ರೊಸಾರಿಯೊ ಚರ್ಚಿನಲ್ಲಿ 45ನೇ ವರ್ಷದ ಸಾಮೂಹಿಕ ವಿವಾಹ ಸಂಭ್ರಮ
ಮಂಗಳೂರು: ರೊಸಾರಿಯೊ ಕೆಥೆಡ್ರಾಲ್ನ ಸೈಂಟ್ ವಿನ್ಸೆಂಟ್ ಡಿ.ಪೌಲ್ ಸೊಸೈಟಿ ವತಿಯಿಂದ ಭಾನುವಾರ ನಡೆದ 45ನೇ ವರ್ಷದ ಸಾಮೂಹಿಕ ಸರಳ ವಿವಾಹದಲ್ಲಿ 13 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮಂಗಳೂರು ಬಿಷಪ್ ಡಾ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಮೂಲಕ ವಿವಾಹ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಕೌಟುಂಬಿಕ ಜೀವನದಲ್ಲಿ ಪವಿತ್ರ ಬಂಧನವಾಗಿರುವ ವಿವಾಹವು ದೇವರ ಕೊಡುಗೆ. ಪ್ರತಿಯೊಬ್ಬ ಸ್ತ್ರೀ-ಪುರುಷ ಇದನ್ನು ಗೌರವಿಸಿ, ವಿವಾಹದ ಬದ್ಧತೆಯನ್ನು ಕಾಯ್ದುಕೊಳ್ಳಬೇಕು. ವಿವಾಹವು ಸ್ತ್ರೀ-ಪುರುಷರನ್ನು ಒಗ್ಗೂಡಿಸುವ ಜತೆಗೆ, ದೇವರೊಂದಿಗೆ ಬೆಸೆಯುತ್ತಿದೆ ಎಂದು ಬಿಷಪ್ ಹೇಳಿದರು. ದಂಪತಿಗಳು ಪರಸ್ಪರ ಅನ್ಯೋನ್ಯತೆ ಮತ್ತು ಪ್ರೀತಿ, ವಿಶ್ವಾಸ ಹಾಗೂ ಸಮರ್ಪಣಾ ಮನೋಭಾವದೊಂದಿಗೆ ಜೀವಿಸಬೇಕು. ಸುಖ- ದುಃಖಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಈ ಸಂದರ್ಭದಲ್ಲಿ ಪರಸ್ಪರ ನೆರವಿಗೆ ಬಂದು, ಆದರ್ಶ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರತಿಯೊಬ್ಬ ದಂಪತಿಗೆ ನಿರಖು ಠೇವಣಿ ಸಹಿತ ಲ್ಯದ ಉಡುಪು, ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಈ ವೇಳೆ ಅನಿವಾಸಿ ಭಾರತೀಯ ಉದ್ಯಮಿ ಐವನ್ ಫೆರ್ನಾಂಡಿಸ್, ರೊಸಾರಿಯೊ ಕ್ಯಾಥೆಡ್ರಲ್ ಇದರ ಧರ್ಮಗುರು ವಂ ಜೆ.ಬಿ. ಕ್ರಾಸ್ತಾ, ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಇದರ ಸಿ ಜೆ ಸೈಮನ್, ಶ್ರೀಮತಿ ಮೇರಿ ಪಿಂಟೊ ಹಾಗೂ ಇತರರು ಉಪಸ್ಥಿತರಿದ್ದರು.
ಮಂಗಳೂರು ಧರ್ಮಪ್ರಾಂತ್ಯದ ಕಥೋಲಿಕ್ ಕ್ರೈಸ್ತ ಬಾಂಧವರೂ, ತಮ್ಮ ಸಮಾಜಕ್ಕೋಸ್ಕರ ಇಂತಹ ಪುಣ್ಯಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ. ಕಳೆದ 44 ವರ್ಷಗಳಿಂದ ಅವರು ಯಶಸ್ವಿಯಾಗಿ ನಡೆಸಿಕೊಂದು ಬರುತ್ತಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿ. 1976ರಲ್ಲಿ ಮಂಗಳೂರಿನ ರೊಸಾರಿಯೊ ಕಾಥೆದ್ರಾಲ್ ಇಗರ್ಜಿಯ ಸಂತ ವಿನ್ಸೆಂಟ್ ದೆ ಪಾವ್ಲ್ ಸಭೆಯು ತನ್ನ ಸ್ವರ್ಣ ಮಹೋತ್ಸವವನ್ನು ಆಚರಿಸುವ ನಿರ್ಧಾರವನ್ನು ಕೈಗೊಂಡಿತು. ಈ ಸಂದರ್ಭದಲ್ಲಿ ಅಂದಿನ ಮಂಗಳೂರು ಕ್ರೈಸ್ತ ಕಥೋಲಿಕ್ ಸಮಾಜಕ್ಕೆ ಅದರಲ್ಲೂ ಆರ್ಥಿಕವಾಗಿಒ ಹಿಂದುಳಿದವರಿಗೆ ಮತ್ತು ಬಡವ ಬಲ್ಲಿದರಿಗೆ ದೀರ್ಘಕಾಲಿಕವಾಗಿ ಪ್ರಯೋಜನ ಬೀಳುವಂತಹ ಯಾವುದಾದರೂ ಒಂದು ವಿಶೇಷ ಕಾರ್ಯಯೋಜನೆಯನ್ನು ಆಚರಣೆಯ ಪ್ರಮುಖ ಅಂಗವಾಗಿ ಕೈಗೊಳ್ಳಲು ತೀರ್ಮಾನವಾಯಿತು.
ಈ ದಿಶೆಯಲ್ಲಿ ರೊಸಾರಿಯೊ ಕಾಥೆದ್ರಾಲ್ ಚರ್ಚಿನ ಧರ್ಮಗುರುಗಳಾಗಿದ್ದ ವಂದನೀಯ ಫ್ರೆಡ್ ವಿ ಪಿರೇರಾ ಮತ್ತು ಸಹಾಯಕ ಧರ್ಮಗುರುಗಳಾಗಿದ್ದ ವಂದನೀಯ ಡೆನಿಸ್ ಕಾಸ್ತೆಲಿನೊ ಇವರ ಗಂಭೀರ ಚಿಂತನೆಯ ಫಲವಾಗಿ ಮಂಗಳೂರು ಧರ್ಮಪ್ರಾಂತ್ಯದ ಮಟ್ಟದಲ್ಲಿ ‘ಉಚಿತ ಸಾಮೂಹಿಕ ವಿವಾಹ ಕಾರ್ಯಯೋಜನೆಯು ಜನ್ಮವೆತ್ತಿತು.
ಆರ್ಥಿಕವಾಗಿ ಅಡಚಣೆಯುಳ್ಳವರಿಗೆ ಮತ್ತು ಬಡವರಿಗೆ ಖರ್ಚನ್ನು ಕಡಿಮೆ ಮಾಡಿ ವಿವಾಹವೆಂಬ ಪವಿತ ಸಂಸ್ಕಾರವನ್ನು ಪಡೆಯಲು ಅನುವು ಮಾಡಿ ಕೊಡುವುದೇ ಈ ಕಾರ್ಯಯೋಜನೆಗಳ ಪ್ರಮುಖ ಉದ್ದೇಶ.