನ್ ಕೇಂದ್ರದ ಹೆಸರು ನಮೂದಿಸದಿದ್ದರೆ ಅನಿಲ ನೀಡುವುದನ್ನು ಸ್ಥಗಿತಗೊಳಿಸಲಾಗುವುದೆಂದರು. ಈ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರ ನಡುವೆ ವಾಗ್ವಾದ ನಡೆಯಿತು. ಕೇಂದ್ರ ಈ ಧೋರಣೆ ಅನುಸರಿಸಿದರೆ ಬಡವರಿಗೆ ತೊಂದರೆಯಾಗಬಹುದು ಎಂದು ಯು.ಟಿ.ಖಾದರ್ ಎಚ್ಚರಿಸಿದರು. ಕೊನೆಯ ಹಂತದವರೆಗೂ ಸಮಸ್ಯೆ ಬಗೆಹರಿಯದಿದ್ದಾಗ ಯು.ಟಿ.ಖಾದರ್ ಅವರು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಮಾಲೋಚಿಸುವುದಾಗಿ ತಿಳಿಸಿದರು. ಸಚಿವಧ್ವಯರ ಮಹತ್ವದ ಸಭೆ ಯಾವುದೇ ನಿರ್ಣಯ ಕೈಗೊಳ್ಳದೆ ಗೊಂದಲದಲ್ಲೇ ಕೊನೆಗೊಂಡಿತು.

ಈ ಸಂದರ್ಭ ಕರ್ನಾಟಕ ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಪಾಂಡೆ, ಕೇಂದ್ರ ಪೆಟ್ರೋಲಿಯಂ ಇಲಾಖೆಯ ಜತೆ ಕಾರ್ಯದರ್ಶಿ ಅಶುತೋಷ್ ಜಿಂದಾಲ್, ಕೇಂದ್ರ ಎಲ್ಪಿಜಿ ಇಲಾಖೆಯ ನಿರ್ದೇಶಕ ಮಹೇಶ್, ರಾಜ್ಯ ಆಯಿಲ್ ಕಂಪೆನಿ ಕೋ ಆರ್ಡಿನೇಟರ್ ವರದ ಆಚಾರ್ಯ ಹಾಗೂ ಅಭಿಜಿತ್ ಬೇ ಉಪಸ್ಥಿತರಿದ್ದರು. ಆಹಾರ ಸಚಿವ ಯು.ಟಿ.ಖಾದರ್ ಅವರು ಈ ಸಂದರ್ಭ ರಾಜ್ಯ ಆಯಿಲ್ ಕಂಪೆನಿಯ ಕೋ ಆರ್ಡಿನೇಟರ್ ವರದ ಆಚಾರ್ಯರನ್ನು ತರಾಟೆಗೆ ತೆಗೆದುಕೊಂಡು, ರಾಜ್ಯ ಅನಿಲ ಯೋಜನೆಯ ಬಗ್ಗೆ ಕೇಂದ್ರಕ್ಕೆ ತಪ್ಪು ಮಾಹಿತಿ ನೀಡಿದ್ದೀರಿ. ಅದನ್ನು ನೀವೇ ಸರಿಪಡಿಸಿ ರಾಜ್ಯಕ್ಕೆ ಬನ್ನಿ ಎಂದರು.

ಮೀನುಗಾರರಿಗೆ ಸೀಮೆ ಎಣ್ಣೆ ಕೊಡಿ

ಸೀಮೆ ಎಣ್ಣೆ ರಾಜ್ಯ ಉತ್ಪಾದಿಸುತ್ತಿಲ್ಲ. ಕೇಂದ್ರ ಉತ್ಪಾದಿಸುತ್ತಿದೆ. ಕರಾವಳಿಯ ಬಡ ಮೀನುಗಾರರಿಗೆ ಉಚಿತ ಸೀಮೆ ಎಣ್ಣೆ ಒದಗಿಸುವಂತೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರದಾನ್ ಅವರನ್ನು ಆಹಾರ ಸಚಿವ ಯು.ಟಿ.ಖಾದರ್ ಒತ್ತಾಯಿಸಿದರು. ತಕ್ಷಣ ಅಧಿಕಾರಿಗಳನ್ನು ಕರೆಸಿದ ಧರ್ಮೇಂದ್ರ ಪ್ರದಾನ್ ಈ ಬಗ್ಗೆ ವರದಿ ನೀಡುವಂತೆ ಹಾಗೂ ಮಂಗಳೂರಿಗೆ ತೆರಳಿ ಸಮೀಕ್ಷೆ ನಡೆಸುವಂತೆ ಆದೇಶಿಸಿದರು. ಸಮೀಕ್ಷೆ ನಡೆಸುವಾಗ ದೊಡ್ಡ ದೊಡ್ಡ ಬೋಟುಗಳ ಮೀನುಗಾರರನ್ನು ಮಾತ್ರ ಸಂಪರ್ಕಿಸದೆ ಸಣ್ಣ ಸಣ್ಣ ಮೀನುಗಾರರಲ್ಲೂ ಅವಲೋಕನ ಮಾಡಬೇಕೆಂದು ಸಚಿವ ಯು.ಟಿ.ಖಾದರ್ ಒತ್ತಾಯಿಸಿದರು.


Spread the love

Exit mobile version