ರಾಮ ಮಂದಿರ ನಿರ್ಮಾಣ ವಿರೋಧಿಸುವವರು ಸಂವಿಧಾನ ವಿರೋಧಿಗಳು: ಪ್ರಮೋದ್ ಮುತಾಲಿಕ್
ಉಡುಪಿ: ರಾಮ ಜನ್ಮಭೂಮಿಗಾಗಿ ನಿರಂತರ ಹೋರಾಟ ಮಾಡಿದ ಪ್ರವೀಣ್ ತೊಗಾಡಿಯಾರನ್ನು ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ಅತೀವ ನೋವು ತಂದಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬೇಸರ ವ್ಯಕ್ತಪಡಸಿದ್ದಾರೆ.
ಅವರು ಶುಕ್ರವಾರ ಬ್ರಹ್ಮಾವರ ಸಮೀಪದ ನೀಲಾವರಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ಅಂಜನಾದ್ರಿ ಬೆಟ್ಟದ ಶಿಲೆಯನ್ನು ಹಸ್ತಾಂತರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಸತತ 32 ವರ್ಷ ತನ್ನ ಸಂಸಾರವನ್ನೇ ದೂರವಿಟ್ಟು ತ್ಯಾಗದ ಜೀವನ ನಡೆಸಿ ಪ್ರವೀಣ್ ತೋಗಡಿಯಾ ರಾಮಜನ್ಮಭೂಮಿ ಗಾಗಿ ನಿರಂತರ ಹೋರಾಟ ಮಾಡಿದ್ದಾರೆ. ಈಗಲೂ ಕಾಲ ಮಿಂಚಿಲ್ಲ ಇನ್ನಾದರೂ ಎಲ್ಲಾ ದ್ವೇಷಗಳನ್ನು ಮರೆತು ತೊಗಾಡಿಯಾರನ್ನು ಆಹ್ವಾನಿಸಬೇಕು ಎನ್ನುವದು ಲಕ್ಷಾಂತರ ಹಿಂದೂಗಳ ತುಡಿತ ಎಂದು ಅವರು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅಯೋಧ್ಯಾ ಹೋರಾಟಕ್ಕೆ ಹೊಸ ಹುರುಪು ಬಂದಿದ್ದು, ರಾಮ ಮಂದಿರ ಶಿಲಾನ್ಯಾಸ ಜಗತ್ತಿನ ಇತಿಹಾಸದ ಪುಟ ಸೇರಲಿದೆ. ಇದರಿಂದ ಲಕ್ಷಾಂತರ ಜನರ ತ್ಯಾಗ ಬಲಿದಾನದ ಫಲ ಸಿಗುತ್ತಿದೆ. ಪ್ರಧಾನಿ ಮೋದಿ ಮೂಲಕ ಶಿಲನ್ಯಾಸ ಆಗುತ್ತಿರುವುದು ಖುಷಿಕೊಟ್ಟಿದ್ದು, ಶಿಲಾನ್ಯಾಸದ ದಿನವೇ ನಮಗೆ ದೀಪಾವಳಿ ರಾಮನವಮಿ ಆಗಿದೆ. ಅಂದು ಪ್ರತಿಮನೆಯಲ್ಲೂ ನಾಮಸ್ಮರಣೆ ಮಾಡಿ ದೀಪ ಬೆಳಗೋಣಎಂದು ಅವರು ಹೇಳಿದರು.
ರಾಮ ಮಂದಿರಕ್ಕಾಗಿ ಅಂಜನಾದ್ರಿ ಬೆಟ್ಟ ದಿಂದ ಶಿಲೆಯನ್ನು ಪೇಜಾವರಶ್ರೀಗಳ ಮೂಲಕ ಅಯೋಧ್ಯೆಗೆ ಕಳುಹಿಸುತ್ತೇವೆ. ರಾಮ ನಿರ್ಮಾಣ ಸಿಂಘಾಲ್ , ಪೇಜಾವರ ಶ್ರೀ, ನೃತ್ಯ ಗೋಪಾಲದಾಸರ ಹೋರಾಟದ ಫಲವಾಗಿ ನಡೆಯುತ್ತಿದೆ ಎಂದರು.
ರಾಮ ಮಂದಿರ ಶಿಲನ್ಯಾಸ ವಿರೋಧಿಗಳು ಸಂವಿಧಾನ ವಿರೋಧಿಗಳು ಆಗಿದ್ದು ಅವರು ಈ ಮೂಲಕ ಸುಪ್ರೀಂಕೋರ್ಟ್ ತೀರ್ಪಿಗೆ ವಿರೋಧ ಮಾಡುತ್ತಿದ್ದಾರೆ ಎಂದ ಮುತಾಲಿಕ್ ಯಾರೇ ವಿರೋಧಿಸಿದರೂ ಕೂಡ ಅದು ನ್ಯಾಯಾಂಗನಿಂದನೆ ಆಗುತ್ತೆ. ಕಾಂಗ್ರೆಸ್, ಕಮ್ಯುನಿಸ್ಟ್ ನವರು ಅಜ್ಮೀರ್ ದರ್ಗಾಗೆ ಹೋಗಲ್ವಾ? ದರ್ಗಾಗೆ ಚಾದರ ಹೊದಿಸಿ ಬರುವುದಕ್ಕೆ ತೊಂದರೆ ಇಲ್ವಾ? ಸಿದ್ದರಾಮಯ್ಯ ಟಿಪ್ಪುವಿನ ವೇಷಹಾಕಿ ಖಡ್ಗ ಹಿಡಿದುಕೊಳ್ಳಬಹುದು. ಪ್ರಧಾನಿ ಶಿಲಾನ್ಯಾಸ ಮಾಡುವುದನ್ನು ವಿರೋಧಿಸುವುದು ಶತ ಮೂರ್ಖತನ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.