ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ: ಪಿಂಪ್ ಸೆರೆ
ಮಂಗಳೂರು: ಮಂಗಳೂರು ನಗರದ ಕೆ.ಎಸ್ ರಾವ್ ರಸ್ತೆಯಲ್ಲಿರುವ ಲಾಡ್ಜ್ ವೊಂದರಲ್ಲಿ ಯುವತಿಯರನ್ನು ವೇಶ್ಯಾವಾಟಿಕೆಗೆ ಗ್ರಾಹಕರಿಗೆ ಒದಗಿಸುತ್ತಿದ್ದ ದಲ್ಲಾಳಿ(ಪಿಂಪ್) ಓರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ನೊಂದ ಯುವತಿಯರನ್ನು ರಕ್ಷಿಸಲಾಗಿದೆ.
ದಿನಾಂಕ: 16-09-2018 ರಂದು ಮಂಗಳೂರು ನಗರದ ಕೆ.ಎಸ್ ರಾವ್ ರಸ್ತೆಯಲ್ಲಿರುವ ಸಿಟಿ ಕಂಫರ್ಟ್ ಲಾಡ್ಜ್ ನಲ್ಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆಗೆ ಯುವತಿಯರನ್ನು ಒದಗಿಸುತ್ತಿದ್ದ ದಲ್ಲಾಳಿ (ಪಿಂಪ್) ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು ಬಾಳುಗೋಡಿ ಗ್ರಾಮದ ದೀಪಕ್ (43) ಎಂಬಾತನನ್ನು ವಶಕ್ಕೆ ಪಡೆದುಕೊಂಡು, ಆತನ ವಶದಿಂದ 2 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಈ ವೇಶ್ಯಾವಾಟಿಕೆಯಲ್ಲಿ ಯುವತಿಯರನ್ನು ಒದಗಿಸುತ್ತಿದ್ದ ಇನ್ನು ಮೂವರು ದಲ್ಲಾಳಿಗಳಾದ ನಸೀರ್ ಉಪ್ಪಿನಂಗಡಿ, ನಸೀರ್ ಆಡ್ಯಾರ್ ಪದವು ಮತ್ತು ಜೀವನ್ ಪೂಜಾರಿ ಎಂಬವರು ತಲೆಮರೆಸಿಕೊಂಡಿರುತ್ತಾರೆ. ಆರೋಪಿಗಳು ಈ ಸಿಟಿ ಕಂಪರ್ಟ್ ಲಾಡ್ಜ್ ನಲ್ಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡು ಹಣವನ್ನು ಗಳಿಸುತ್ತಿದ್ದರು… ವೇಶ್ಯಾವಾಟಿಕೆ ವೃತ್ತಿ ನಡೆಸುತ್ತಿದ್ದ ಮೂವರು ನೊಂದ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐ ಶ್ಯಾಮ್ ಸುಂದರ್, ಹಾಗೂ ಸಿಬ್ಬಂದಿಗಳು ಮತ್ತು ಮಂಗಳೂರು ಉತ್ತರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಸುರೇಶ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.