ರಾಮ ಮಂದಿರ ಟ್ರಸ್ಟಿಗೆ ಸದಸ್ಯರಾಗಿ ನೇಮಕ ದಕ್ಷಿಣ ಭಾರತಕ್ಕೆ ಸಂದ ಗೌರವ –ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ
ಉಡುಪಿ: ರಾಮ ಮಂದಿರ ಟ್ರಸ್ಟಿಗೆ ತಮ್ಮನ್ನು ಸದಸ್ಯರನ್ನಾಗಿ ನೇಮಿಸಿದ್ದು ದಕ್ಷಿಣ ಭಾರತಕ್ಕೇ ಸಂದ ಗೌರವ ಅಂತ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದ್ದಾರೆ.
ರಾಮಮಂದಿರ ಟ್ರಸ್ಟಿಗೆ ಸದಸ್ಯರಾಗಿ ನೇಮಕವಾದ ಬಳಿಕ ಪ್ರಥಮ ಬಾರಿಗೆ ಶುಕ್ರವಾರ ಉಡುಪಿಗೆ ಆಗಮಿಸಿದ ಸ್ವಾಮೀಜಿ ಮಾಧ್ಯಮಗಳೊಂದಿಗೆ ಮಾತನಾಡಿ ದಕ್ಷಿಣ ಭಾರತದಲ್ಲಿಯೇ ಒಬ್ಬರಿಗೆ ಅವಕಾಶ ಒದಗಿ ಬಂದಿದೆ. ಆ ವ್ಯಕ್ತಿ ನಾನು ಆಗಿರುವುದಕ್ಕೆ ಸಂತೋಷವಾಗುತ್ತಿದೆ. ಇದು ಗುರುಗಳ ಸೇವೆಗೆ ಸಂದ ಗೌರವ ಅಂತ ತಮ್ಮ ಗುರು ಪೇಜಾವರ ವಿಶ್ವೇಶತೀರ್ಥರನ್ನು ಸ್ಮರಿಸಿದ್ದಾರೆ. ಇದು ತುಂಬಾ ದೊಡ್ಡ ಜವಾಬ್ದಾರಿ ಎಂದಿರುವ ಶ್ರೀಗಳು, ಈ ಜವಾಬ್ದಾರಿ ನಿರ್ವಹಿಸಲು ಸಮಾಜದ ಎಲ್ಲರ ಸಹಕಾರಬೇಕು. ವಿಶ್ವಸ್ಥನಾಗಲು ಒಪ್ಪಿಗೆ ನೀಡಿ ಸ್ವೀಕೃತಿ ಪತ್ರ ಕಳುಹಿಸಿದ್ದೇನೆ. ರಾಮಮಂದಿರದ ಕಾರ್ಯ ಯೋಜನೆಗಳು ಮುಂದಿನ ಸಭೆಯಲ್ಲಿ ನಿರ್ಣಯವಾಗಲಿವೆ ಎಂದರು.
ಮುಂದಿನ 15 ದಿನಗಳಲ್ಲಿ ಮೊದಲ ಸಭೆ ನಡೆಯಬಹುದು ಎಂದು ಹೇಳಿದರು. ಟ್ರಸ್ಟಿ ಆಗಲು ಅವಕಾಶ ದೊರೆತರೆ ಒಪ್ಪಿಕೊಳ್ಳುವಂತೆ ಗುರುಗಳು ಸೂಚಿಸಿದ್ದರು. ಗುರುಗಳಜೊತೆ ಹೋರಾಟದಲ್ಲೂ ಭಾಗಿಯಾಗಿದ್ದೆ ಎಂದು ನೆನಪಿಸಿಕೊಂಡ ಶ್ರೀಗಳು, ಉತ್ತರ ಭಾರತದ ಅನೇಕ ಸಭೆಯಲ್ಲಿ ಭಾಗಿಯಾಗಿದ್ದೆ. ರಾಮ ಮಂದಿರ ಭವ್ಯವಾಗಿ ನಿರ್ಮಾಣವಾಗಬೇಕು.
ಜಗತ್ತಿನ ಗಮನ ಸೆಳೆಯುವ ಮಂದಿರವಾಗಬೇಕು. ಯಾತ್ರಿಗಳಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂಬುದು ನನ್ನ ವ್ಯಕ್ತಿಗತ ಅಭಿಪ್ರಾಯ. ಎಲ್ಲಾ ಸದಸ್ಯರ ತೀರ್ಮಾನದಂತೆ ಕಾರ್ಯಯೋಜನೆ ರೂಪುಗೊಳ್ಳಲಿದೆ ಎಂದರು. ಪೇಜಾವರ ಮಠದ ಶಾಖೆ ಅಯೋಧ್ಯೆಯಲ್ಲಿದೆ. ದೊಡ್ಡ ಶಾಖಾ ಮಠ ತೆರೆಯುವ ಯೋಜನೆ ಇದೆ ಎಂದರು.