Home Mangalorean News Kannada News ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ ವಿಶೇಷ ಕಾರ್ಯಕ್ರಮಗಳು

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ ವಿಶೇಷ ಕಾರ್ಯಕ್ರಮಗಳು

Spread the love

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ ವಿಶೇಷ ಕಾರ್ಯಕ್ರಮಗಳು

ವಿಶೇಷ ಶ್ರಮದಾನ: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ ನಾಲ್ಕನೇ ಹಂತದ ಕೊನೆಯ ವಾರದಲ್ಲಿ ವಿಶೇಷ ಶ್ರಮದಾನವನ್ನು ಮಾರ್ನಮಿಕಟ್ಟೆ ಹಾಗೂ ಮಂಗಳಾದೇವಿ ಪರಿಸರದಲ್ಲಿ ಹಮ್ಮಿಕೊಳ್ಳಲಾಯಿತು. 22-7-2018, ರವಿವಾರ ಬೆಳಿಗ್ಗೆÉ 7:30ಕ್ಕೆ ಸುಮಾರು 10 ಗಂಟೆಯ ತನಕ ಕಾರ್ಯಕರ್ತರಿಂದ ವಿಶೇಷ ಶ್ರಮದಾನ ನಡೆಯಿತು. ಮಾರ್ನಮಿಕಟ್ಟೆಯ ಬಳಿಯಿರುವ ರೈಲು ಸೇತುವೆಯ ಬಳಿಯಿದ್ದ ಕಸ ಹಾಕುವ ಕಾಂಕ್ರೀಟ್ ತೊಟ್ಟಿ ಹಾಗೂ ಅದರ ಸುತ್ತಮುತ್ತಲಿನ ಜಾಗೆಗಳನ್ನು ಶುಚಿಗೊಳಿಸಲಾಯಿತು. ಮೊದಲಿಗೆ ಸಿಮೆಂಟಿನಿಂದ ಮಾಡಿದ್ದ ಕಸದ ತೊಟ್ಟಿಯನ್ನು ಕಿತ್ತುತೆಗೆದು ಅದರ ಪಕ್ಕದಲ್ಲಿ ನಿಷ್ಪ್ರಯೋಜಕವಾಗಿ ಪಾಳುಬಿದ್ದಿದ್ದ ಪುಟ್ಟ ಅಂಗಡಿಯನ್ನು ತೆರವುಗೊಳಿಸಲಾಯಿತು. ಅನಂತರ ಆ ಸ್ಥಳವನ್ನು ಜೆಸಿಬಿ ಬಳಸಿಕೊಂಡು ಸಮತಟ್ಟು ಮಾಡಲಾಯಿತು. ಇದೀಗ ಅಲ್ಲಿ ಯಾರೂ ಕಸ ಹಾಕದಂತೆ ಹೂಗಿಡಗಳನ್ನು ಇಡಲಾಗಿದೆ. ಮುಂದಿನ ವಾರದಲ್ಲಿ ಮತ್ತಷ್ಟು ಶ್ರಮದಾನ ಮಾಡಿ ಆ ಇಡೀ ಜಾಗವನ್ನು ಸುಂದರೀಕರಣಗೊಳಿಸಲು ನಿರ್ಧರಿಸಲಾಯಿತು. ಜೊತೆಗೆ ಕಾರ್ಯಕರ್ತರು ಮಂಗಳಾದೇವಿ ರಥಬೀದಿಯಲ್ಲಿ ಸ್ವಚ್ಛತಾ ಕೈಂಕರ್ಯ ನಡೆಸಿದರು. ಅಲ್ಲ್ಲಿರುವ ಮನೆಮನೆಗೆ ತೆರಳಿ ಜಾಗೃತಿ ಕಾರ್ಯ ನಡೆಸಿದರು. ಹಿರಿಯರಾದ ಪುಣೆಯ ಚಂದ್ರಕಾಂತ ಕುಲಕರ್ಣಿ, ಸುರೇಶ್ ಶೆಟ್ಟಿ, ಕಮಲಾಕ್ಷ ಪೈ, ವಿಠಲದಾಸ್ ಪ್ರಭು, ಅನಿರುದ್ಧ ನಾಯಕ್ ಮತ್ತಿತರ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಶ್ರಮದಾನದ ಬಳಿಕ ರಾಮಕೃಷ್ಣ ಮಠದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಸ್ವಚ್ಛತಾ ದರ್ಶನ – ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮ: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಯುಕ್ತ ನಾಲ್ಕನೇ ಹಂತದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಮನಸ್ಸು ಅಭಿಯಾನದ ಐದನೇ ಕಾರ್ಯಕ್ರಮ ಸ್ವಚ್ಛತಾ ದರ್ಶನ ಸುಮಾರು 100 ಪ್ರೌಢಶಾಲೆಗಳಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳ ಮನೋಪರಿವರ್ತನೆ, ಆಲೋಚನೆ ಹಾಗೂ ಕ್ರಿಯಾತ್ಮಕ ಪ್ರತಿಕ್ರಿಯೆ ಆಧರಿಸಿ ನೂರು ಅಂಕಗಳ ಉತ್ತರ ಪತ್ರಿಕೆ ಸಹಿತ ಪ್ರಶ್ನೆ ಪತ್ರಿಕೆಗಳನ್ನು ನೀಡÀಲಾಗಿತ್ತು. ಮಂಗಳೂರು, ಪುತ್ತೂರು, ಬಂಟ್ವಾಳ ತಾಲೂಕಿನ ಸುಮಾರು ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸುಮಾರು ಅರವತ್ತು ಜನ ಸಂಪನ್ಮೂಲ ವ್ಯಕ್ತಿಗಳು ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಸ್ವಚ್ಛತೆಯ ಮಾಹಿತಿ ಹಾಗೂ ಈ ವಿಶೇಷ ಪರೀಕ್ಷೆಯ ಔಚಿತ್ಯ ತಿಳಿಸಿದರು. ಈಗಾಗಲೇ ಮೌಲ್ಯಮಾಪನ ಆರಂಭವಾಗಿದ್ದು, ಮುಂದಿನ ವಾರದಲ್ಲಿ ಅತ್ತ್ಯುತ್ತಮವಾಗಿ ಉತ್ತರಿಸಿದವರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸ್ವಚ್ಛ ಮನಸ್ಸು ಮುಖ್ಯ ಸಂಯೋಜಕ ರಂಜನ್ ಬೆಳ್ಳರಪಾಡಿ, ಶ್ರೀ ಗುರುಪ್ರಸಾದ್ ಮತ್ತು ಕು. ಕಾಂಚನಾ ಅವರ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ಸಂಯೋಜನೆ ಮಾಡಿದರು.

ಕುಡಿಯುವ ನೀರಿನ ಘಟಕಗಳ ವಿತರಣೆ: ಸ್ವಚ್ಛತಾ ಅಭಿಯಾನದ ಪ್ರಯುಕ್ತ ಸುಮಾರು ಹತ್ತು ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಯಿತು. ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆಯನ್ನು ಮನಗಂಡು ಹಾಗೂ ಶಾಲೆಗಳ ವಿನಂತಿಯನ್ನು ಪರಿಗಣಿಸಿ ಈ ಘಟಕಗಳನ್ನು ನೀಡಲಾಗಿದೆ. ಸರಕಾರಿ ಪ್ರೌಢಶಾಲೆ ರಥಬೀದಿ, ಸರಕಾರಿ ಪ್ರೌಡಶಾಲೆ ಬಲ್ಮಠ, ಮದನಿ ಪ್ರೌಢಶಾಲೆ ಉಳ್ಳಾಲ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಾಮಂಜೂರು, ಸ್ವಾಮಿ ಸದಾನಂದ ಸರಸ್ವತಿ ಪ್ರೌಢಶಾಲೆ ನಂತೂರು ಪದವು, ಸರಕಾರಿ ಪ್ರೌಢಶಾಲೆ ಮೂಡುಶೆಡ್ಡೆ, ಭಗಿನಿ ಸಮಾಜ ಜೆಪ್ಪು, ಹಿರಿಯ ಪ್ರಾಥಮಿಕ ಶಾಲೆ ಬದ್ರಿಯಾ ನಗರ ಮಲ್ಲೂರು ಇತ್ಯಾದಿ ಶಾಲೆಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಲೆಗಳಲ್ಲಿ ಅಳವಡಿಸಲಾಗುವುದು. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ಗ್ರಾಮ ಪಂಚಾಯತ್‍ಗಳಲ್ಲಿಯೂ ಈ ಘಟಕಗಳನ್ನು ಅಳವಡಿಸಲಾಗುತ್ತಿದೆ. ಕಾರ್ಯಕರ್ತರಾದ ಸಚಿನ ಶೆಟ್ಟಿ ನಲ್ಲೂರು ಹಾಗೂ ಅಭಿಷೇಕ ವಿ ಎಸ್ ವಿತರಣ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಸ್ವಚ್ಛತೆಗಾಗಿ ಜಾದೂ: ಸ್ವಚ್ಛತೆಯ ಕುರಿತಂತೆ ಜನಮಾನಸದಲ್ಲಿ ಜಾಗೃತಿಯನ್ನುಂಟು ಮಾಡಲು ರಾಮಕೃಷ್ಣ ಮಿಷನ್ ಅನೇಕಾನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸ್ವಚ್ಛತೆಗಾಗಿ ಜಾದೂ ಎಂಬು ಕಾರ್ಯಕ್ರಮದ ಪ್ರದರ್ಶನಗಳನ್ನು ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು 100 ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಖ್ಯಾತ ಜಾದೂಗಾರ ಶ್ರೀ ಕುದ್ರೋಳಿ ಗಣೇಶ್ ಮತ್ತು ಬಳಗದಿಂದ ಕಳೆದ ನಲವತ್ತು ದಿನಗಳಿಂದ ಈ ಅಭಿಯಾನ ನಡೆಯುತ್ತಿದೆ. ಇಲ್ಲಿಯತನಕ 56 ಶಾಲೆಗಳಲ್ಲಿ ಸ್ವಚ್ಛತೆಗಾಗಿ ಜಾದೂ ಪ್ರದರ್ಶನ ಯಶಸ್ವಿಯಾಗಿ ಜರುಗಿದೆ. ಮನರಂಜನೆ ಹಾಗೂ ಸ್ವಚ್ಛತೆಯ ಕುರಿತು ಮಕ್ಕಳಲ್ಲಿ ಅರಿವನ್ನುಂಟು ಮಾಡಲು ಈ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ನವನೀತ ಶೆಟ್ಟಿ ಜಾದೂ ಪ್ರದರ್ಶನಗಳನ್ನು ಸಂಯೋಜನೆ ಮಾಡಿದರು.

ಸ್ವಾಮಿ ಚಿದಂಬರಾನಂದ (ಪ್ರಧಾನ ಸಂಚಾಲಕ)
ಸ್ವಾಮಿ ಏಕಗಮ್ಯಾನಂದ, ಸಂಚಾಲಕ, ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿüಯಾನ
ಸಂಪರ್ಕ – 9448353162


Spread the love

Exit mobile version