ಲಾಕ್ ಡೌನ್ ಉಲ್ಲಂಘಿಸಿ ಕೋಳಿ ಅಂಕ, ಹೆಬ್ರಿ ಪೊಲೀಸರಿಂದ ದಾಳಿ – 10 ಮಂದಿ ಬಂಧನ
ಹೆಬ್ರಿ: ಕೊರೋನಾ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಹಣವನ್ನು ಪಣವನ್ನಾಗಿರಿಸಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಹೆಬ್ರಿ ಪೊಲೀಸರು ದಾಳಿ ನಡೆಸಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ವಿದ್ಯಾನಂದ ಪೂಜಾರಿ (30), ಸುದರ್ಶನ್ (35), ಸುಧಾಕರ (38), ಪ್ರಕಾಶ್ (35), ಸುರೇಶ್ (30), ರವಿ (30), ರಮೇಶ್ (43), ಶುಭಕರ (46), ರಾಘವೇಂದ್ರ (34) ಮತ್ತು ಮಹೇಶ್ ಪೂಜಾರಿ (36) ಎಂದು ಗುರುತಿಸಲಾಗಿದೆ.
ಮೇ 21 ರಂದು ಹೆಬ್ರಿ ಠಾಣಾಧಿಕಾರಿ ಸುಮಾ ಬಿ ಅವರು ರೌಂಡ್ಸ್ ನಲ್ಲಿರುವಾಗ ನಾಡ್ಪಾಲು ಗ್ರಾಮದ ಅಜ್ಜೋಳ್ಳಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿದ್ದು ಸುಮಾರು 10 ರಿಂದ 15 ಜನರು ಕೋಳಿಗಳ ಕಾಲಿಗೆ ಹರಿತವಾದ ಬಾಳುಗಳನ್ನು ಕಟ್ಟಿ ಅವುಗಳಿಗೆ ಹಿಂಸೆಯಾಗುವಂತೆ ಕಾಳಗಕ್ಕೆ ಬಿಟ್ಟು ವಿಜೇತ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದು 10 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕೋಳಿ ಅಂಕಕ್ಕೆ ಬಳಸಿದ 04 ಕೋಳಿ ಹುಂಜಗಳನ್ನು ಹಾಗೂ ಅರೋಪಿತರುಗಳ ಬಳಿ ಇದ್ದ ಕೋಳಿ ಅಂಕಕ್ಕೆ ಬಳಸಿದ ನಗದು 10,150/ರೂ ಹಾಗೂ ಕೋಳಿಗಳಿಗೆ ಕಟ್ಟಿದ ನಾಲ್ಕೂ ಬಾಳುಗಳು ಹಾಗೂ ಆರೋಪಿತರುಗಳು ಕೋಳಿ ಅಂಕಕ್ಕೆ ಬರಲು ಉಪಯೋಗಿಸಿದ 3 ಬಜಾಜ್ ಪಲ್ಸರ್ ಮೋಟಾರ್ ಸೈಕಲ್,1 ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.