ರಾಮಕೃಷ್ಣ ಮಿಷನ್ 14ನೇ ಭಾನುವಾರದ ಸ್ವಚ್ಛತಾ ಅಭಿಯಾನ
ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 4ನೇ ಹಂತದ 14ನೇ ವಾರದ ಸ್ವಚ್ಛತಾ ಕಾರ್ಯಕ್ರಮವನ್ನು ದಿನಾಂಕ 4-2-2018 ಭಾನುವಾರ ಮೋರ್ಗನ್ಸ್ ಗೇಟ್, ಮಹಾಕಾಳಿಪಡ್ಪುವಿನಲ್ಲಿ ಹಮ್ಮಿಕೊಳ್ಳಲಾಯಿತು. ಬೆಳಿಗ್ಗೆ 7-30ಕ್ಕೆ ರಾಗತರಂಗ ಸಂಸ್ಥೆಯ ಮುಖ್ಯಸ್ಥರಾದ ಸದಾನಂದ ಉಪಾಧ್ಯಾಯ ಹಾಗೂ ಸೀತಾರಾಮ್ ಎ ಜಂಟಿಯಾಗಿ ಅಭಿಯಾನವನ್ನು ಶುಭಾರಂಭಗೊಳಿಸಿದರು. ಈ ಸಂದರ್ಭದಲ್ಲಿ ಕೆ ವಿ ಪ್ರಸಾದ್, ಪಿ ಎನ್ ಭಟ್, ಸುರೇಶ್ ಶೆಟ್ಟಿ, ಲೆಕ್ಕಪರಿಶೋಧಕ ಕೆ. ಶಿವಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶ್ರಮದಾನ: ಸುಮಾರು 250 ಜನ ಕಾರ್ಯಕರ್ತರು ಆರು ಗುಂಪುಗಳಾಗಿ ವಿಂಗಡಿಸಿಕೊಂಡು ಮಹಾಕಾಳಿಪಡ್ಪು ರೈಲ್ವೆ ಕ್ರಾಸಿಂಗ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶ್ರಮದಾನ ಕೈಗೊಂಡರು. ಸಂತ ಅಲೋಸಿಯಸ್ ಕಾಲೇಜಿನ ಸಹಾಯ ಬಳಗದ ವಿದ್ಯಾರ್ಥಿಗಳು ಪ್ರಾಧ್ಯಾಪಕ ಡಾ. ಈಶ್ವರ್ ಭಟ್ ನೇತೃತ್ವದಲ್ಲಿ ರೈಲ್ವೆ ಕ್ರಾಸಿಂಗ್ ನಿಂದ ಮೋರ್ಗನ್ಸ್ ಗೇಟ್ ಮುಖ್ಯರಸ್ತೆಯ ವರೆಗಿನ ರಸ್ತೆ, ತೋಡುಗಳನ್ನು ಸ್ವಚ್ಛಗೊಳಿಸಿದರೆ ಶೇಷಪ್ಪ ಅಮೀನ್ ಮಾರ್ಗದರ್ಶನದಲ್ಲಿ ಒಂದಷ್ಟು ವಿದ್ಯಾರ್ಥಿಗಳು ಮಹಾಕಾಳಿ ಪಡ್ಪುವಿನಿಂದ ಹೆದ್ದಾರಿಯತ್ತ ಸಾಗುವ ರಸ್ತೆಯಲ್ಲಿ ಸ್ವಚ್ಛತೆಯನ್ನು ನಡೆಸಿದರು. ಸ್ವಚ್ಛ ಮಂಗಳೂರು ಕಾರ್ಯಕರ್ತರು ರೈಲ್ವೇ ಕ್ರಾಸಿಂಗ್ ನಾಲ್ಕು ಬದಿಗಳಲ್ಲಿ ಸೇರಿಕೊಂಡಿದ್ದ ಹುಲ್ಲು ಕಸ ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ಎರಡು ಟಿಪ್ಪರಗಳಷ್ಟು ತ್ಯಾಜ್ಯವನ್ನು ಹೆಕ್ಕಿ ಶುಚಿಗೊಳಿಸಿದರು. ದಿನೇಶ್ ಕರ್ಕೇರಾ ಹಾಗೂ ವಿಠಲದಾಸ ಪ್ರಭು ಜೆಸಿಬಿ ಉಪಯೋಗಿಸಿಕೊಂಡು ರಸ್ತೆಯಲ್ಲಿ ಸೇರಿದ್ದ ಲೋಡಗಟ್ಟಲೆ ಮಣ್ಣನ್ನು ತೆಗೆದು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಆಂಟನಿ ವೇಸ್ಟ್ ಕಾರ್ಮಿಕರು ಈ ಬಾರಿಯ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಕಾರ್ಯಕರ್ತರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.
ಮಾರ್ಗವಿಭಾಜಕ ಅಳವಡಿಕೆ: ಪ್ರತಿನಿತ್ಯ ಸುಮಾರು ಐವತ್ತಕ್ಕೂ ಅಧಿಕ ಬಾರಿ ಗೇಟ್ ಹಾಕಲಾಗುವ ಮಹಾಕಾಳಿಪಡ್ಪು ರೈಲ್ವೇ ಕ್ರಾಸಿಂಗ್ ನಲ್ಲಿ ಪ್ರಯಾಣಿಕರ ವಾಹನಗಳ ಅವ್ಯವಸ್ಥಿತ ಸಾಲು, ಅದರಿಂದ ಉಂಟಾಗುವ ವಾದ-ವಿವಾದಗಳು, ಜೊತೆಗೆ ಸ್ಥಳಿಯರ ಸಮಸ್ಯೆಗಳನ್ನು ಕಂಡು ದಿಲ್ರಾಜ ಆಳ್ವ ಹಾಗೂ ಸ್ವಚ್ಛ ಮಂಗಳೂರು ಕಾರ್ಯಕರ್ತರು ಅಲ್ಲಿ ಹೋಗಿ ಸರ್ವೆ ನಡೆಸಿದರು. ಜೊತೆಗೆ ಸ್ಥಳಿಯರೊಂದಿಗೆ ಸಂವಾದ ನಡೆಸಿ ಈ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರ ನೀಡಬೇಕೆಂದು ಉದ್ದೇಶಿಸಲಾಯಿತು. ಇಂದು ಅಲ್ಲಲ್ಲಿ ಸುಮಾರು ಇಪ್ಪತ್ತು ಕಬ್ಬಿಣದ ರಾಡ್ಗಳನ್ನು ರಸ್ತೆಗೆ ಡ್ರಿಲ್ ಮಾಡಿ ಅಳವಡಿಸಲಾಯಿತು. ಕಾರ್ಯಕರ್ತರಾದ ಸಂದೀಪ್ ಕೋಡಿಕಲ್, ಸುಭೋದಯ ಆಳ್ವï, ಸುಜಿತ್ ಪ್ರತಾಪ್, ಅಕ್ಷಿತ್ ಅತ್ತಾವರ ಹಾಗೂ ಸ್ಥಳಿಯರ ಸಹಾಯದಿಂದ ಈ ಕಾರ್ಯವನ್ನು ನೆರವೇರಿಸಲಾಯಿತು. ಮುಂದಿನ ದಿನಗಳಲ್ಲಿ ರೈಲ್ವೆ ಕ್ರಾಸಿಂಗ್ ನಲ್ಲಿ ವ್ಯವಸ್ಥಿತವಾಗಿ ಸಾಲುಗಳಲ್ಲಿ ನಿಲ್ಲುವ ಕುರಿತಂತೆ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸುವ ಕುರಿತಂತೆ ಜಾಗೃತಿಯನ್ನುಂಟು ಮಾಡಲು ಜಾಗೃತಿ ಸಪ್ತಾಹವನ್ನು ಹಮ್ಮಿಕೊಳ್ಳಲು ಯೋಜಿಸಲಾಯಿತು.
ಬಸ್ ತಂಗುದಾಣದ ಶುಚಿತ್ವ : ಜಪ್ಪಿನಮೊಗರುವಿನಲ್ಲಿನ ಹೆದ್ದಾರಿ ಪಕ್ಕದ ಬಸ್ ತಂಗುದಾಣವನ್ನು ಇಂದು ಸ್ವಚ್ಛಗೊಳಿಸಲಾಯಿತು. ಮುಖೇಶ್ ಆಳ್ವ , ಆನಂದ ಅಡ್ಯಾರ್ ಹಾಗೂ ಹಲವು ಕಾರ್ಯಕರ್ತರು ಬಸ್ ತಂಗುದಾಣಕ್ಕೆ ಅಂಟಿಸಿದ್ದ ಭಿತ್ತಿಚಿತ್ರ ಹಾಗೂ ಪೆÇೀಸ್ಟರ್ ಕಿತ್ತುಹಾಕಿದರು. ನಂತರ ಗೂಡಿಸಿ, ನೀರಿನಿಂದ ತೊಳೆದು, ಸುಣ್ಣ ಬಣ್ಣ ಹಚ್ಚಿ ಸುಂದರಗೊಳಿಸಿದರು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕರಾದ ಅರುಣಾ ಕಲ್ಕೂರ್, ಸೋನಾಲ್ ಡಿಸೋಜಾ, ಫೆಲಿಸಿಯಾ ಮಾರ್ಟಿಜ್, ಸಾಮಾಜಿಕ ಕಾರ್ಯಕರ್ತ ಸೌರಜ್, ವಿಶಿಷ್ಟ ಚೇತನ ಶ್ರೀಜಗನ್, ಚೇತನಾ ಗಡಿಯಾರ್ ಸೇರಿದಂತೆ ಅನೇಕ ಆಸಕ್ತ ಯುವಕ ಯುವತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸ್ವಚ್ಛತಾ ಅಭಿಯಾನದ ತರುವಾಯ ಕಾರ್ಯಕರ್ತರಿಗೆ ಶ್ರೀಆದಿಮಹೇಶ್ವರಿ ದೇವಸ್ಥಾನದಲ್ಲಿ ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಅಭಿಯಾನಕ್ಕೆ ಎಂ ಆರ್ಪಿಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.
ನಿತ್ಯ ಜಾಗೃತಿ: ರಾಮಕೃಷ್ಣ ಮಿಷನ್ ವತಿಯಿಂದ ಮಂಗಳೂರು ನಗರ ಪ್ರದೇಶದಲ್ಲಿ ಸ್ವಚ್ಛತೆಯ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಕಳೆದ ಮೂರು ತಿಂಗಳಿಂದ ಪ್ರತಿನಿತ್ಯ ಸರಿಸುಮಾರು ನೂರು ಮನೆ ಹಾಗೂ ಅಂಗಡಿಗಳಿಗೆ ಭೇಟಿ ನೀಡಲಾಗುತ್ತಿದೆ. ಕಳೆದ ಜನವರಿ ತಿಂಗಳಲ್ಲಿ ಸುಮಾರು ಇಪ್ಪತ್ತು ಸ್ವಚ್ಛತಾ ತಂಡಗಳಿಂದ ಇಪ್ಪತ್ತು ಪ್ರದೇಶಗಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇಂದಿನ ವರೆಗೆ ಸುಮಾರು ಐದು ಸಾವಿರ ಮನೆಗಳನ್ನು ಸಂಪರ್ಕಿಸಲಾಯಿತು. ಸ್ವಚ್ಛತಾ ಅಭಿಯಾನದ ಮುಖ್ಯ ಸಂಯೋಜಕ ಉಮಾನಾಥ್ ಕೋಟೆಕಾರ್ ಜಾಗೃತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.