ರೈತರು ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಳ್ಳಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ: ರೈತರು ಕೃಷಿಯಲ್ಲಿ ಒಂದೇ ಬೆಳೆಗೆ ಸೀಮಿತವಾಗದೇ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಲ್ಲಿ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಶನಿವಾರ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ,್ರ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಡಿಪ್ಲೋಮಾ ಕೃಷಿ ಮಹಾ ವಿದ್ಯಾಲಯ ಬ್ರಹ್ಮಾವರ, ಕೃಷಿ ಹಾಗೂ ಕೃಷಿ ಸಂಬಂದಿತ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಕೃಷಿ ಸಪ್ತಾಹದ ಅಂಗವಾಗಿ ನಡೆದ ಕೃಷಿಮೇಳ-2018 ಉದ್ಘಾಟನೆ, ವಿವಿಧ ವಸ್ತು ಪ್ರದರ್ಶನ ಮಳಿಗೆ ಹಾಗೂ ಪ್ರಾತ್ಯಕ್ಷಿಕೆ ತಾಕುಗಳ ವೀಕ್ಷಣೆ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ಕೃಷಿ ಮಾಡುವ ರೈತರ ಜಮೀನಿನ ವಿಸ್ತೀರ್ಣಗಳು ಕಡಿಮೆ ಇದ್ದು, ರೈತರು ತಮ್ಮ ಜಮೀನಿನಲ್ಲಿ ಸಮಗ್ರ ಬೇಸಾಯ ಪದ್ದತಿ ಅನುಸರಿಸಿ, ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಿಕೊಂಡು ಕೃಷಿ ಚಟುವಟಿಕೆ ನಡೆಸಿದರೆ ಕೃಷಿ ಖಂಡಿತವಾಗಿ ಲಾಭದಾಯಕವಾಗಲಿದೆ, ಕೃಷಿಕರು ಕೃಷಿ ವಿಶ್ವ ವಿದ್ಯಾಲಯದ ನೆರವು ಪಡೆದು ಕೃಷಿ ಚಟುವಟಿಕೆ ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಇಂದಿನ ಕೃಷಿ ಮೇಳದಲ್ಲಿರುವ ಜಲ ಕೃಷಿಯಲ್ಲಿ ಮೇವು ಬೆಳೆ ಉತ್ಪಾದನಾ ವಿಧಾನ, ಬಾತು ಕೋಳಿ ಘಟಕ, ಮೀನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ ವಿಧಾನಗಳನ್ನು ರೈತರು ಅಳವಡಿಸಿಕೊಳ್ಳಬೇಕು, ಸಮಸ್ಯೆಗಳಿದ್ದಲ್ಲಿ ಕೃಷಿ ವಿಜ್ಞಾನಿಗಳಿಂದ ಅಗತ್ಯ ಸಲಹೆ ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿ, ಕೃಷಿ ಸಂಶೋಧನೆಗಳನ್ನು ರೈತರಿಗೆ ಸೂಕ್ತ ರೀತಿಯಲ್ಲಿ ತಲುಪಿಸುವಂತೆ ಕೃಷಿ ವಿಜ್ಞಾನಿಗಳಿಗೆ ತಿಳಿಸಿದರು.
ಕೃಷಿಮೇಳದಲ್ಲಿ ರೈತರಿಗೆ ಉಪಯುಕ್ತ ಮಾಹಿತಿ ನೀಡಲು ಯಂತ್ರೋಪಕರಣಗಳ ಮಳಿಗೆ, ವಿವಿಧ ನರ್ಸರಿ ಮಳಿಗೆಗಳು, ಕೃಷಿ ಸಲಕರಣೆಗಳ ಮಳಿಗೆಗಳು, ವಿವಿಧ ಭತ್ತದ ತಳಿಗಳ ಪ್ರದರ್ಶನ ವ್ಯವಸ್ಥೆ, ವಿವಿಧ ಬೇಸಾಯ ಪದ್ದತಿಗಳ ಬಗ್ಗೆ ವಿಚಾರಗೋಷ್ಠಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಎಸ್.ಯು.ಪಾಟೀಲ್, ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ ಶಿವಮೊಗ್ಗದ ಕುಲಪತಿ ಡಾ.ಎಂ.ಕೆ.ನಾಯ್ಕ್, ವಿಸ್ತರಣಾ ನಿರ್ದೇಶಕ ಡಾ. ಟಿ.ಹೆಚ್.ಗೌಡ, ಸಂಶೋಧನಾ ನಿರ್ದೇಶಕ ಡಾ.ಬಿ.ಆರ್. ಗುರುಮೂರ್ತಿ, ಬೆಂಗಳೂರು ಕೃಷಿ ತಂತ್ರಜ್ಞಾನ ಅಳವಡಿಕಾ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಂ.ಜೆ. ಚಂದ್ರೇಗೌಡ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಬಿ. ಧನಂಜಯ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ, ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ. ಸರ್ವೋತ್ತಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.