ರೈತರ ಸಾಲ ಮನ್ನಾ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ
ಮಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಹಿನ್ನಲೆಯಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಸರಕಾರಕ್ಕೆ ಆಗ್ರಹಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿಗೆ ಈ ಕುರಿತು ಸಲ್ಲಿಸಿದ ಮನವಿಯಲ್ಲಿ ರಾಜ್ಯದಲ್ಲಿ ಅಧಿಕೃತವಾಗಿ 160 ತಾಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದ್ದು ರಾಜ್ಯ ಸರ್ಕಾರ ಈ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ. ದುರದೃಷ್ಟದ ಸಂಗತಿಯೆಂದರೆ ಬರಗಾಲದ ಭೀಕರತೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿಯನ್ನು ಕೈಗೊಳ್ಳಬೇಕಾದ ಮುಖ್ಯಮಂತ್ರಿ ಮತ್ತು ಆಡಳಿತ ಪಕ್ಷದ ಅಧ್ಯಕ್ಷರು ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದನ್ನು ಭಾರತೀಯ ಜನತಾ ಪಾರ್ಟಿ ಅತ್ಯುಗ್ರವಾಗಿ ಖಂಡಿಸುತ್ತದೆ.
ಬರ ನಿರ್ವಹಣೆಗೆ ಮುಖ್ಯಮಂತ್ರಿಗಳು ಈಗಾಗಲೇ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸಭೆ ಕರೆದು ಸಮರೋಪಾದಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಾಗಿತ್ತು. ಹಾಗೂ ಪ್ರಮುಖ ಖಾತೆಗಳಾದ ಗೃಹ, ಕಂದಾಯ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಹಾಗೂ ಸಹಕಾರ ಸಚಿವರು ರಾಜ್ಯ ಪ್ರವಾಸ ಕೈಗೊಂಡು ಸಂಕಷ್ಟದಲ್ಲಿರುವ ರೈತರ ನೆರೆವಿಗೆ ಧಾವಿಸಿ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಿತ್ತು ಆದರೆ ಇವರು ಬೆಂಗಳೂರಿನಲ್ಲಿ ಕುಳಿತು ಕೇಂದ್ರ ಸರ್ಕಾರದ ದೂಷಣೆಯಲ್ಲಿ ತೊಡಗಿರುವುದು ತೀವ್ರ ನೋವಿನ ಸಂಗತಿಯಾಗಿದೆ.
ಮತ್ತೊಂದೆಡೆ, ಜನರು ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ ಮೇವು ಸಿಗದೇ ರೈತಾಪಿ ಕುಟುಂಬಗಳು ತಮ್ಮ ಜಾನುವಾರುಗಳನ್ನು ಕಟುಕರಿಗೆ ಮಾರಾಟ ಮಾಡುವಂತಹ ಶೋಚನೀಯ ಪರಿಸ್ಥಿತಿ ಎದುರಾಗಿದೆ. ಉದ್ಯೋಗ ದೊರೆಯದೇ ರೈತರು, ಕೂಲಿ ಕಾರ್ಮಿಕರು ಗುಳೆ ಹೋಗುವ ಸ್ಥಿತಿ ಉಂಟಾಗಿದೆ. ಮತ್ತೊಂದೆಡೆ ಸ್ವಾಭಿಮಾನೀ ಬದುಕನ್ನು ನಡೆಸುವ ಕನಸು ಹೊತ್ತ ರೈತಾಪಿ ಕುಟುಂಬಗಳು, ಬೆಳೆ ಹಾನಿಯಿಂದ ತತ್ತರಿಸಿವೆ. ದೈನಂದಿನ ಬದುಕಿಗಾಗಿ ಅನ್ಯರನ್ನು ಅವಲಂಬಿಸುವಂತಹ ದಯನೀಯ ಸ್ಥಿತಿಗೆ ರೈತ ಸಮುದಾಯ ದೂಡಲ್ಪಟ್ಟಿದೆ.
ಬರಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಆರಂಭಿಸಬೇಕಾಗಿದ್ದ ರಾಜ್ಯ ಸರ್ಕಾರ ತನ್ನ ಕರ್ತವ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರವು ಬರಪರಿಹಾರಕ್ಕಾಗಿ ಮಂಜೂರು ಮಾಡಿದ 1,782 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳುವಲ್ಲೂ ನಿರುತ್ಸಾಹ ತೋರಿದೆ. ಮೊದಲ ಕಂತಾಗಿ 450 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿ ಒಂದು ತಿಂಗಳಾದರೂ ಅದರಲ್ಲಿ 200 ಕೋಟಿ ರೂಪಾಯಿಗಳನ್ನು ಮಾತ್ರವೇ ರೈತರಿಗೆ ವಿತರಿಸುವುದಾಗಿ ಕಂದಾಯ ಸಚಿವರು ಇದೀಗ ಹೇಳಿಕೆ ನೀಡಿದ್ದಾರೆ. ಇದು ನಾಡಿನ ರೈತರ ಸಮುದಾಯಕ್ಕೆ ಸರ್ಕಾರ ಬಗೆದ ಪರಮ ದ್ರೋಹವಾಗಿದೆ.
ಬೆಳೆ ನಷ್ಟ ಮತ್ತು ಸಾಲ ಬಾಧೆಯಿಂದ ಕಳೆದ ಒಂದೂವರೆ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 100 ಕ್ಕೇರಿದೆ. ಈ ವರ್ಷವೇ ಬರದಿಂದ ತತ್ತರಿಸಿ 1500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬರಗಾಲ ಪರಿಸ್ಥಿತಿಯನ್ನು ಶಮನಗೊಳಿಸಬೇಕಾದ ರಾಜ್ಯ ಸರ್ಕಾರಕ್ಕೆ ಕುಂಭಕರ್ಣ ನಿದ್ದೆ ಆವರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಯಾರೊಬ್ಬರೂ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಕಂಗೆಟ್ಟ ರೈತರ ಕಣ್ಣೀರು ಒರೆಸುವ ಕರ್ತವ್ಯ ನಿರ್ವಹಿಸುತ್ತಿಲ್ಲ. ರಾಜ್ಯದಲ್ಲಿ ಸರ್ಕಾರವಿದ್ದೂ ರೈತರ ಪಾಲಿಗೆ ಸತ್ತಂತಾಗಿದೆ.
ಕೃಷಿಯನ್ನು ಅವಲಂಬಿಸಿ ಜೀವನ ನಡೆಸುವುದು ದುಸ್ತರ ಎನ್ನುವ ಭಾವನೆ ರೈತರಲ್ಲಿ ದಿನಕಳೆದಂತೆ ಹೆಚ್ಚುತ್ತಿದೆ. ಯಾವುದೇ ನಾಗರೀಕ ಸರ್ಕಾರ ರೈತ ಇಂತಹ ಮನೋಭೂಮಿಕೆಯನ್ನು ಬದಲಿಸಿ, ರೈತರ ಕುಟುಂಬಕ್ಕೆ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಾಗಿತ್ತು. ಆದರೆ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದೆ.
ಪ್ರಮುಖ ಬೇಡಿಕೆಗಳು
• ಕೂಡಲೇ ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು.
• ಕುಡಿಯುವ ನೀರು ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಸಮರೋಪಾದಿ ಯೋಜನೆ ರೂಪಿಸಬೇಕು.
• ರೈತರ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಲು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಮೊಕ್ಕಾ ಮಾಡಿ ಬರ ಪರಿಹಾರ ಕಾರ್ಯಕ್ಕೆ ಚಾಲನೆ ನಿಡಬೇಕು.
• ಜಾನುವಾರುಗಳಿಗೆ ಮೇವು ಒದಗಿಸಲು ತಕ್ಷಣ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡುವುದರ ಜೊತೆಗೆ ಹಣ ಬಿಡುಗಡೆ ಮಾಡಬೇಕು.
• ಗೋಶಾಲೆಗಳನ್ನು ರಾಜ್ಯಾದ್ಯಂತ ತೆರೆದು, ಸಂಕಷ್ಟದಲ್ಲಿರುವ ರೈತರ ಜಾನುವಾರುಗಳಿಗೆ ಆಶ್ರಯ ಒದಗಿಸಬೇಕು.
• ಗುಳೆ ಹೋಗುವ ಅನಿವಾರ್ಯತೆ ಎದುರಿಸುತ್ತಿರುವ ರೈತಾಪಿ ಕುಟುಂಬ ಮತ್ತು ಕೂಲಿ ಕಾರ್ಮಿಕರಿಗೆ ಉದ್ಯೋಗ ಭರವಸೆ ಯೋಜನೆಯಡಿ ಸೂಕ್ತ ಉದ್ಯೋಗ ನೀಡಬೇಕು.