ರಾಜ್ಯಮಟ್ಟದ ಚದುರಂಗ ಸ್ಪರ್ಧೆ ಉದ್ಘಾಟನೆ

Spread the love

ರಾಜ್ಯಮಟ್ಟದ ಚದುರಂಗ ಸ್ಪರ್ಧೆ ಉದ್ಘಾಟನೆ

ಮಂಗಳೂರು : 2017-18 ನೇ ಸಾಲಿನ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯ ಉದ್ಘಾಟನಾ ಸಮಾರಂಭವು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್‍ನ ಸಭಾಂಗಣದಲ್ಲಿ ಇಂದು ನಡೆಯಿತು.

ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹಾಗೂ ಆಹಾರ ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ರವರು ಚದುರಂಗ ಆಟ ಆಡುವ ಮೂಲಕ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ರಮಾನಾಥ ರೈ, ಚದುರಂಗ ಎನ್ನುವುದು ಬುದ್ಧಿಗೆ ಕಸರತ್ತು ನೀಡುವ ಬುದ್ಧಿಜೀವಿಗಳ ಸ್ಪರ್ಧೆಯಾಗಿದೆ, ವಿಶ್ವದಲ್ಲೆಲ್ಲಾ ಚದುರಂಗವು ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಹೋದಿದ್ದು, ಇಡೀ ವಿಶ್ವಕ್ಕೆ ಚದುರಂಗ ಆಟಗಾರರನ್ನು ನೀಡಿದ ದೇಶ ಭಾರತ ಎಂದು ಹೇಳಿ ಕ್ರಿಡಾಳುಗಳಿಗೆ ಶುಭ ಹಾರೈಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಧ ಯು.ಟಿ .ಖಾದರ್ ಮಾತನಾಡಿ ಚದುರಂಗವು ರಾಜಕೀಯದ ಆಟವಿದ್ದಂತೆ. ಅದಕ್ಕೆ ತಾಳ್ಮೆ ಮತ್ತು ಸಹನೆ ಮುಖ್ಯವಾಗಿದ್ದು ಕ್ರೀಡೆಗೆ ಹೆತ್ತವರ ಪ್ರೋತ್ಸಾಹ ಅಗತ್ಯವಾಗಿದೆ. ಅಲ್ಲದೇ ತಾನು ಕಲಿತ ಶಿಕ್ಷಣ ಸಂಸ್ಥೆಯು ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಗೆ ಪೂರಕವಾದ ವಾತಾವರವನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.

ಚದುರಂಗ ಸ್ಪರ್ಧೆಯು 3 ದಿನಗಳ ಕಾಲ ನಡೆಯಲಿದ್ದು ಇದರಲ್ಲಿ 34 ಶೈಕ್ಷಣಿಕ ಜಿಲ್ಲೆಯ ಒಟ್ಟು 600 ಮಂದಿ ಸ್ಪರ್ಧಾಳುಗಳು ಹಾಗೂ 120 ಮಂದಿ ತಂಡದ ನಿರ್ವಾಹಕರು ಭಾಗವಹಿಸಲಿದ್ದಾರೆ. ಈ ಸ್ಫರ್ಧೆಯು 14 ಮತ್ತು 17 ರ ವಯೋಮಾನದ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ 4 ಹಂತದಲ್ಲಿ ನಡೆಯಲಿದೆ. ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾಗುವ 20 ಮಂದಿ ಕ್ರೀಡಾಳುಗಳು ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವರು. ಸ್ಫರ್ಧೆಗೆ ರಾಷ್ಟ್ರಮಟ್ಟದ ಅನುಭವಿ ತೀರ್ಪುಗಾರರನ್ನು ನೇಮಕ ಮಾಡಲಾಗಿದೆ.

ಸಮಾರಂಭದಲ್ಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆಗೈದ ಸಂತ ಆಲೋಶಿಯಸ್ ಶಿಕ್ಚಣ ಸಂಸ್ಥೆಯ ಹೆಮ್ಮೆಯ 6 ವಿದ್ಯಾರ್ಥಿಗಳಾದ ವಿಯಾನಿ ಆಂಟನಿಯೋ ಡಿ ಕುನ್ಹ ( ಅಂತರಾಷ್ಟ್ರೀಯ ಚೆಸ್ ಆಟಗಾರ ), ಆಶ್ಲೇ ಡಿ ಸೋಜ ( ವೈಟ್ ಲಿಪ್ಟಿಂಗ್), ಪ್ರಸಾದ ಶೆಟ್ಟಿ ( ಅಂತರಾಷ್ಟ್ರೀಯ ದೇಹದಾಢ್ರ್ಯ ಪಟು), ಕರಣ್ ಗೊಲ್ಲಕೇರಿ ( ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ), ಮನೋಹರ ಎಂ ಪ್ರಭು ( ರಾಷ್ಟ್ರೀಯ ಈಜುಗಾರ) ಅನಿಕೇತ್ ಡಿಸೋಜ ( ರಾಷ್ಟ್ರೀಯ ಈಜುಗಾರ) ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾಧ ಜೆ.ಆರ್ ಲೋಬೋ, ವಹಿಸಿದ್ದರು, ಮುಖ್ಯ ಅತಿಥಿಗಳಾಗಿ, ಸಂತ ಆಲೋಶಿಯಸ್ ಶಿಕ್ಷಣ ಸಂಸ್ಥೆಯ ರೆಕ್ಟರ್‍ರಾದ ರೆ|ಫಾ| ಡೈನೀಷಿಯಸ ವಾಸ್, ಸಂಚಾಲಕರಾಧ ಎರಿಕ ಮಥಾಯಸ್, ಫಿಲೋಮಿನಾ ಲೂವಿಸ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ರಘುನಾಥ, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ದಿವಾಕರ್ ಶೆಟ್ಟಿ, ಸಂತ ಆಲೋಶಿಯಸ್ ಕಾಲೇಜು ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಕರಾದ ಲೋಯ್ ನೂರೊನ್ಹಾ,ಹಾಗೂ ಹರೀಶ್. ದ,ಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವೈ ಶಿವರಾಮಯ್ಯ ,ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಮಂಜುಳ ಕೆ. ಎಲ್. ಮತ್ತಿತರರು ಉಪಸ್ಥಿತರಿದ್ದರು .


Spread the love