ಲಾಕ್ ಡೌನ್ ವೇಳೆ ಗ್ರಾಹಕರಿಗೆ ಹೆಚ್ಚುವರಿ ವಿದ್ಯುತ್ ಬಿಲ್ – ಮೆಸ್ಕಾಂ ಅಧಿಕಾರಿಗಳೊಂದಿಗೆ ಕಾಂಗ್ರೆಸ್ ನಾಯಕರ ಸಮಾಲೋಚನೆ
ಮಂಗಳೂರು: ಲಾಕ್ ಡೌನ್ಗೊಳಗಾಗಿ ಹಲವು ಸಂಕಷ್ಟಕ್ಕೊಳಗಾಗಿದ್ದ ಜನರಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನೀಡುತ್ತಿರುವ ದುಬಾರಿ ಬಿಲ್ ಗ್ರಾಹಕರನ್ನು ಮತ್ತಷ್ಟು ಸಂಕಟಕ್ಕೆ ಗುರಿ ಮಾಡಿದ್ದು ಕರೋನ ಸಂಕಷ್ಟದಲ್ಲಿರುವ ಜನರಿಗೆ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. ಈ ನಿಟ್ಟಿನಲ್ಲಿ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ, ಮಾಜಿ ಸಚಿವರಾದ ಯು ಟಿ ಖಾದರ್ ಮತ್ತು ಅಭಯಚಂದ್ರ ಜೈನ್ ಅವರು ಮೆಸ್ಕಾಂ ಎಮ್ ಡಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ನೂರಾರು ರೂ.ಗಳ ಒಳಗೆ ಇರುತ್ತಿದ್ದ ಬಿಲ್ ಮೊತ್ತ ಹಲವೆಡೆ ಸಾವಿರ ರೂ.ಗಳನ್ನು ದಾಟಿದೆ. ಮೂರರಿಂದ ನಾಲ್ಕು ಪಟ್ಟು ಬಿಲ್ ದರ ಹೆಚ್ಚಳಗೊಂಡಿದ್ದು ಇದರಿಂದ ಜನರು ಗಾಬರಿಗೊಂಡಿದ್ದಾರೆ. ಇಲಾಖೆಯಿಂದ ಈ ಬಗ್ಗೆ ಸಮರ್ಪಕ ಮಾಹಿತಿಯೂ ಸಿಗದೆ ಜನ ಗೊಂದಲದಲ್ಲಿ ಮುಳುಗಿ ಹೋಗಿದ್ದು ಈ ಬಗ್ಗೆ ಇಲಾಖೆ ಸ್ಪಷ್ಟ ಸ್ಪಷ್ಟೀಕರಣ ನೀಡಬೇಕು ಎಂದು ಐವಾನ್ ಆಗ್ರಹಿಸಿದರು.
ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಸರಕಾರದಿಂದ ಯಾವುದೇ ಸೂಚನೆಯೂ ಬಂದಿಲ್ಲ ಆದರೆ ಬಿಲ್ ಪಾವತಿಗೆ ಕೆಲಕಾಲ ವಿನಾಯತಿ ನೀಡಿದೆ. ಅಂದರೆ ಜೂನ್ 10ರೊಳಗೆ ಬಿಲ್ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಲಾಕ್ ಡೌನ್ ಆದೇಶ ಪಾಲನೆ ಹಾಗೂ ಗ್ರಾಹಕರ ಆರೋಗ್ಯದ ಹಿತದೃಷ್ಠಿಯಿಂದ ಮೆಸ್ಕಾಂ ವೃತ್ತ ವ್ಯಾಪ್ತಿಯಲ್ಲಿಬರುವ ವಿದ್ಯುತ್ ಗ್ರಾಹಕರಿಗೆ ಏಪ್ರೀಲ್ ತಿಂಗಳಿನಲ್ಲಿ ಜಾರಿ ಮಾಡುವ ವಿದ್ಯುತ್ ಬಿಲ್ಗಳನ್ನು ಸರಾಸರಿ ಆಧಾರದ ಪ್ರಕಾರ ಬಿಲ್ ಮಾಡಲಾಗುತ್ತದೆ ಎಂದು ಎಮ್ ಡಿ ಸ್ನೇಹಲ್ ಆರ್ ಹೇಳಿದರು.
ಮೇ 1 ರಿಂದ ಮಾಪಕ ಓದುವಿಕೆ, ಬಿಲ್ ಹಂಚುವಿಕೆ ಹಾಗೂ ಬಿಲ್ ಸ್ವೀಕೃತಿ ಚಟುವಟಿಕೆ ನಿರ್ವಹಿಸಲಾಗುತ್ತದೆ. ವಾಸ್ತವಿಕ ಬಳಕೆಯಲ್ಲಿಹಾಗೂ ಸರಾಸರಿ ಬಳಕೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿಮೇ ತಿಂಗಳ ತಿಂಗಳ ಬಿಲ್ನಲ್ಲಿಸರಿಪಡಿಸಲಾಗುತ್ತದೆ ಎಂದು ಅವರು ತಿಳಿಸಿದರು.