ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 33 ನೇ ವಾರದ ಅಭಿಯಾನ
ಮಂಗಳೂರು: ರಾಮಕೃಷ್ಣ ಮಿಷನ್ ವತಿಯಿಂದ ನಡೆಯುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 33 ನೇ ವಾರದಲ್ಲಿ ಭಾನುವಾರ ಜರುಗಿದ 382 ರಿಂದ 390 ಸ್ವಚ್ಛತಾ ಕಾರ್ಯಕ್ರಮಗಳ ವರದಿ
382) ಜೈಲ್ ರಸ್ತೆ: ಸುಬ್ರಮಣ್ಯ ಸಭಾ ಬಳಗದಿಂದ ಕೆನರಾ ಕಾಲೇಜು ರಸ್ತೆ, ಜೈಲ್ ರಸ್ತೆ ಹಾಗೂ ಪಶು ಚಿಕಿತ್ಸಾಲಯದ ಮಾರ್ಗಗಳ ಸ್ವಚ್ಛತಾ ಕಾರ್ಯ ನಡೆಯಿತು.ಸಿ ಎಸ್ ಭಂಡಾರಿ ಹಾಗೂ ಶ್ರೀ ಪ್ರಶಾಂತ ಉಬರಂಗಳ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆನರಾ ಕಾಲೇಜಿನ ಎದುರು ರಸ್ತೆಯ ಬದಿಗಳನ್ನು ಸ್ವಚ್ಛಗೊಳಿಸಿದ ಬಳಿಕ ಅಲ್ಲಿದ್ದ ಹಳೆಯ ಬ್ಯಾನರ್, ಪೋಸ್ಟರ್‍ಗಳನ್ನು ತೆರವುಗೊಳಿಸಲಾಯಿತು. ನಂತರ ಕಾರಾಗೃಹದ ಹೊರಾವರಣದ ತೋಡುಗಳಲ್ಲಿದ್ದ ತ್ಯಾಜ್ಯರಾಶಿಯನ್ನು ತೆಗೆದು ಶುಚಿ ಮಾಡಲಾಯಿತು. ಅಲ್ಲಿಂದ ಸಿ.ಜಿ ಕಾಮತ್ ರಸ್ತೆ, ಕರಂಗಲಪಾಡಿಗೆ ಸಾಗುವ ಮಾರ್ಗಗಳನ್ನು ಸ್ವಚ್ಛಗೊಳಿಸಲಾಯಿತು. ಶ್ರೀಕಾಂತ ರಾವ್ ಕಾರ್ಯಕ್ರಮವನ್ನು ಸಂಯೋಜಿಸಿದರು.
383) ಬಿಜೈ: ಮಂಗಳೂರಿನ ಹಿರಿಯ ನಾಗರಿಕರಿಂದ ಸ್ವಚ್ಛತಾ ಅಭಿಯಾನ ಜರುಗಿತು. ಶ್ರೀ ಕೇಶವ ರಾವ್ ಹಾಗೂ ಶ್ರೀ ರಮೇಶ್ ರಾವ್ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತ ಹಾಗೂ ಬಿಜೈ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಕಸ ಗುಡಿಸಿ ಹಸನು ಮಾಡಲಾಯಿತು. ಅಲ್ಲದೇ ಬಿಜೈ ನಲ್ಲಿರುವ ಭಾರತ ಮಾಲ್ ಎದುರಿಗಿರುವ ಬಸ್ ತಂಗುದಾಣದ ನೆಲ ಸಮತಟ್ಟಾಗಿರಲಿಲ್ಲ. ಇದರಿಂದ ಪ್ರಯಾಣಿಕರು ಪ್ರಯಾಸ ಪಡುವಂತಾಗಿತ್ತು. ಇದನ್ನಿಂದು ಹಿರಿಯ ನಾಗರಿಕರ ತಂಡದ ಸದಸ್ಯರು ಶ್ರೀ ರಾಮಕುಮಾರ್ ಬೇಕಲ್ ಸಹಕಾರದಿಂದ ಹಾಗೂ ನುರಿತ ಗಾರೆಯವರ ಮೂಲಕ ಸಮತಟ್ಟು ಮಾಡಿಸಿದರು. ಮುಂದಿನ ದಿನಗಳಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡುವ ಯೋಜನೆ ಹಾಕಿಕೊಳ್ಳಲಾಯಿತು. ಶ್ರೀ ರಮೇಶ್ ಶೆಟ್ಟಿಗಾರ್, ಶ್ರೀಕೃಷ್ಣ ಶೆಟ್ಟಿ ಸೇರಿದಂತೆ ಅನೇಕರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
384) ಕೊಟ್ಟಾರ ಚೌಕಿ: ಕುಮಾರ್ ಜಿಮ್ ಫ್ರೆಂಡ್ಸ್ ಸದಸ್ಯರಿಂದ ಪ್ಲೈ ಓವರ್ ಕೆಳಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೇಲ್ಸೇತುವೆಯ ಕೆಳಭಾಗದಲ್ಲಿರುವ ಅಲ್ಲಲ್ಲಿ ಹರಡಿಕೊಂಡಿದ್ದ ಬೀದಿಬದಿಯ ಅಂಗಡಿಮುಂಗಟ್ಟುಗಳು ನಗರದ ಸೌಂದರ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತಿದ್ದವು. ಇದನ್ನಿಂದು ಅಲ್ಲಿಯ ಸ್ಥಳೀಯರು ಒಂದೆಡೆ ಮಾಡಿ ಅಲ್ಲಿನ ಪರಿಸರವನ್ನು ಶುಚಿಗೊಳಿಸಿ ಜವಾಬ್ದಾರಿ ಮೆರೆದರು. ಕಂಬಗಳಿಗೆ ಅಂಟಿಸಿದ್ದ ಭಿತ್ತಿಪತ್ರಗಳನ್ನು ಕಿತ್ತುಹಾಕಲಾಯಿತು. ಶ್ರೀ ಧನ್ವೀರ್, ಶ್ರೀ ದೀಪೇಶ್ ಕುಮಾರ್, ಶ್ರೀ ಸಂತೋಷ ಸೇರಿದಂತೆ ಕುಮಾರ್ ಜಿಮ್‍ನ ಹಲವು ಯುವಕರು ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿದರು. ಶ್ರೀ ಕಿರಣಕುಮಾರ ಸ್ವಚ್ಛತಾ ಕಾರ್ಯದ ನೇತೃತ್ವ ವಹಿಸಿದ್ದರು.
285) ಕದ್ರಿ ಪಾರ್ಕ್ ರಸ್ತೆ: ದಕ್ಷಿಣ ಕನ್ನಡ ಹವ್ಯಕ ಸಭಾದ ಆಶ್ರಯದಲ್ಲಿ ಜೋಗಿಮಠದ ಮಾರ್ಗ ಹಾಗೂ ಕದ್ರಿ ಪಾರ್ಕ್ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಶ್ರೀಮತಿ ಲಕ್ಷ್ಮೀ ಪ್ರಸಾದ ಹಾಗೂ ಶ್ರೀಮತಿ ಶೈಲಜಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಥಮದಲ್ಲಿ ಮಾರ್ಗಗಳನ್ನು ಸ್ವಚ್ಛ ಮಾಡಲಾಯಿತು. ನಂತರ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಬಾಟಲ್, ಪ್ಲಾಸ್ಟಿಕ್ ಹೆಕ್ಕಿ ತೆಗೆಯಲಾಯಿತು. ಶ್ರೀ ವೇಣುಗೋಪಾಲ್ ಮಾಂಬಾಡಿ ಕಾರ್ಯಕ್ರಮವನ್ನು ಸಂಯೋಜಿಸಿದರು.
386) ಮಂಗಳಾ ನಗರ: ಭಗಿನಿ ಸಮಾಜದ ಸದಸ್ಯರು ಹಾಗೂ ವಿದ್ಯಾರ್ಥಿಗಳು ಮಂಗಳಾನಗರದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದರು. ಶ್ರಿಮತಿ ಮಮತಾ ಹಾಗೂ ಜ್ಯೋತಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಸ್ವಚತೆಯ ಜೊತೆಗೆ ಜಾಗೃತಿ ಕಾರ್ಯಕ್ರಮವನ್ನೂ ನಡೆಸಲಾಯಿತು. ಶ್ರೀಮತಿ ಉಷಾ ಹಾಗೂ ಸಂಗಡಿಗರು ಮುಳಿಹಿತ್ಲು, ಜೆಪ್ಪು ಪ್ರದೇಶದಲ್ಲಿರುವ ಮನೆಮನೆಗಳಿಗೆ ತೆರಳಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲು ಪ್ರಯತ್ನಿಸಿದರು. ಶ್ರಿಮತಿ ರತ್ನ ಆಳ್ವ ಸಂಯೋಜಿಸಿದರು.
387) ಬೋಳಾರ: ನಿವೇದಿತಾ ಬಳಗದವರಿಂದ ಬೋಳಾರದಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪೂರ್ವ ಮನಪಾ ಸದಸ್ಯ ಶ್ರೀ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಮಿಷನ್ ಕಾಂಪೌಂಡ್, ಬೋಳಾರ ಶಾಲೆಯ ಎದುರು ರಸ್ತೆ ಹಾಗೂ ಮಾರಿಗುಡಿ ರಸ್ತೆಯಲ್ಲಿನ ಹಲವು ಮನೆಗಳಿಗೆ ತೆರಳಿ ಪರಿಸರ ಸ್ವಚ್ಛತೆಯ ಮಹತ್ವವನ್ನು ತಿಳಿಹೇಳಲಾಯಿತು. ಅಲ್ಲದೇ ಅಲ್ಲಲ್ಲಿ ಮೂಲೆಗಳಲ್ಲಿ ಕಸವನ್ನು ಬಿಸಾಡುತ್ತಿದ್ದವರನ್ನು ಕಂಡುಹಿಡಿದು, ಅಂತೋನಿ ವೇಸ್ಟ್ ಮ್ಯಾನೇಜಮೆಂಟ್ ಕರೆಯಿಸಿ ಸಮಸ್ಯೆಯನ್ನು ಬಗೆ ಹರಿಸಲು ಪ್ರಯತ್ನಿಸಲಾಯಿತು.
388) ಪಾಂಡೇಶ್ವರ: ಶ್ರೀರಾಮ್ ಟ್ರಾನ್ಸಪೋರ್ಟ್ ಫೈನಾನ್ಸ್ ಸಿಬ್ಬಂದಿಯಿಂದ ಪಾಂಡೇಶ್ವರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಅಗ್ನಿಶಾಮಕ ಪೋಲಿಸ್ ಠಾಣೆಯಿಂದ ಆರ್ ಟಿ ಓ ವೃತ್ತದ ತನಕ ಮಾರ್ಗಗಳನ್ನು ಶುಚಿಗೊಳಿಸಲಾಯಿತು. ಹಾಗೇ ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹೆಕ್ಕಲಾಯಿತು ಶ್ರೀ ಸುದರ್ಶನ್ ಕಾರ್ಯಕ್ರಮವನ್ನು ಸಂಯೋಜಿಸಿದರು.
389) ಗಾಂಧಿ ನಗರ: ಆರ್ಟ್ ಆಫ್ ಲಿವಿಂಗ್ ಕಾರ್ಯಕರ್ತರು ಗಾಂಧಿ ನಗರದ ಪ್ರಾರ್ಥಮಿಕ ಶಾಲಾ ವಠಾರದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದರು. ಶಾಲೆಯ ಒಳಾವರಣ, ಅಲ್ಲಿನ ಪಾರ್ಕು ಹಾಗೂ ಶಾಲೆಯ ಸುತ್ತಮುತ್ತ ಸ್ವಚ್ಛ ಮಾಡಲಾಯಿತು. ಅಲ್ಲದೇ ಅಲ್ಲಲ್ಲಿ ಬಿದ್ದಿದ್ದ ನೂರಾರು ಗಾಜಿನ ಬಾಟಲ್ ಗಳನ್ನು ತೆಗೆದು ಶುಚಿಗೊಳಿಸಲಾಯಿತು. ಶ್ರೀಮತಿ ರೇಣುಕಾ ಶೆಟ್ಟಿ, ಶ್ರೀ ಗಣೇಶ್, ಅಕ್ಷಯ ಸೇರಿದಂತೆ ಹಲವರು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಶ್ರೀ ಸದಾಶಿವ ಕಾಮತ್ ಅಭಿಯಾನವನ್ನು ಸಂಯೋಜಿಸಿದರು.
390)‘ಸ್ವಚ್ಛ ಮೇರ್ಲಪದವು’ ಸಮಾರೋಪ: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ಹತ್ತು ತಿಂಗಳಿಂದ ಆಯೋಜಿಸಿಕೊಂಡು ಬಂದಂತಹ ಸ್ವಚ್ಚತಾ ಅಭಿಯಾನದ ಸಮಾರೋಪ ಸಮಾರಂಭ ಮಂಗಳೂರು ರಾಮಕೃಷ್ಣ ಮಿಷನ್ನಿನಲ್ಲಿ ಜರುಗಿತು. ಈ ಸರಳ ಸಮಾರೋಪದಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು. ವಿದ್ಯಾರ್ಥಿ ನಾಯಕ ಅಭಿಷೇಕ್ ವಿ ಎಸ್, ನಲ್ಲೂರ ಸಚಿನ್ ಶೆಟ್ಟಿ, ಜಡಿಯಪ್ಪ, ಚೈತ್ರಾ ಹಾಗೂ ಅನುಷಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಭಿಯಾನದ ಮುಖ್ಯ ಸಂಯೋಜಕ ಶ್ರೀ ಉಮಾನಾಥ್ ಕೋಟೆಕಾರ್ ಧನ್ಯವಾದ ಸಲ್ಲಿಸಿದರು.