Home Mangalorean News Kannada News ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂತ್ರಸ್ತರಿಗೆ ಫಲಾನುಭವಿಗಳಿಗೆ ನಿವೇಶನ ವಿತರಣೆ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂತ್ರಸ್ತರಿಗೆ ಫಲಾನುಭವಿಗಳಿಗೆ ನಿವೇಶನ ವಿತರಣೆ

Spread the love

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂತ್ರಸ್ತರಿಗೆ ಫಲಾನುಭವಿಗಳಿಗೆ ನಿವೇಶನ ವಿತರಣೆ

ಉಡುಪಿ : ಮೂಲಸೌಕರ್ಯ ಅಭಿವೃದ್ಧಿಗಾಗಿ ತ್ಯಾಗ ಮಾಡಿದವರನ್ನು ಗುರುತಿಸಿ ಅವರಿಗೆ ವ್ಯವಸ್ಥಿತವಾಗಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ ಸಂತ್ರಸ್ತರಾದವರಿಗೆ ಪಾರದರ್ಶಕವಾಗಿ ನಿವೇಶನ ವಿತರಿಸಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಉಡುಪಿಯ 59 ಫಲಾನುಭವಿಗಳಿಗೆ ನಗರಸಭಾ ವ್ಯಾಪ್ತಿಯ ಸುಬ್ರಹ್ಮಣ್ಯನಗರ ವಾರ್ಡ್ ಲಿಂಗೋಟಿಗುಡ್ಡೆಯಲ್ಲಿ ನಿವೇಶನದ ಹಕ್ಕುಪತ್ರ ವಿತರಿಸಿ ಮಾತನಾಡುತ್ತಿದ್ದರು.

title-deeds-distribution-pramod-madhwaraj-udupi-20161005-01

ರಾಷ್ಟ್ರೀಯ ಹೆದ್ದಾರಿ ಅಗಲಗೊಳಿಸುವ ಸಂದರ್ಭದಲ್ಲಿ ಹಲವಾರು ಮಂದಿ ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾಕರು ನಿವೇಶನ ಇಲ್ಲದೆ ತೊಂದರೆಗೀಡಾಗಿದ್ದರು. ಅವರಿಗೆ ನಿವೇಶನ ಕೊಡಿಸುವ ಪ್ರಕ್ರಿಯೆಯನ್ನು ನಿರಂತರವಾಗಿ ಮಾಡಿ ಇಂದು ನಿವೇಶನ ಗುರುತಿಸಿದ ಜಾಗದಲ್ಲಿಯೇ ವಿತರಿಸಲಾಗಿದೆ ಎಂದರು.

20 30 ಅಡಿ ವಿಸ್ತೀರ್ಣದ ಸುಮಾರು 5 ಲಕ್ಷ ರೂ ಮೌಲ್ಯದ ಒಂದೂವರೆ ಸೆಂಟ್ಸ್ ನಿವೇಶನವನ್ನು ನೀಡಲಾಗುತ್ತಿದೆ. ಅಲ್ಲದೆ ಮನೆ ನಿರ್ಮಾಣಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 3.30ಲಕ್ಷ ರೂ ಹಾಗೂ ಇತರರಿಗೆ 2.70 ಲಕ್ಷ ರೂ. ಸಹಾಯಧನ ನೀಡಲಾಗುವುದು ಇತರ ಸೌಲಭ್ಯಗಳನ್ನು ಕೂಡ ಒದಗಿಸಿಕೊಡಲಾಗುವುದು ಎಂದು ಸಚಿವರು ಹೇಳಿದರು.

ವಾಜಪೇಯಿ ನಗರ ವಸತಿ ಯೋಜನೆಯಡಿ 62 ಫಲಾನುಭವಿಗಳಿಗೆ ಮತ್ತು ಡಾ| ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಡಿಯಲ್ಲಿ 37 ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರವನ್ನು ಸಚಿವರು ವಿತರಿಸಿದರು. ನಗರಸಭೆಗೆ ಹೊಸದಾಗಿ ಖರೀದಿಸಲಾದ 19,47000 ರೂ. ಗಳ ಸೆಸ್‍ಪೂಲ್ ಯಂತ್ರವನ್ನು ಸಚಿವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.

ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ತಹಶೀಲ್ದಾರ್ ಮಹೇಶ್ಚಂದ್ರ, ಅಮೃತ್ ಶೆಣೈ, ನಗರಸಭಾ ಸದಸ್ಯರಾದ ಯುವರಾಜ್, ಜನಾರ್ದನ ಭಂಡಾರ್‍ಕರ್, ಪ್ರಶಾಂತ್ ಭಟ್, ಶೋಭಾ ಕಕ್ಕುಂಜೆ, ರಮೇಶ್ ಪೂಜಾರಿ, ಸೆಲಿನ್ ಕರ್ಕಡ, ಹೇಮಲತಾ ಜತ್ತನ್ನ, ಲತಾ ಆನಂದ ಸೇರಿಗಾರ್, ಹಸನ್ ಸಾಹೇಬ್, ಮಿಥುನ್ ಅಮೀನ್, ಶಶಿರಾಜ್ ಕುಂದರ್, ವಿಜಯ ಜತ್ತನ್ನ, ವಿಜಯ ಪೂಜಾರಿ, ಚಂದ್ರಕಾಂತ್, ಗಣೇಶ್ ನೇರ್ಗಿ, ನಾರಾಯಣ ಕುಂದರ್, ಹಾರ್ಮಿಸ್ ನೊರೊನ್ಹಾ, ವಿಜಯ ಮಂಚಿ, ಶಾಂತಾರಾಂ ಸಾಲ್ವಂಕರ್, ರಮೇಶ್ ಕಾಂಚನ್ ಮತ್ತು ಸುಕೇಶ್ ಕುಂದರ್, ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಉಪಸ್ಥಿತರಿದ್ದರು. ಪೌರಾಯುಕ್ತ ಮಂಜುನಾಥಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


Spread the love

Exit mobile version