ಲಾರಿ ಚಾಲಕನ ಕೊಲೆ ಪ್ರಕರಣದ ಆರೋಪಿಯ ಬಂಧನ

Spread the love

ಲಾರಿ ಚಾಲಕನ ಕೊಲೆ ಪ್ರಕರಣದ ಆರೋಪಿಯ ಬಂಧನ

ಮಂಗಳೂರು: ಮಂಗಳೂರಿನಿಂದ ತಾಳೆ ಎಣ್ಣೆಯನ್ನು ಕೊಂಡೊಯ್ದ ಲಾರಿ ಚಾಲಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಪೋಲಿಸರು ಒರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನ್ನು ಅಸಾದುಲ್ಲಾ ಷರೀಫ್ (49) ಎಂದು ಗುರುತಿಸಲಾಗಿದೆ.

ಅಗೋಸ್ತ್ 28ರಂದು ಪಣಂಬೂರು ಠಾಣಾ ವ್ಯಾಪ್ತಿಯ ಬೈಕಂಪಾಡಿಯಲ್ಲಿರುವ ರುಚಿ ಸೋಯ ಇಂಡಸ್ಟ್ರೀಯಿಂದ ಸುಮಾರು 7,50,000 ಮೌಲ್ಯದ 1050 ಬಾಕ್ಷ್ ತಾಳೆ ಎಣ್ಣೆಯನ್ನು ಚಾಲಕ ಅನೀಲ್ ಕುಮಾರ್ ಇವರೊಂದಿಗೆ ಸುಗಮ ಕಂಪನಿಯ ಲಾರಿಯಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟದನ್ನು ತಲುಪಿಸಬೇಕಾದ ಸ್ಥಳಕ್ಕೆ ತಲುಪಿಸದೇ ಮೋಸ ಮಾಡಿರುವ ಬಗ್ಗೆ ಶಿವಗಣೇಶ್ ಟ್ರಾನ್ಸ್ ಪೋರ್ಟ್ ಮಾಲೀಕರು ಸಪ್ಟೆಂಬರ್ 30ರಂದು ನೀಡಿದ ದೂರಿನಂತೆ ವಂಚನೆ ಪ್ರಕರಣ ದಾಖಲಾಗಿರುತ್ತದೆ.

ಈ ಬಗ್ಗೆ ಪಣಂಬೂರು ಠಾಣಾ ಪಿ.ಐ ರಫೀಕ್.ಕೆ.ಎಂ. ಮತ್ತು ಪಿ.ಎಸ್.ಐ(ಕಾ,ಸು) ಉಮೇಶ್ ಕುಮಾರ್ ಎಂ.ಎನ್ ರವರು ತನಿಖೆಯನ್ನು ಮುಂದುವರಿಸಿದ್ದು, ಆರೋಪಿ ಅಸಾದುಲ್ಲಾ ಷರೀಫ್(49) ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಆತನು ತನ್ನ ಸಹಚರರೊಂದಿಗೆ ಸೇರಿಕೊಂಡು ಅನಿಲ್ ನನ್ನು ಕೊಲೆ ಮಾಡಿ ಶವವನ್ನು ರಾಮನಗರ ಜಿಲ್ಲೆಯ ಕುಂಬಳಗೋಡು ಎಂಬಲ್ಲಿ ಹೂತು ಹಾಕಿ ಲಾರಿಯಲ್ಲಿದ್ದ ಮಾಲನ್ನು ದೋಚಿರುವುದಾಗಿ ತಿಳಿಸಿರುತ್ತಾನೆ. ಅನಿಲ್ ಕುಮಾರ್ ನ ಶವವನ್ನು ಬೆಂಗಳೂರು ದಕ್ಷಿಣ ಉಪ-ವಿಭಾಗಾಧಿಕಾರಿ ಮೂಲಕ ಮಣ್ಣಿನಿಂದ ಹೊರತೆಗೆದು ಶವ ಪರೀಕ್ಷೆ ನಡೆಸಿ ವಾರೀಸುದಾರರಿಗೆ ಹಸ್ತಾಂತರಿಸಲಾಗಿದ್ದು, ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಯನ್ನು ಈ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಪೊಲೀಸು ಆಯುಕ್ತರಾದ ಟಿ. ಆರ್ ಸುರೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ-ಆಯುಕ್ತರು ಉಮಾ ಪ್ರಶಾಂತ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ ಎಸ್ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ರಫೀಕ್.ಕೆ.ಎಮ್, ಪಣಂಬೂರು ಠಾಣಾ ಪಿ.ಎಸ್.ಐ(ಕಾ.ಸು) ಉಮೇಶ್ ಕುಮಾರ್.ಎಂ.ಎನ್ ಹಾಗೂ ಪಣಂಬೂರು ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿಗಳು ಮತ್ತು ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.


Spread the love