ಲಾಕ್ ಡೌನ್: ಆದಿ ಉಡುಪಿಯಲ್ಲಿ ಸಾಮಾಜಿಕ ಅಂತರ ಕಾಯದೆ ತರಕಾರಿ ಖರೀದಿಗೆ ಮುಗಿಬಿದ್ದ ಜನತೆ
ಉಡುಪಿ: ಕೊರೋನಾ ವೈರಸ್ ಸೊಂಕು ಹರಡುವುದನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಆಗಿದ್ದು ಉಡುಪಿಯಲ್ಲೂ ಕೂಡ ಎಲ್ಲಾ ರೀತಿಯ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುತ್ತಿದೆ.
ಎಷ್ಟೇ ಎಚ್ಚರಿಕೆ ನೀಡಿದರೂ ಕೊರೋನಾ ಗಂಭೀರತೆ ಅರ್ಥ ಮಾಡಿಕೊಳ್ಳದ ಜನ ಬುಧವಾರ ಆದಿ ಉಡುಪಿ ತರಕಾರಿ ಮಾರ್ಕೆಟಿನಲ್ಲಿ ತರಕಾರಿ ಕೊಳ್ಳಲು ಮುಗಿಬಿದ್ದ ದೃಶ್ಯ ಕಂಡು ಬಂತು.
ಕೋರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ ಜಿಲ್ಲೆ ಉಡುಪಿ ಸೇಫ್ ಅಂದಿರುವುದು ಈಗ ಮುಳುವಾದಂತೆ ಕಾಣುತ್ತಿದೆ. ಲಾಕ್ ಡೌನ್ ನಡುವೆಯೂ ಆದಿ ಉಡುಪಿಯಲ್ಲಿ ಬುಧವಾರ ಸಂತೆ ನಡೆದಿದ್ದು ತರಕಾರಿ ಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದರು. ಈಗಾಗಲೇ ಜಿಲ್ಲಾಧಿಕಾರಿ ಎಲ್ಲಾರೀತಿಯ ಸಂತೆಗಳನ್ನು ನಿಷೇಧಿಸಿದ್ದರೂ ಕೂಡ ಅದಕ್ಕೆ ಜನರು ಬೆಲೆಯೇ ನೀಡುತ್ತಿಲ್ಲ ಎಂಬಂತೆ ಬುಧವಾರದ ದೃಶ್ಯ ಕಂಡು ಬಂತು.
ನಗರದ ಎ.ಪಿ.ಎಂ.ಸಿ ಮಾರ್ಕೆಟ್ ನಲ್ಲಿ ಕೇವಲ ಹೋಲ್ ಸೆಲ್ ವ್ಯಾಪಾರಕ್ಕೆ ಮಾತ್ರ ಅವಕಾಶವಿದ್ದರೂ ಜನರೂ ಸಾವಿರಾರು ಸಂಖ್ಯೆಯಲ್ಲಿ ತುಂಬಿದ್ದರು. ಜನರನ್ನು ನಿಯಂತ್ರಿಸಬೇಕಾದ ಪೊಲೀಸರು ಜನರಿಗೆ ಎಷ್ಟೇ ಎಚ್ಚರಿಕೆ ನೀಡಿದರೂ ಕೂಡ ಕೇಳುವ ಸ್ಥಿತಿಯಲ್ಲಿ ಜನರು ಇಲ್ಲ. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಜನರನ್ನು ಚದುರಿಸಿದರು.