ರೇಣುಕಾಸ್ವಾಮಿ ಕೊಲೆ: ಮೈಸೂರಿನಲ್ಲಿ ಆರೋಪಿಗಳ ಸ್ಥಳ ಮಹಜರು
ಮೈಸೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ ನಟ ದರ್ಶನ್ ಕಾರು ಚಾಲಕ ಲಕ್ಷ್ಮಣ್ (ಎ12) ಮತ್ತು ಆಪ್ತ ಸಹಾಯಕ ನಾಗರಾಜ್ ಅಲಿಯಾಸ್ ನಾಗ (ಎ11) ಅವರನ್ನು ಮೈಸೂರಿಗೆ ಕರೆ ತಂದ ಬೆಂಗಳೂರು ಪೊಲೀಸರು ಸ್ಥಳ ಮಹಜರು ನಡೆಸಿದರು.
ಮೈಸೂರು ನಗರದ ಖಾಸಗಿ ಹೋಟೆಲ್ನಲ್ಲಿ ನಟ ದರ್ಶನ್ ತಂಗಿದ್ದ ಹಿನ್ನೆಲೆ ಮಂಗಳವಾರ ಮಧ್ಯಾಹ್ನ ಹೋಟೆಲ್ಗೆ ಭೇಟಿ ನೀಡಿದ ಪೊಲೀಸರು, ಸತತ ಎರಡು ಗಂಟೆಗಳ ಕಾಲ ಇಬ್ಬರು ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಿ ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಿದರು.
ಮಧ್ಯಾಹ್ನ 12 ಗಂಟೆಗೆ ಹೋಟೆಲ್ಗೆ ಇಬ್ಬರು ಆರೋಪಿಗಳೊಂದಿಗೆ ಆಗಮಿಸಿದ ಪೊಲೀಸರು, ಹೋಟೆಲ್ನಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಕೊಲೆಯಾದ ಬಳಿಕ ಹೋಟೆಲ್ ನಲ್ಲಿ ನಡೆಸಿದ ಚರ್ಚೆ ಮತ್ತು ಮಾತುಕತೆಯ ಬಗ್ಗೆ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದರಲ್ಲದೇ ಆರೋಪಿಗಳಿಂದ ಮಾಹಿತಿ ಪಡೆದು ಮಹಜರು ನಡೆಸಿದರು. ಜತೆಗೆ ಅಂದು ಕಾರ್ಯ ನಿರ್ವಹಿಸಿದ್ದ ಹೋಟೆಲ್ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಲಾಯಿತು.
ಜೂ.8ರಂದು ಬೆಂಗಳೂರಿನ ಶೆಡ್ನಲ್ಲಿ ರೇಣುಕಸ್ವಾಮಿ ಕೊಲೆಯಾದ ಬಳಿಕ ನಟ ದರ್ಶನ್ ತನ್ನ ಸಹಚರೊಂದಿಗೆ ಮೈಸೂರಿಗೆ ಬಂದಿದ್ದು, ಹೋಟೆಲ್ನಲ್ಲಿ ತಂಗಿದ್ದರು. ಕೊಲೆಗೂ ಮುನ್ನಾ ಹೋಟೆಲ್ ನಲ್ಲಿ ಯಾರೊಂದಿಗೆ ದರ್ಶನ್ ಸಭೆ ನಡೆಸಿದ್ದರು. ಜತೆಯಲ್ಲಿ ಯಾರು ಇದ್ದರು. ಕೊಲೆಯಾದ ಬಳಿಕ ಮತ್ತೆ ಮೈಸೂರಿಗೆ ಬಂದ ಮೇಲೆ ಹೋಟೆಲ್ ಕೋಣೆಯಲ್ಲಿ ದರ್ಶನ್ ಯಾರೊಂದಿಗೆ ಮಾತುಕತೆ ನಡೆಸಿದರು, ಮೊದಲಾದ ಮಾಹಿತಿಗಳನ್ನು ಮಹಜರು ವೇಳೆ ಪೊಲೀಸರು ಕಲೆ ಹಾಕಿದ್ದಾರೆ.
ಸತತ ಎರಡು ಗಂಟೆ ಮಹಜರು ಬಳಿಕ ವ್ಯಾನಿನಲ್ಲಿ ಆರೋಪಿಗಳನ್ನು ಹೋಟೆಲ್ನಿಂದ ಬೆಂಗಳೂರಿಗೆ ಕರೆದೊಯ್ಯಲಾಯಿತು. ಮಹಜರಿಗೆ ನಟ ದರ್ಶನ್ನನ್ನು ಕರೆದುಕೊಂಡು ಬರಲಾಗಿದೆ ಎಂದು ದರ್ಶನ್ನ ನೂರಾರು ಮಂದಿ ಅಭಿಮಾನಿಗಳು ಹೋಟೆಲ್ ಬಳಿ ಜಮಾಯಿಸಿದ್ದರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟರು.