ರಾಮಕೃಷ್ಣ ಮಿಷನ್ 5ನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 4 ನೇ ಭಾನುವಾರದ ಶ್ರಮದಾನ
ಮಂಗಳೂರು : 5ನೇ ವರ್ಷದ ಸ್ವಚ್ಛ ಮಂಗಳೂರು ಅಭಿಯಾನದ 4 ನೇ ವಾರದ ಶ್ರಮದಾನ ಕುದ್ರೋಳಿ-ಅಳಕೆ ಪ್ರದೇಶದಲ್ಲಿ ಜರುಗಿತು. 30-12-2018 ಆದಿತ್ಯವಾರ ಬೆಳಿಗ್ಗೆ 7-30 ರಿಂದ 10 ಗಂಟೆಯ ತನಕ ಶ್ರಮದಾನ ಮಾಡಲಾಯಿತು. ಖ್ಯಾತ ವೈದ್ಯರಾದ ಡಾ ಜೀವರಾಜ್ ಸೊರಕೆ, ಆಡಳಿತ ನಿರ್ದೇಶಕರು ಎಸ್ ಸಿ ಎಸ್ ಆಸ್ಪತ್ರೆ ಮಂಗಳೂರು ಹಾಗೂ ಮಧುಚಂದ್ರ ಅಡ್ಯಂತಾಯ ಇವರುಗಳು ಶ್ರಮದಾನಕ್ಕೆ ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಾ ಜೀವರಾಜ್ ಸೊರಕೆ “ಸ್ವಚ್ಛತೆ ಎನ್ನುವುದು ಮೂಲಭೂತ ಅಗತ್ಯವಾಗಿದ್ದು ಪ್ರತಿಯೊಬ್ಬರೂ ಜೀವನದಲ್ಲಿ ವೈಯಕ್ತಿಕ ಹಾಗೂ ಸಾಮುದಾಯಿಕ ಸ್ವಚ್ಛತೆಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಈ ತೆರನಾದ ಶ್ರಮದಾನಗಳು ಸಾಮುದಾಯಿಕ ಸ್ವಚ್ಛತೆಯನ್ನು ಮೈಗೂಡಿಸಿಕೊಳ್ಳುವಲ್ಲಿ ಅತ್ಯಂತ ಸಹಾಯಕಾರಿ. ಇಂತಹ ಅಭಿಯಾನವನ್ನು ಸಂಘಟಿಸಿ ಜನರ ಮನಸ್ಸಿನಲ್ಲಿ ಸ್ವಚ್ಛತೆಯ ಪರಿಕಲ್ಪನೆಯನ್ನು ಬಿತ್ತುತ್ತಿರುವ ರಾಮಕೃಷ್ಣ ಮಿಷನ್ ಕಾರ್ಯ ಅತ್ಯಂತ ಶ್ರೇಷ್ಠ ಹಾಗೂ ವಿಶಿಷ್ಠವಾಗಿದೆ. ಇಂದು ಮಂಗಳೂರು ನಗರ ಸ್ವಚ್ಛತೆಯಲ್ಲಿ ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮುಂದೆ ಮಂಗಳೂರು ಸ್ವಚ್ಛತೆಯಲ್ಲಿ ನಂಬರ್ ಒನ್ ಆಗಲಿ ಎಂದು ಆಶಿಸುತ್ತೇನೆ” ಎಂದು ತಿಳಿಸಿದರು.
ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಸಂದೀಪ್ ಕೋಡಿಕಲ್, ಶುಭೋದಯ ಆಳ್ವ, ಉಮಾಕಾಂತ್ ಸುವರ್ಣ ಹಾಗೂ ಇನ್ನಿತರ ಸ್ವಯಂ ಸೇವಕರು ಹಾಜರಿದ್ದರು.
ಶುಚಿತ್ವ: ಅಳಕೆ ಸೇತುವೆ ಬಳಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕಾರ್ಯಕರ್ತರು ನಾಲ್ಕು ಗುಂಪುಗಳಾಗಿ ಸ್ವಚ್ಛತೆಯನ್ನು ಕೈಗೊಂಡರು. ಅಭಿಯಾನದ ಮುಖ್ಯ ಸಂಯೋಜಕ ಉಮಾನಾಥ್ ಕೋಟೆಕಾರ್ ನೇತೃತ್ವದಲ್ಲಿ ಮೊದಲ ತಂಡದಿಂದ ಕುದ್ರೋಳಿ ದೇವಸ್ಥಾನದ ದ್ವಾರದತ್ತ ಸಾಗುವ ಮಾರ್ಗಗಳನ್ನು ಹಾಗೂ ಕಾಲುದಾರಿಗಳನ್ನು ಸ್ವಚ್ಛ ಮಾಡಲಾಯಿತು. ಮತ್ತೊಂದು ಗುಂಪಿನ ಸ್ವಯಂಸೇವಕರು ಕಮಲಾಕ್ಷ ಪೈ ಮಾರ್ಗದರ್ಶನದಲ್ಲಿ ದೇವಸ್ಥಾನದ ದ್ವಾರದಿಂದ ಆರಂಭಿಸಿ ಮಣ್ಣಗುಡ್ಡೆಯತ್ತ ಸಾಗುವ ಮಾರ್ಗ ಹಾಗೂ ಬದಿಗಳನ್ನು ಶುಚಿ ಮಾಡಿದರು. ಇನ್ನೆರಡು ತಂಡಗಳು ಅಳಕೆ ಸೇತುವೆಯಿಂದ ಕಾರ್ ಸ್ಟ್ರೀಟ್‍ನತ್ತ ಹೋಗುವ ಮಾರ್ಗದ ಎರಡೂ ಬದಿಗಳನ್ನು ಗುಡಿಸಿದರು. ಜೊತೆಗೆ ತ್ಯಾಜ್ಯ ಬಿಸಾಡುತ್ತಿದ್ದ ಎರಡು ಸ್ಥಳಗಳಲ್ಲಿದ್ದ ಒಂದು ಟಿಪ್ಪರ್ ಕಸವನ್ನು ತೆಗೆದು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಅಲ್ಲಿ ಕಸ ಹಾಕದಂತೆ ಜನರ ಮನವೊಲಿಸಲು ಪ್ರಯತ್ನಿಸಲು ಯೋಜಿಸಲಾಯಿತು. ಮತ್ತೊಂದೆಡೆ ಬ್ರಹ್ಮಚಾರಿ ನಿಶ್ಚಯ್, ರಂಜನ್ ಬೆಳ್ಳರಪಾಡಿ, ಶ್ರೀವತ್ಸ್ ನೀರ್ಚಾಲು ಮತ್ತಿತರರು ಗೋಡೆಗಳಿಗೆ ಅಂಟಿಸಿದ್ದ ಪೆÇೀಸ್ಟರ್ ಗಳನ್ನು ಕಿತ್ತು ಬಣ್ಣ ಬಳಿದು ಸರಳ ಕಲಾಕೃತಿಗಳನ್ನು ರಚಿಸಿದರು.
ವಿಶೇಷ ಕಾರ್ಯ : ಅಳಕೆ ಸೇತುವೆ ಬಳಿಯಿರುವ ಬಂದರ್‍ನತ್ತ ಸಾಗುವ ರಸ್ತೆಯ ಎಡಬದಿಯಲ್ಲಿ ಅನೇಕ ವರ್ಷಗಳಿಂದ ಬಿದ್ದುಕೊಂಂಡಿದ್ದ ಬೃಹತ್ ಕಾಂಕ್ರೀಟ್ ಪೈಪುಗಳು ಹಾಗೂ ಅದರ ಅಡಿಯಲ್ಲಿ ಹಾಗೂ ಸುತ್ತಮುತ್ತ ಚೆಲ್ಲಿಕೊಂಡಿದ್ದ ಕಟ್ಟಡ ತ್ಯಾಜ್ಯ, ಹಸಿತ್ಯಾಜ್ಯ, ಕಲ್ಲುಮಣ್ಣುಗಳ ರಾಶಿ ದಾರಿಹೋಕರಿಗೆ ಅಸಹ್ಯ ಹುಟ್ಟಿಸುವಂತಾಗಿತ್ತು. ಜೊತೆಗೆ ದೊಡ್ಡ ಜಾಗೆಯನ್ನು ಆಕ್ರಮಿಸಿಕೊಂಡಿತ್ತು. ಈ ವಾರದ ಶ್ರಮದಾನದಲ್ಲಿ ಕಾರ್ಯಕರ್ತರು ಆ ಜಾಗೆಯನ್ನು ಗುರುತಿಸಿ ಸ್ವಚ್ಛ ಹಾಗೂ ಉಪಯೋಗಿ ತಾಣವನ್ನಾಗಿಸಲು ಪ್ರಯತ್ನಿಸಿದರು. ಮೊದಲಿಗೆ ಜೆಸಿಬಿ, ಟಿಪ್ಪರ್ ಬಳಸಿ ಕಲ್ಲು-ಮಣ್ಣುಗಳನ್ನು ತೆಗೆದು ಹಾಕಲಾಯಿತು. ನಂತರ ಕಾರ್ಯಕರ್ತರು ಬೃಹತ್ ಪೈಪುಗಳನ್ನು ಎತ್ತಿಟ್ಟು ಕಡಿಮೆ ಜಾಗೆಯಲ್ಲಿ ಜೋಡಿಸಿದರು. ತದನಂತರ ಆ ಜಾಗೆಯಲ್ಲಿದ್ದ ತ್ಯಾಜ್ಯವನ್ನು ತೆಗೆದು ಸ್ವಚ್ಛ ಮಾಡಿದರು. ಅಲ್ಲಿಗ ಹೂಕುಂಡಗಳನ್ನಿಟ್ಟು ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಲ್ಲಿ ಕಸಹಾಕದಂತೆ ಎಚ್ಚರ ವಹಿಸಿ, ಸ್ಥಳಿಯ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುವುದು. ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ್, ಸಾಮಾಜಿಕ ಕಾರ್ಯಕರ್ತ ಸೌರಜ್ ಮಂಗಳೂರು ಮುಂದಾಳತ್ವ ವಹಿಸಿದ್ದರು.
ನರೇಂದ್ರ ಶೆಣೈ, ಮೋಹನ್ ಭಟ್, ಕಿಶೋರ್ ಕುಮಾರ್, ದೀಕ್ಷಿತ್ ಡಿ ಜಿ, ಚೇತನಾ ಗಡಿಯಾರ್, ಸ್ವಾತಿ ಕಾಮತ್, ಅಶ್ವಿತಾ ಮೋಹನ್, ಸುಪ್ರಿತಾ ಬಾಳಿಗಾ, ಯೋಗಿಶ್ ಕಾಯರ್ತಡ್ಕ ಮತ್ತಿತರ ಕಾರ್ಯಕರ್ತರು ಶ್ರಮದಾನದಲ್ಲಿ ಸಕ್ರಿಯರಾಗಿ ಪಾಲ್ಗೊಂಡರು.
ಸ್ವಚ್ಛ ಗ್ರಾಮ ಅಭಿಯಾನ : ರಾಮಕೃಷ್ಣ ಮಿಶನ್ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಡೆಯುತ್ತಿರುವ ಸ್ವಚ್ಛ ಗ್ರಾಮ ಅಭಿಯಾನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ದಿನಾಂಕ 30-12-2018 ಭಾನುವಾರ ಬೆಳಿಗ್ಗೆ ಶ್ರಮದಾನ ಜರುಗಿತು. ಒಳಮೊಗ್ರು, ಇರ್ವತ್ತೂರು, ಜೋಕಟ್ಟೆ, ಪಡಪಣಂಬೂರು, ಮೈಂದಗುರಿ, ಅರಂತೋಡು, ಕೊಣಾಜೆ, ಮುನ್ನೂರು, ಮೇರ್ಲಪದವು ಸೇರಿದಂತೆ ಒಟ್ಟು ಮೂವತ್ತಕ್ಕೂ ಅಧಿಕ ಗ್ರಾಮಗಳಲ್ಲಿ ಸ್ವಚ್ಛತೆಗಾಗಿ ಶ್ರಮದಾನ ನಡೆಸಲಾಯಿತು. ಎಲ್ಲ ಕಾರ್ಯಕರ್ತರಿಗೆ ಉಪಾಹಾರದ ವ್ಯವಸ್ಥೆಯನ್ನು ಒದಗಿಸಲಾಯಿತು. ಈ ಸ್ವಚ್ಛತಾ ಅಭಿಯಾನಗಳಿಗೆ ಎಂ.ಆರ್.ಪಿ.ಎಲ್ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.