ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ಪೃಥ್ವಿ ದಿನಾಚರಣೆ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ಪೃಥ್ವಿ ದಿನಾಚರಣೆ

ಮಂಗಳೂರು: ದಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಂಗಳೂರು ವಕೀಲರ ಸಂಘದ ಸಹಯೋಗದಲ್ಲಿ ಪೃಥ್ವಿದಿನದ ಪ್ರಯುಕ್ತ ಏಪ್ರಿಲ್ 23, ಭಾನುವಾರದಂದು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಆ ಪ್ರಯುಕ್ತ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಸತ್ರ ನ್ಯಾಯಲಯದ ಮುಖ್ಯ ನ್ಯಾಯಧೀಶರಾದ ಕೆ ಎಸ್ ಬೀಳಗಿ, ರಾಮಕೃಷ್ಣ ಮಿಷನ್ನಿನ ಸ್ವಾಮಿ ಧರ್ಮವ್ರತಾನಂದಜಿ, ವಕೀಲರ ಸಂಘದ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಲತಾ ಯು ಕೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಸ್ವಾಮಿ ಧರ್ಮವ್ರತಾನಂದಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. “ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಇದು ಯಾರದ್ದೋ ಕೆಲಸ ಅನ್ನುವ ಉದಾಸೀನತೆ ಹೋಗಬೇಕು. ಸ್ವಚ್ಛತೆಯ ಜಾಗೃತಿ ಪ್ರತಿಯೊಬ್ಬನಲ್ಲಿ ಒಡಮೂಡಿದಾಗ ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗುತ್ತದೆ” ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ನ್ಯಾಯಾಧೀಶರಾದ ಕೆ ಎಸ್ ಬೀಳಗಿ ಮಾತನಾಡಿ “ಸ್ವಚ್ಛತಾ ಅಭಿಯಾನ ಪ್ರತಿ ಮನೆಮನೆಯಲ್ಲಿ ನಡೆಯಬೇಕು. ಬಹಿರಂಗ ಶುದ್ಧಿಗೆ ಅಂತರಂಗ ಶುದ್ಧಿ ಅತೀ ಅವಶ್ಯವಾಗಿದೆ. ನನ್ನ ಮನೆ ಮಾತ್ರ ಸ್ವಚ್ಛವಾಗಿರಲಿ ಎನ್ನುವ ಮನೋಭಾವ ಬದಲಾಗಿ ನಾವು ವಾಸಿಸುವ ಪರಿಸರ ಶುದ್ಧವಾಗಿರಬೇಕೆಂಬ ಮನಸ್ಥಿತಿ ನಮ್ಮಲ್ಲಿ ಬಂದಾಗ ಈ ಅಭಿಯಾನ ಯಶಸ್ವಿಯಾಗುತ್ತದೆ. ಮಂಗಳೂರು ನಗರ ಸ್ಮಾರ್ಟ್ ಸಿಟಿಯಾಗಿದೆ, ಜೊತೆಗೆ ಇಲ್ಲಿನ ಜನರ ಮನಸ್ಥಿತಿಯೂ ಸ್ಮಾರ್ಟ್ ಆದಾಗ ಅದು ಪರಿಪೂರ್ಣವಾಗುತ್ತದೆ.” ಎಂದು ತಿಳಿಸಿದರು. ಹಿರಿಯ ನ್ಯಾಯಾಧೀಶರಾದ ಶ್ರೀಮಲ್ಲನಗೌಡ ಸ್ವಾಗತಿಸಿದರು. ಶ್ರೀ ದಿನಕರ ಶೆಟ್ಟಿ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಸುಮಾರು ಎರಡು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸುಮಾರು ಇನ್ನೂರು ಜನರ ತಂಡವನ್ನು ಮೂರು ಗುಂಪುಗಳಾಗಿ ವಿಭಾಗಿಸಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಪಿವಿಎಸ್ ನಿಂದ ನ್ಯಾಯಾಲಕ್ಕೆ ಹೋಗುವ ರಸ್ತೆ, ಪಿವಿಎಸ್ ನಿಂದ ಕರಂಗಲಪಾಡಿ ರಸ್ತೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಾಣಿಜ್ಯ ಸಂಕೀರ್ಣದ ಸುತ್ತಮುತ್ತ ಸ್ವಚ್ಛ ಮಾಡಲಾಯಿತು. ಹಿರಿಯ ನ್ಯಾಯಾಧೀಶರಾದ ಶ್ರೀ ಸಿ ಎಂ ಜೋಶಿ, ಶ್ರೀಮತಿ ಪುಷ್ಪಾಂಜಲಿ ದೇವಿ ಸೇರಿದಂತೆ ಸುಮಾರು 20 ಜನ ನ್ಯಾಯಾಧೀಶರು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಮುಖ್ಯ ನ್ಯಾಯಾಧೀಶರಾದ ಶ್ರೀ ಕೆ ಎಸ್ ಬೀಳಗಿಯವರು ಸ್ವಚ್ಛತಾ ಕಾರ್ಯಕ್ರಮದ ಕೊನೆಯವರೆಗೂ ಇದ್ದು ಉಸ್ತುವಾರಿ ನೋಡಿಕೊಂಡರು. ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕ ಶ್ರೀ ಉಮಾನಾಥ್ ಕೋಟೆಕಾರ್ ಹಾಗೂ ಶ್ರೀ ದಿಲ್ ರಾಜ್ ಆಳ್ವ ಕಾರ್ಯಕ್ರಮವನ್ನು ಸಂಯೋಜಿಸಿದರು.


Spread the love