ರಾಹೆ169ಎ ಉಡುಪಿ-ಮಣಿಪಾಲ ರಸ್ತೆಯ ಸಂಚಾರದಲ್ಲಿ ತಾತ್ಕಾಲಿಕ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಆದೇಶ
ಉಡುಪಿ: ರಾಷ್ರೀಯ ಹೆದ್ದಾರಿ 169ಎ ಮಲ್ಪೆ – ಮೊಳಕಾಲ್ಮೂರು ರಸ್ತೆಯ ಕಾಮಗಾರಿಯು ಉಡುಪಿಯ ಕಡಿಯಾಳಿ ಜಂಕ್ಷನ್ ಬಳಿಯಿಂದ ಇಂದ್ರಾಳಿ, ಪರ್ಕಳ ತನಕ ಆಂಭಗೊಂಡಿದ್ದು ಸುಗಮ ಸಂಚಾರಕ್ಕಾಗಿ ಕಡಿಯಾಳಿ ಜಂಕ್ಷನ್ ಬಳಿಯಿಂದ ಮಣಿಪಾಲ ಕಡೆಗೆ ಹೋಗುವ ಮತ್ತು ಬರುವ ವಾಹನಗಳಿಗೆ ದ್ವಿಮುಖ ಸಂಚಾರ ವ್ಯವಸ್ಥೆಯನ್ನು ಮಾಡಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಅಧೀಕ್ಷಕರ ವರದಿಯನ್ನು ಅನುಸರಿಸಿ ಉಡುಪಿ ಮಣಿಪಾಲ ರಸ್ತೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಸಂಚಾರದ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಈ ಕೆಳಗಿನಂತೆ ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ.
ಉಡುಪಿ ಕಡೆಯಿಂದ ಮಣಿಪಾಲ, ಕಾರ್ಕಳ, ಶಿವಮೊಗ್ಗ ಮುಂತಾದ ಸ್ಥಳಗಳಿಗೆ ಹೋಗುವ ಬಸ್ಸುಗಳು ಎಂದಿನಂತೆ ಸರ್ವಿಸ್ ಬಸ್ಸು ನಿಲ್ದಾಣದಿಂದ ರಾಹೆ 169ರ ಸಿಟಿ ಬಸ್ಸು ನಿಲ್ದಾಣ, ಕಲ್ಷಂಕ ಜಂಕ್ಷನ್, ಕಡಿಯಾಳಿ, ಎಂಜಿಎಮ್ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡುವುದು.
ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಎಲ್ಲಾ ಬಸ್ಸುಗಳು ಎಂಜಿಎಂ, ಸುಧೀಂದ್ರ ತೀರ್ಥ ಮಾರ್ಗದಿಂದ ಬಲತಿರುವು ಪಡೆದು, ಶಾರದಾ ಕಲ್ಯಾಣ ಮಂಟಪದಿಂದ ಬೀಡಿನಗುಡ್ಡೆ, ಮಿಷನ್ ಕಂಪೌಂಡ್, ಲಯನ್ಸ್ ಸರ್ಕಲ್ ಮಾರ್ಗವಾಗಿ ಬಸ್ಸು ನಿಲ್ದಾಣಕ್ಕೆ ತಲುಪುವುದು.
ಉಡುಪಿಯಿಂದ ಮಣಿಪಾಲಕ್ಕೆ ಹೋಗುವ ಇತರೇ ವಾಹನಗಳು ಏಕಮುಖ ಸಂಚಾರ ಬದಲಿಗೆ ದ್ವಿಮುಖ ಸಂಚಾರ ವ್ಯವಸ್ಥೆಯನ್ನು ಮಾಡುವುದು.
ಪಶ್ಚಿಮಾಭಿಮುಖವಾಗಿ ಅಂದರೆ ಮಣಿಪಾಲದಿಂದ ಉಡುಪಿ ಕಡೆಗೆ ರಸ್ತೆ ಕಾಮಗಾರಿ ಪ್ರಾರಂಭವಾದ ನಂತರ ಉಡುಪಿಯಿಂದ ಮಣಿಪಾಲಕ್ಕೆ ರಾಹೆ 166 ಎ ರಲ್ಲಿ ಹೋಗುವ ವಾಹನಗಳಿಗೆ ದ್ವಿಮುಖ ಸಂಚಾರದ ವ್ಯವಸ್ಥೆಯನ್ನು ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.