ರಾಷ್ಟ್ರೀಯ ಕ್ರೀಡಾಕೂಟ ಈಜು ಸ್ಪರ್ಧೆ: ಚಿನ್ನ ಗೆದ್ದ ಚಿಂತನ್ ಶೆಟ್ಟಿ ಸಾಧನೆಯನ್ನು ಅಭಿನಂದಿಸಿದ ಸಂಸದ. ಕ್ಯಾ. ಚೌಟ
ಮಂಗಳೂರು: ಉತ್ತರಾಖಂಡದಲ್ಲಿ ನಡೆದ 38 ನೇ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟದ ಸ್ವಿಮಿಂಗ್ ಪುರುಷರ ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನ ಗೆದ್ದ ಕರ್ನಾಟಕದ ತಂಡದಲ್ಲಿದ್ದ ಕರಾವಳಿಯ ಪ್ರತಿಭೆ ಚಿಂತನ್ ಎಸ್. ಶೆಟ್ಟಿ ಅವರನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಅಭಿನಂದಿಸಿದ್ದಾರೆ.
ಉತ್ತರಾಖಂಡ್ ನ ಹಲ್‌ದ್ವಾನಿಯಲ್ಲಿ ಜನವರಿಯಲ್ಲಿ ನಡೆದ ಪುರುಷರ 4×100 ಮೀ ಫ್ರೀಸ್ಟೈಲ್ ರಿಲೇಯಲ್ಲಿ ಕರ್ನಾಟಕದ ಈಜುಗಾರರ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು. ಶ್ರೀಹರಿ ನಟರಾಜ್, ಅನೀಶ್ ಎಸ್ ಗೌಡ, ಚಿಂತನ್ ಎಸ್ ಶೆಟ್ಟಿ, ಹಾಗೂ ಆಕಾಶ್ ಮಣಿ ಅವರನ್ನೊಳಗೊಂಡ ತಂಡ 3 ನಿಮಿಷ 26.26 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ಕೂಟ ದಾಖಲೆಯೊಂದಿಗೆ ಬಂಗಾರದ ಪದಕ ಗೆದ್ದಿತ್ತು. ಈ ತಂಡದಲ್ಲಿ ಕರಾವಳಿಯ ಯುವ ಕ್ರೀಡಾ ಪ್ರತಿಭೆ ಚಿಂತನ್ ಶೆಟ್ಟಿ ಬಂಗಾರ ಪದಕ ಗೆದ್ದಿದ್ದರು.
ಈ ಸಾಧನೆ ಬಗ್ಗೆ ಮಾಹಿತಿ ಪಡೆದುಕೊಂಡ ಸಂಸದ ಕ್ಯಾ. ಚೌಟ ಅವರು, ಶುಕ್ರವಾರ ತಮ್ಮ ಕಚೇರಿಯಲ್ಲಿ ಈಜುಪಟುವನ್ನು ಅಭಿನಂದಿಸಿದ್ದು, ಚಿನ್ನದ ಪದಕ ಗಳಿಸಿ ನಮ್ಮ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವುದು ಹೆಮ್ಮೆ ಸಂಗತಿಯಾಗಿದೆ. ಈಗಾಗಲೇ ಅನೇಕ ಪದಕ ಬಾಚಿರುವ ಚಿಂತನ್ ಗೆ ಇದೇ ವೇಳೆ ಸಂಸದರು ಅಂತರಾಷ್ಟ್ರೀಯ ಕ್ರೀಡೆಯಲ್ಲೂ ಹೆಚ್ಚಿನ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.