ರಾಜ್ಯ ಮಟ್ಟದ ಅತ್ಯುತ್ತಮ ಘಟಕ ಪ್ರಶಸ್ತಿ ಪಡೆದ ಎನ್. ಎಸ್. ಯು. ಐ. ಉಡುಪಿ ಜಿಲ್ಲಾ ಘಟಕ
ಉಡುಪಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ವಿದ್ಯಾರ್ಥಿ ಸಂಘಟನೆಯಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ ಎಸ್ ಯು ಐ) ಇದರ ವತಿಯಿಂದ ಕರ್ನಾಟಕದಲ್ಲಿ ಅತ್ಯುತ್ತಮ ಸಾಧನೆ ತೋರಿದ 6 ಜಿಲ್ಲಾ ಘಟಕಗಳಿಗೆ ಮಾರ್ಚ್ 14 ರಂದು ಬೆಂಗಳೂರಿನ ಶೀರೂರ್ ಪಾರ್ಕಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಾಯಿತು.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬೆಹತರ್ ಭಾರತ್ ವಿದ್ಯಾರ್ಥಿ ಪ್ರಣಾಳಿಕೆ ಆಂದೋಲನದ ನೊಂದಣಿಯಲ್ಲಿ ಉಡುಪಿ ಜಿಲ್ಲೆಯು ಮೂರನೇ ಸ್ಥಾನವನ್ನು ಪಡೆದಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದಿದೆ.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎನ್ ಎಸ್ ಯು ಐ ರಾಷ್ಟ್ರೀಯ ಅಧ್ಯಕ್ಷ ನೀರಜ್ ಕುಂದನ್, ರಾಜ್ಯ ಉಸ್ತುವಾರಿ ಸುರಭಿ ದ್ವಿವೇಧಿ, ರಾಜ್ಯಾಧ್ಯಕ್ಷ ಮಂಜುನಾಥ ಎಸ್, ರಾಷ್ಟ್ರೀಯ ಕಾರ್ಯದರ್ಶಿ ಶದಾಬ್ ಖಾನ್ ಅವರುಗಳು ಉಪಸ್ಥಿತರಿದ್ದರು.
ಪ್ರಶಸ್ತಿ ವಿತರಣಾ ಸಮಾರಂಭದ ಬಳಿಕ ಎಲ್ಲಾ ಜಿಲ್ಲೆಗಳ ಎನ್ ಎಸ್ ಯು ಐ ಪದಾಧಿಕಾರಿಗಳಿಗೆ ಮತ್ತು ರಾಜ್ಯ ಪದಾಧಿಕಾರಿಗಳಿಗೆ ಲೋಕಸಭಾ ಚುನಾವಣೆ ಸಂಬಂಧಿಸಿದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಎನ್ ಎಸ್ ಯು ಐ ಉಡುಪಿ ಜಿಲ್ಲಾ ಘಟಕ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡಿದ್ದು ವಿದ್ಯಾರ್ಥಿ ಸಮುದಾಯದ ಕುರಿತು ಸಮಸ್ಯೆಗಳಿಗೆ ಸದಾ ದನಿ ಎತ್ತಿದೆ. ಜಿಲ್ಲಾ ಘಟಕದ ವತಯಿಂದ ಎಲ್ಲಾ ಧಾರ್ಮಿಕ ಹಬ್ಬಗಳನ್ನು ಅನಾಥರೊಂದಿಗೆ ಮತ್ತು ಅಶಕ್ತರೊಂದಿಗೆ ಆಚರಿಸಿ ಎಲ್ಲರಿಗೂ ಮಾದರಿ ಎನಿಸಕೊಂಡಿದೆ. ಅಲ್ಲದೆ ನನ್ನ ಕರ್ನಾಟಕ, ಬೆಹತರ್ ಭಾರತ್ ಕಾರ್ಯಕ್ರಮ, ಮಾದಕ ವ್ಯಸನ ವಿರೋಧಿ ಅಭಿಯಾನಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಜಿಲ್ಲೆಯಲ್ಲಿ ಸಕ್ರಿಯ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ.