ರಾ.ಹೆದ್ದಾರಿ 66 ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ 15 ದಿನಗಳ ಗಡುವು; ಎಸ್ಪಿ ಸಂಜೀವ್ ಪಾಟೀಲ್
ಉಡುಪಿ: ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ನೇತ್ರತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಸಮಸ್ಯೆ ಕುರಿತು ಇತ್ತೀಚೆಗೆ ಸಭೆ ನಡೆಸಲಾಗಿದ್ದು, ಹಲವಾರು ಸಮಸ್ಯೆಗಳನ್ನು ಸ್ಥಳೀಯ ನಾಗರಿಕರು ತೊಡಿಕೊಂಡಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಕೂಡ ನೀಡಲಾಗಿದ್ದು 15 ದಿನಗಳ ಗಡುವು ವಿಧಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಎಮ್ ಪಾಟೀಲ್ ಹೇಳಿದ್ದಾರೆ.
ಅವರು ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ರಾಷ್ಟ್ರೀಯ ಹೆದ್ದಾರಿ 66 ಮಧ್ಯದಲ್ಲಿ ಬೆಳೆದಿರುವ ಹುಲ್ಲನ್ನು 15 ದಿನಗಳ ಒಳಗೆ ತೆರವುಗೊಳಿಸಬೇಕು ಅಲ್ಲದೆ ಶಾಲಾ ಕಾಲೇಜು, ಮಾರ್ಕೆಟ್, ಬಸ್ಟ್ ಸ್ಟ್ಯಾಂಡ್ ಪ್ರದೇಶದಲ್ಲಿ 27 ಕಡೆಗಳಲ್ಲಿ ಫೂಟ್ ಒವರ್ ಬ್ರಿಡ್ಜ್ ನಿರ್ಮಿಸುವಂತೆ ಹೆದ್ದಾರಿ ಸಚಿವಾಲಯಕ್ಕೆ ಪೋಲಿಸ್ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ಸಾರ್ವಜನಿಕರು ಬೇರೆ ಯಾವ ಪ್ರದೇಶದಲ್ಲಿ ಫೂಟ್ ಒವರ್ ಬ್ರಿಡ್ಜ್ ಬೇಕು ಎನ್ನುವ ಪ್ರಸ್ತಾವನೆ ನೀಡಿದರೆ ಅದನ್ನು ಕೂಡ ಪರಿಗಣಿಸಲಾಗುವುದು. ರಸ್ತೆಯ ಮೇಲೆ ನೀರು ನಿಲ್ಲುವುದನ್ನು ಸರಿ ಮಾಡಲು 15 ದಿನಗಳ ಸಮಯ ನೀಡಬೇಕು ಅಲ್ಲದೆ ಕಡ್ಡಾಯವಾಗಿ ರಸ್ತೆಯ ಎರಡು ಬದಿಯಲ್ಲಿ ದಾರಿ ದೀಪದ ವ್ಯವಸ್ಥೆಯನ್ನು ಮಾಡುವಂತೆ ಕೂಡ ಸೂಚಿಸಲಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಪಾದಾಚಾರಿ ಮಾರ್ಗದಲ್ಲಿಯೇ ಮಾತ್ರ ರಸ್ತೆ ದಾಟಲು ಅವಕಾಶ ನೀಡಿ ಉಳಿದ ಭಾಗಗಳಿಗೆ ಬೇಲಿ ಅಳವಡಿಸುವಂತೆ ಕೂಡ ಸೂಚನೆ ನೀಡಲಾಗಿದೆ.
ರಾಜ್ಯದ ಇತರ ರಾಷ್ಟ್ರೀಯ ಹೆದ್ದಾರಿಗಳಿಗೆ ಹೋಲಿಸಿದರೆ ಈ ರಸ್ತೆಯಲ್ಲಿ ಅತೀ ಕಡಿಮೆ ಸೋಲಾರ್ ಬ್ಲಿಂಕರ್ ವ್ಯವಸ್ಥೆ ಮಾಡಲಾಗಿದ್ದು ಮುಂದಿನ 15 ದಿನಗಳ ಒಳಗೆ ಮಾಡಲು ಸೂಚಿಸಲಾಗಿದೆ. ಮೂರು ನಿಮಿಷಕ್ಕಿಂತ ಹೆಚ್ಚು ಹೊತ್ತು ಟೋಲ್ ಪ್ಲಾಜಾದಲ್ಲಿ ವಾಹನ ನಿಂತರೆ ಉಚಿತವಾಗಿ ಬಿಡುವ ವ್ಯವಸ್ಥೆ ಇಲ್ಲ ಆದರೆ ಟೋಲ್ ಬೂತ್ ನ ಎಲ್ಲಾ ಗೇಟುಗಳನ್ನು ತೆರೆದಿಟ್ಟು ಯಾವುದೇ ರೀತಿ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳಬೇಕು ಇದಕ್ಕೆ ತಪ್ಪಿದಲ್ಲಿ ಟೋಲ್ ಪ್ಲಾಜಾವನ್ನು ಇಲಾಖೆ ಮುಚ್ಚುವ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ. ಕುಂದಾಪುರದಿಂದ ಪಡುಬಿದ್ರೆ ವರೆಗಿನ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಯನ್ನು ಡಿಸೆಂಬರ್ 30 ರ ಒಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ಪಂಚಾಯತ್ ಮಟ್ಟದಲ್ಲಿ ಶೀಘ್ರದಲ್ಲೇ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಆಗಮಿಸಿ ಕುಂದುಕೊರತೆಯ ಸಭೆ ನಡೆಸುವಂತೆ ಕೂಡ ಸೂಚಿಸಲಾಗಿದೆ ಎಂದರು.
ನೀಡಲಾಗಿರುವ ಸೂಚನೆಗಳನ್ನು ಸರಿಯಾದ ರೀತಿಯಲ್ಲಿ ನಡೆಸಲಾಗಿದೆಯೋ ಎಂಬ ಕುರಿತು ಅಕ್ಟೋಬರ್ ಅಂತ್ಯಕ್ಕೆ ಜಿಲ್ಲಾಧಿಕಾರಿ, ಪೋಲಿಸ್ ಇಲಾಖೆ ಹಾಗೂ ಇತರ ಉನ್ನತ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಲಾಗುವುದು. ಸೂಚಿಸಿದ ಕೆಲಸಗಳನ್ನು ಮಾಡದೆ ಎಲ್ಲಿಯಾದರೂ ಅಫಘಾತ ಸಂಭವಿಸಿ ಜೀವಹಾನಿಯಾದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.