ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಅಶ್ಲೀಲ ಪದ ಬಳಕೆ – ಸಿಟಿ ರವಿ ಪರಿಷತ್ ಸದಸ್ಯತ್ವ ರದ್ದುಗೊಳಿಸಿ – ವೆರೋನಿಕಾ ಕರ್ನೆಲಿಯೋ
ಉಡುಪಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಕೆ ಮಾಡಿರುವುದು ಬಿಜೆಪಿಗರ ಅಶ್ಲೀಲ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.
ಒರ್ವ ಜವಾಬ್ದಾರಿಯುತ ಪರಿಷತ್ ಸದಸ್ಯರಾಗಿ ವರ್ತಿಸಬೇಕಿದ್ದ ಬಿಜೆಪಿ ಸದಸ್ಯ ಸಿ ಟಿ ರವಿ ಅವರು ಒರ್ವ ಮಹಿಳಾ ಸಚಿವರಿಗೆ ಅಂತಹ ಅಶ್ಲೀಲ ಪದ ಬಳಸಿರುವುದಕ್ಕೆ ಈಗಾಗಲೇ ಪ್ರಕರಣ ದಾಖಲಾಗಿದ್ದು ಕೂಡಲೇ ಅವರನ್ನು ಬಂಧಿಸಬೇಕು. ಅದಲ್ಲದೆ ಸಿ ಟಿ ರವಿ ಅವರ ಪರಿಷತ್ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಇದು ಮುಂದೆ ಬೇರೆ ಯಾರೂ ಕೂಡ ಇಂತಹ ಅಸಂವಿಧಾನಿಕ ವರ್ತನೆ ತೋರಿದ್ದಲ್ಲಿ ಒಂದು ಪಾಠವಾಗಬೇಕು.
ದೇಶಕ್ಕೆ ಸಂಸ್ಕೃತಿಯ ಪಾಠ ಭೋಧಿಸುವ ಬಿಜೆಪಿಗರಿಗೆ ಒರ್ವ ಮಹಿಳೆಯೊಂದಿಗೆ ಹೇಗೆ ವರ್ತನೆ ಮಾಡಬೇಕು ಎನ್ನುವ ಕನಿಷ್ಠ ಜ್ಞಾನವೇ ಇಲ್ಲ ಎನ್ನುವುದು ಪದೇ ಪದೇ ಸಾಬೀತುಆಗಿದೆ. ಇವರ ಪಕ್ಷದ ನಾಯಕರು ಮಹಿಳೆಯರನ್ನು ಎಷ್ಟೊಂದು ನಿಕೃಷ್ಠವಾಗಿ ನಡೆಸಿಕೊಂಡಿರುವುದು ಹಲವು ಬಾರಿ ಸಾಬೀತಾಗಿದ್ದರೂ ಕೂಡ ಮತ್ತೆ ಮತ್ತೆ ಅದೇ ವರ್ತನೆ ತೋರಿಸುತ್ತಿರುವುದು ನಿಜಕ್ಕೂ ಅಸಹ್ಯಕಾರಿ ಸಂಗತಿಯಾಗಿದೆ.
ದೇಶದ ಪ್ರಧಾನಿಯವರು ಮಾತೆತ್ತಿದರೆ ಮಹಿಳೆರನ್ನು ಮಾತೆ, ತಾಯಿ ಎನ್ನುವುದಾಗಿ ಹೇಳುತ್ತಾರೆ ಆದರೆ ಕೃತಿಯಲ್ಲಿ ಪ್ರತಿ ಕ್ಷಣವೂ ಮಹಿಳೆಯರನ್ನು ಅವಮಾನಿಸುವ ಕೆಲಸ ಬಿಜೆಪಿಗರೇ ಮಾಡುತ್ತಿದ್ದಾರೆ. ಇವರದ್ದು ಒಂದು ರೀತಿ ಆಡುವುದು ವೇದ ಇಕ್ಕುವುದು ಗಾಳ ಎಂಬಂತಾಗಿದೆ. ಇವರ ಇಂತಹ ವರ್ತನೆಗೆ ರಾಜ್ಯದ ಮಹಿಳೆಯರು ಗಮನ ಹರಿಸುತ್ತಾರೆ. ಸಿ ಟಿ ರವಿ ಅವರಿಗೆ ಈಗಾಗಲೇ ಚುನಾವಣೆಯಲ್ಲಿ ಪಾಠ ಕಲಿಸಿದರೂ ಹಿಂಬಾಗಿಲ ಮೂಲಕ ಬಂದು ಪರಿಷತ್ ಸದಸ್ಯತ್ವ ಪಡೆದಿದ್ದು ತನ್ನ ಕೆಟ್ಟ ಚಾಳಿಯನ್ನು ಮುಂದುವರೆಸಿದ್ದು ಮುಂದಿನ ದಿನಗಳಲ್ಲಿ ಮಹಿಳೆಯರೇ ಸೂಕ್ತ ಉತ್ತರ ನೀಡಲಿದ್ದಾರೆ.
ಸಿಟಿ ರವಿಯವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾತನಾಡುವಾಗ ತನ್ನ ಮನೆಯಲ್ಲಿರುವ ಅವರ ತಾಯಿ ಕೂಡ ಒಂದು ಹೆಣ್ಣು ಎನ್ನುವುದನ್ನು ಮರೆತಿದ್ದಾರೆ ಅನಿಸುತ್ತದೆ. ತಮ್ಮ ಮನೆಯಲ್ಲಿ ಕೂಡ ಹೆಣ್ಣು ಮಕ್ಕಳು ಇದ್ದಾರೆ ಎನ್ನುವು ಕನಿಷ್ಠ ಜ್ಞಾನ ಇಲ್ಲದ ಸಿಟಿ ರವಿ ಅವರು ಆಡಿರುವ ಅಶ್ಲೀಲ ಪದಕ್ಕೆ ಸೂಕ್ತವಾದ ಬೆಲೆ ತೆರಲೇಬೇಕು. ಸರಕಾರ ಹಾಗೂ ಪೊಲೀಸ್ ಇಲಾಖೆ ಅವರ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಂಡು ಅವರನ್ನು ಬಂಧಿಸುವಂತೆ ವೆರೋನಿಕಾ ಕರ್ನೆಲಿಯೋ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.