ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ ; ಕರಾವಳಿಯಿಂದ ಹಾಲಾಡಿ, ಸುನೀಲ್ ಕುಮಾರ್ ಹೊಸ ಸಚಿವರ ಪಟ್ಟಿಯಲ್ಲಿ ಪಡೆಯುತ್ತಾರಾ ಸ್ಥಾನ?
ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ ನಡೆಸಲು ಬಿಜೆಪಿ ವರಿಷ್ಟರು ಮುಂದಾಗಿದ್ದಾರೆ ಎನ್ನಲಾಗಿದ್ದು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಸಚಿವರನ್ನು ಕೈಬಿಟ್ಟು, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ವರಿಷ್ಠರು ಆಲೋಚಿಸಿದ್ದಾರೆ.
ಈಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಡಿಸಿಎಂ ಅಶ್ವಥ್ ನಾರಾಯಣ್, ಕೆ.ಎಸ್.ಈಶ್ವರಪ್ಪ, ,ಜಗದೀಶ್ ಶೆಟ್ಟರ್, ಸಿ.ಸಿ.ಪಾಟೀಲ್, ಕೋಟಾ ಶ್ರೀನಿವಾಸ ಪೂಜಾರಿ, ಶೆಶಿಕಲಾ ಜೊಲ್ಲೆ ಅವರುಗಳಿಗೆ ಕೊಕ್ ಕೊಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾರ್ಕಳದ ಸುನೀಲ್ ಕುಮಾರ್, ಮುರುಗೇಶ್ ನಿರಾಣಿಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ .
ಇತ್ತಿಚೆಗೆ ಬಹಳ ವಿವಾದಕ್ಕೆ ಗುರಿಯಾಗಿರುವ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಡಾ.ಸುಧಾಕರ್, ಡಿಸಿಎಂ ಲಕ್ಷ್ಮಣ ಸವದಿ, ಆರ್.ಅಶೋಕ್, ಸುರೇಶ್ ಕುಮಾರ್, ಸೇರಿದಂತೆ ಕೆಲವು ಸಚಿವರ ಖಾತೆಗಳು ಬದಲಾವಣೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಶಾಸಕ ಸ್ಥಾನ ತ್ಯಾಗ ಮಾಡಿ ನಂತರ ಚುನಾವಣೆಯಲ್ಲಿ ಸೋತಿರುವ ಎಚ್. ವಿಶ್ವನಾಥ್, ಹೊಸಕೋಟೆಯ ಮಾಜಿ ಶಾಸಕ ಎಂಟಿಬಿ ನಾಗರಾಜ್ ಅವರಿಗೂ ಸಂಪುಟದಲ್ಲಿ ಅವಕಾಶ ಮಾಡಿಕೊಡಲು ತೀರ್ಮಾನ ಮಾಡಲಾಗಿದೆ. ಅದಕ್ಕೆ ಮೊದಲು ಅವರುಗಳನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕಿದ್ದು. ವರಿಷ್ಟರು ಇತ್ತ ಕಡೆ ಸಹ ಗಮನ ಹರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಕೊರೋನಾ ಸೋಂಕು ಒಂದು ಹಂತಕ್ಕೆ ಬಂದು ಆರ್ಭಟ ಕಡಿಮೆಯಾಗುತ್ತಿದ್ದಂತೆಯೆ ಎಲ್ಲಿ ಸಚಿವ ಪದವಿ ಹೋಗಿ ಮಾಜಿಗಳಾಗಿ ಬಿಡುತ್ತೇವೋ ಎಂಬ ಅಳುಕು ಹಲವು ಸಚಿವರನ್ನು ಈಗಿನಿಂದಲೇ ಕಾಡಲಾರಂಭಿಸಿದೆ.
ಇನ್ನೂ ಕೆಲವು ಸಚಿವರ ಕಾರ್ಯಕ್ಷಮತೆ ಆಧರಿಸಿ ಖಾತೆ ಬದಲಾವಣೆ ಮಾಡಲಾಗುವುದು ಎಂದೂ ಸಹ ಬಿಜೆಪಿ ಮೂಲಗಳು ಹೇಳಿವೆ.
ಉತ್ತಮವಾಗಿ ಕೆಲಸ ನಿರ್ವಹಿಸಿದವರಿಗೆ ಉತ್ತಮ ಖಾತೆ. ಈವರೆಗೆ ತಮ್ಮ ಕೆಲಸದಲ್ಲಿ ಕಳಪೆ ನಿರ್ವಹಣೆ ಮಾಡಿರುವ ಸಚಿವರಿಗೆ ಕೋಕ್ ನೀಡಲಿದ್ದು, ಹೊಸಬರಿಗೆ ಸಂಪುಟದಲ್ಲಿ ಆದ್ಯತೆ ನೀಡಲು ಅಲೋಚನೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಆ
ರಂಭದಲ್ಲಿ ಸಚಿವರು ಚೆನ್ನಾಗಿ ಕೆಲಸ ಮಾಡಿದರೂ ನಂತರ ಉತ್ಸಾಹ ಕಳೆದುಕೊಂಡು ಕಾಲ ಹರಣ ಮಾಡುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ಕೆಲವು ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷದ ಸಂಘಟನೆ ಜವಾಬ್ದಾರಿ ನೀಡುವ ಸಾಧ್ಯತೆಯೂ ಬಹಳವಾಗಿದೆ ಎಂದು ಹೇಳಲಾಗಿದೆ.
ಆಪರೇಷನ್ ಕಮಲದಿಂದ ಸರ್ಕಾರ ರಚನೆಗೆ ಸಾಥ್ ಕೊಟ್ಟವರಿಗೆ ಮೊದಲ ಆದ್ಯತೆ ಜೊತೆಗೆ ಬಿಜೆಪಿಯ 8 ರಿಂದ 10 ಹೊಸ ಶಾಸಕರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಬಿಸಿ, ಬಿಸಿ ಚರ್ಚೆ ನಡೆಯುತ್ತಿದೆ.
ವಿಧಾನ ಪರಿಷತ್ ಚುನಾವಣೆ, ನಾಮ ನಿರ್ದೇಶನ ಬಳಿಕ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಕೇಂದ್ರದ ಬಿಜೆಪಿ ವರಿಷ್ಠರು ಕೈಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡಪ್ರಭ