Home Mangalorean News Kannada News ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮೂಡುಬಿದಿರೆ ಸಜ್ಜು

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮೂಡುಬಿದಿರೆ ಸಜ್ಜು

Spread the love

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮೂಡುಬಿದಿರೆ ಸಜ್ಜು

80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ದಿನಗಣನೆ
• ದೇಶದ ಕ್ರೀಡಾಪಟುಗಳು ಸಾಧನೆಗೆ ಸಾಕ್ಷಿಯಾಗಲಿಗೆ ಬೆದ್ರ

ಮೂಡುಬಿದಿರೆ: ಒಲಪಿಂಕ್ಸ್‍ನಂಥ ವಿಶ್ವಮಟ್ಟದ ವೇದಿಕೆಯಲ್ಲಿ ಭಾರತದ ಪತಾಕೆ ಹಾರಿಸುವ ರಾಷ್ರ್ಟದ ಭವಿಷ್ಯದ ಕ್ರೀಡಾಪಟುಗಳ ಸಾಧನೆಗೆ ಸಾಕ್ಷಿಯಾಗಲು ವಿದ್ಯಾಕಾಶಿ ಮೂಡುಬಿದಿರೆ ಸಜ್ಜುಗೊಂಡಿದೆ.

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹಾಗೂ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ಜ.2ರಿಂದ(ನಾಳೆ) 6ರವರೆಗೆ ನಡೆಯಲಿರುವ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ದಿನಗಣನೆ ಆರಂಭಗೊಂಡಿದ್ದು, ತಯಾರಿ ಕೊನೇ ಹಂತದಲ್ಲಿದೆ.

ದಾಖಲೆಯ ಕ್ರೀಡಾಪಟುಗಳು ಭಾಗಿ:
ಈ ಬಾರಿಯ ಕ್ರೀಡಾಕೂಟದಲ್ಲಿ ರಾಷ್ಟ್ರದ 400 ವಿಶ್ವವಿದ್ಯಾಲಯಗಳ ಸುಮಾರು 5 ಸಾವಿರ ಅಥ್ಲೀಟ್‍ಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಇದು ಕ್ರೀಡಾಕೂಟದ ಇತಿಹಾಸದಲ್ಲೇ ದಾಖಲೆಯಾಗಲಿದೆ. ಜೊತೆಗೆ ಸುಮಾರು 2000 ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದು, ರಾಷ್ಟ್ರದ ಖ್ಯಾತ ಕ್ರೀಡಾಪಟುಗಳನ್ನು ಹಾಗೂ ತರಬೇತುದಾರರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಈಗಾಗಲೇ 27 ವಿವಿಯಿಂದ ಕ್ರೀಡಾಪಟುಗಳು ಮೂಡುಬಿದಿರೆಗೆ ಆಗಮಿಸಿದ್ದಾರೆ.

ಸಜ್ಜುಗೊಳ್ಳುತ್ತಿದೆ ಸ್ವರಾಜ್ ಮೈದಾನ:
ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮೂಡುಬಿದಿರೆಯ ಸ್ವರಾಜ್ ಮೈದಾನ ಸಜ್ಜುಗೊಳ್ಳುತ್ತಿದ್ದು, ಹೊನಲು ಬೆಳಕಿನ ಕ್ರೀಡಾಕೂಟವಾಗಿರುವುದರಿಂದ ಮೈದಾನದಲ್ಲಿ ಫ್ಲಡ್‍ಲೈಟ್ ವ್ಯವಸ್ಥೆ ಮಾಡಲಾಗಿದೆ. 400 ಮೀ. ಓಟದ ಟ್ರ್ಯಾಕ್‍ಗೂ ಹೊಸ ಟಚ್ ನೀಡಲಾಗಿದ್ದು, ಅತ್ಯಾಧುನಿಕ ಫೋಟೋ ಫಿನಿಶಿಂಗ್ ತಂತ್ರಜ್ಞಾನದ ವ್ಯವಸ್ಥೆಯನ್ನು ಮಾಡಲಾಗಿದೆ.

ಮೂರು ತಿಂಗಳ ತಯಾರಿ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಾಲ್ಕನೇ ಬಾರಿ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು, ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ನೇತೃತ್ವದಲ್ಲಿ ಮೂರು ತಿಂಗಳಿಗಿಂತಲೂ ಹಿಂದಿನಿಂದ ತಯಾರಿ ನಡೆಯುತ್ತಿದೆ. ಇದಕ್ಕಾಗಿ ಆಹಾರ, ಸಾರಿಗೆ, ತಾಂತ್ರಿಕ, ಬಹುಮಾನ ವಿತರಣೆ, ದಾಖಲೀಕರಣ ಸೇರಿದಂತೆ ಸುಮಾರು 20 ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ.

ಉಚಿತ ಸೌಲಭ್ಯ
ಕ್ರೀಡಾಕೂಟಕ್ಕೆ ಆಗಮಿಸುವ ಎಲ್ಲ ಸ್ಪರ್ಧಿಗಳು, ತರಬೇತುದಾರರು, ಕ್ರೀಡಾಧಿಕಾರಿಗಳು ಹಾಗೂ ವಿಶೇಷ ಆಹ್ವಾನಿತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಉಚಿತ ಊಟ ಹಾಗೂ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ. ಕ್ರೀಡಾ ಪಟುಗಳಿಗೆ ಉಳಿದುಕೊಳ್ಳಲು ಸುಮಾರು 25 ವಸತಿ ಗೃಹಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಜಾವದಲ್ಲಿ ಅಭ್ಯಾಸ ಮಾಡಲು ವಿದ್ಯಾರ್ಥಿಗಳೀಗೆ ಜಿಮ್ ಸೌಕರ್ಯ ನೀಡಲಾಗಿದೆ. ಉತ್ತರ ಹಾಗೂ ದಕ್ಷಿಣ ಭಾರತ ಎರಡೂ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದೆ.


Spread the love

Exit mobile version