Home Mangalorean News Kannada News ರೈತರ ಸಾಲ ಮನ್ನಾ- ಬಾಕಿ ರೈತರಿಗೆ ಶೀಘ್ರ ಮಂಜೂರು- ಸಚಿವ ಕೋಟ ಶ್ರೀನಿವಾಸ ಪೂಜಾರಿ

ರೈತರ ಸಾಲ ಮನ್ನಾ- ಬಾಕಿ ರೈತರಿಗೆ ಶೀಘ್ರ ಮಂಜೂರು- ಸಚಿವ ಕೋಟ ಶ್ರೀನಿವಾಸ ಪೂಜಾರಿ

Spread the love

ರೈತರ ಸಾಲ ಮನ್ನಾ- ಬಾಕಿ ರೈತರಿಗೆ ಶೀಘ್ರ ಮಂಜೂರು- ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರ ಸಾಲಮನ್ನಾ ಯೋಜನೆಯಲ್ಲಿ ತಾಂತ್ರಿಕ ದೋಷಗಳಿಂದಾಗಿ ಸಾಲಮನ್ನಾ ಮಂಜೂರಾಗದ ರೈತರಿಗೆ ಸೌಲಭ್ಯವನ್ನು ಶೀಘ್ರವೇ ಮಂಜೂರು ಮಾಡಲಾಗುವುದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಈ ವಿಷಯ ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 6855 ರೈತರಿಗೆ ಸಾಲಮನ್ನಾ ಸೌಲಭ್ಯ ಅವರ ಬ್ಯಾಂಕ್ ಖಾತೆಯ ಸಮಸ್ಯೆಯಿಂದಾಗಿ ಸಾಲಮನ್ನಾ ಸೌಲಭ್ಯ ಸಿಗದೇ ಇರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಮುಂದಿನ 15 ದಿನದೊಳಗೆ ಬೆಂಗಳೂರಿನಲ್ಲಿ ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು, ರೈತರಿಗೆ ಸಾಲ ಮನ್ನಾ ಮಂಜೂರು ಮಾಡಲಾಗುವುದು ಎಂದು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲಮನ್ನಾ ಯೋಜನೆಗೆ 3156 ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ, ಇವರಿಗೆ 16.85 ಕೋಟಿ ಸಾಲ ಮನ್ನಾ ಆಗಲಿದ್ದು, ಈ ಪೈಕಿ 2841 ರೈತರಿಗೆ ಸುಮಾರು 14.35 ಕೋಟಿ ಮೊತ್ತ ಬಂದಿರುತ್ತದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸಭೆಯಲ್ಲಿ ತಿಳಿಸಿದರು.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತಾನಾಡಿ ರೈತರ ಸಾಲ ಸುಸ್ಥಿದಾರರಾಗಿದ್ದರೆ ಅವರನ್ನು ಅವಮಾನಗೊಳಿಸುವ ಯಾವುದೇ ಕಾರ್ಯವನ್ನು ಬ್ಯಾಂಕ್‍ನವರು ಮಾಡಬಾರದು. ಬ್ಯಾಂಕ್‍ಗಳಿಗೆ ಕನ್ನಡ ಬಲ್ಲ ಅಧಿಕಾರಿಗಳನ್ನು ನೇಮಿಸಬೇಕು. ಹೊರರಾಜ್ಯದ ಬ್ಯಾಂಕ್ ಅಧಿಕಾರಿಗಳು ಸ್ಥಳೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಯುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನೆರವನ್ನು ಯಾವುದೇ ಸಮಸ್ಯೆಗಳಿಲ್ಲದೆ ಮಂಜೂರು ಮಾಡಬೇಕೆಂದು ಸಚಿವರು ಸೂಚಿಸಿದರು.

ಸಭೆಯಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್, ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ಆರ್, ದ.ಕ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version