ರೂ. 500, 1000 ನೋಟು ಚಲಾವಣೆಯಿಂದ ಹಿಂದಕ್ಕೆ ಗೊಂದಲಗಳಿಗೆ ಕಾರಣ – ಸಿ.ಪಿ.ಐ.(ಎಂ)
ಉಡುಪಿ: ರೂ. 500.00 ಮತ್ತು ರೂ. 1000.00 ಮೌಲ್ಯದ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದು ಕೊಂಡುದುದರಿಂದ ಬ್ಯಾಂಕ್ ಖಾತೆಗಳಿಲ್ಲದ ಜನ ಸಾಮಾನ್ಯರಿಗೆ ತೊಂದರೆ ಆಗಲಿದ್ದು, ಕಪ್ಪು ಹಣ ತಡೆಗೆ ಸಹಕಾರಿಯಾಗುವುದಿಲ್ಲ ಎಂದು ಸಿ.ಪಿ.ಐ.(ಎಂ) ಉಡುಪಿ ಜಿಲ್ಲಾ ಸಮಿತಿ ಅಭಿಪ್ರಾಯ ಪಟ್ಟಿದೆ.
ಕಪ್ಪು ಹಣ ವಿದೇಶದಲ್ಲಿದೆ ಎಂದು ಮೋದಿಯವರು ಪ್ರಧಾನ ಮಂತ್ರಿಯಾಗುವ ಮೊದಲೇ ಘೋಷಿಸಿದ್ದರು. ಆದರೆ ವಿದೇಶದಿಂದ ಕಪ್ಪುಹಣ ತರಲು ಯಾವುದೇ ಪ್ರಯತ್ನ ಆಗಲಿಲ್ಲ. ದೇಶಕ್ಕೆ ಸಲ್ಲಬೇಕಾದ ತೆರಿಗೆ ತಪ್ಪಿಸಲು ಮಾರಿಷಸ್ ಮೊದಲಾದ ದೇಶಗಳಲ್ಲಿ ಬೇನಾಮಿ ಕಂಪೆನಿಗಳನ್ನು ಆರಂಭಿಸಲು ಅವಕಾಶ ಮಾಡಿಕೊಡಲಾಗಿದೆ. ಬೃಹತ್ ಕಂಪೆನಿಗಳಿಂದ 3.00 ಲಕ್ಷ ಕೋಟಿ ರೂ. ಗಳಿಗಿಂತಲೂ ಹೆಚ್ಚಿರುವ ಕೆಟ್ಟ ಸಾಲ (ಓPಂ) ವಸೂಲಿ ಮಾಡಲು ಸಾಧ್ಯವಾಗಿಲ್ಲ. ಸುಸ್ತಿದಾರ ಎಂದು ಘೋಷಿಸಲ್ಪಟ್ಟ ವಿಜಯ ಮಲ್ಯರಿಂದ ಚಿಕ್ಕಾಸೂ ವಸೂಲಿ ಮಾಡಲು ಸಾಧ್ಯವಾಗಿಲ್ಲ. ಕಪ್ಪು ಹಣ ಇರುವವರು ಈಗಾಗಲೇ ರಿಯಲ್ ಎಸ್ಟೇಟ್, ಚಿನ್ನ ಮತ್ತಿತರ ಬೇನಾಮಿ ಖಾತೆಗಳಲ್ಲಿ ತೊಡಗಿಸಿದ್ದಾರೆ. ಭಯೋತ್ಪಾದಕರಿಗೆ ಬರುತ್ತಿರುವ ಹಣ ಎಲೆಕ್ಟೋನಿಕ್ ವರ್ಗಾವಣೆ ಮೂಲಕ ಬರುತ್ತಿರುವುದರಿಂದ ಅವರ ಚಟುವಟಿಕೆಗಳನ್ನು ನಿಲ್ಲಿಸಲು, ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದರಿಂದ ಸಾಧ್ಯವಾಗುವುದಿಲ್ಲ.
ಇನ್ನು ನಕಲಿ ನೋಟುಗಳ ಬಗ್ಗೆ ಹೇಳುವುದಾದರೆ ಇದು ತಾತ್ಕಾಲಿಕ ಉಪಶಮನ ಆಡಳಿತ ಯಂತ್ರ ಬಿಗಿಗೊಳಿಸದೇ ಮುಂದೆ ಬರುವ 2000/- ಮತ್ತು 500/- ರೂ. ನೋಟುಗಳನ್ನು ಸಹಾ ನಕಲಿ ತಡೆಯಲು ಸಾಧ್ಯವಿಲ್ಲ.
ಎರಡೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಮೋದಿ ಸರಕಾರ ವರ್ಷಕ್ಕೆ 2 ಕೋಟಿ ಉದ್ಯೋಗ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಇತ್ಯಾದಿ ಭರವಸೆ ನೀಡಿತ್ತು. ಅದರ ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಿರುದ್ಯೋಗ, ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸುತ್ತಿದ್ದಾರೆ. ರೂ. 500.00 ಮತ್ತು 1000.00 ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದಿರುವುದು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಕುತಂತ್ರ ಎಂದು ಸಿ.ಪಿ.ಐ.(ಎಂ) ಭಾವಿಸಿದೆ.