ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಿದ್ದರಾಮಯ್ಯ ಆಗ್ರಹ
ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿ ಬಂದವರನ್ನು ಗುಂಡಿಟ್ಟುಕೊಲ್ಲಿ ಎಂದು ಬಿಜೆಪಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸುವಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಇತ್ತೀಚೆಗೆ ಇಡೀ ಅಲ್ಪ ಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಕೆಲವರು ಮಾತನಾಡುತ್ತಿದ್ದಾರೆ. ನಿಜಾಮುದ್ದೀನ್ಗೆ ಹೋಗಿ ಬಂದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷದ ತಕರಾರಿಲ್ಲ. ಒಂದು ವೇಳೆ ನಿಜಾಮುದ್ದೀನ್ ಗೆ ಹೋಗಿ ಬಂದವರ ಪೈಕಿ ಯಾರಾದರೂ ದುರುದ್ದೇಶಪೂರ್ವಕವಾಗಿ ಮಾಹಿತಿ ನೀಡದೇ ಇದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಿ. ಆದರೆ, ಕೆಲವರು ಧಾರ್ಮಿಕ ಸಭೆಗೆ ಹೋಗಿಬಂದಿದ್ದಕ್ಕಾಗಿ ಇಡೀ ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಆರೋಪ ಮಾಡುವುದು ಸರಿಯಲ್ಲ. ಒಂದು ಸಮುದಾಯದವರನ್ನು ತಪ್ಪಿತಸ್ಥರಂತೆ ಕಾಣುವುದು ದುರುದ್ದೇಶಪೂರ್ವಕವಾದ ನಡವಳಿಕೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ ಹಾಗೂ ರೇಣುಕಾಚಾರ್ಯ ಈ ಇಬ್ಬರ ಹೇಳಿಕೆ ಖಂಡನೀಯ. ಶಾಸಕರಾದವರು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಗುಂಡಿಟ್ಟು ಕೊಲ್ಲಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಗುಂಡಿಟ್ಟು ಕೊಲ್ಲಲು ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ ಎಂದರು. ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿರುವ ರೇಣುಕಾಚಾರ್ಯ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಬೇಕು. ಅವರು ಏನೇ ಹೇಳಿಕೆ ಕೊಟ್ಟರೂ ಮುಖ್ಯಮಂತ್ರಿಗಳು ಹೇಳಿಕೆ ಕೊಟ್ಟಂತಾಗುತ್ತದೆ. ಆದ್ದರಿಂದ ರೇಣುಕಾಚಾರ್ಯ ಆ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ. ಯತ್ನಾಳ್ ಹಾಗೂ ರೇಣುಕಾಚಾರ್ಯ ವಿರುದ್ಧ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿದರು.