Home Mangalorean News Kannada News ಲಿಂಗತ್ವ ಅಲ್ಪಸಂಖ್ಯಾತರಿಗೆ ಆದ್ಯತೆಯಲ್ಲಿ ಸೌಲಭ್ಯ- ಪ್ರಮೋದ್ ಮಧ್ವರಾಜ್

ಲಿಂಗತ್ವ ಅಲ್ಪಸಂಖ್ಯಾತರಿಗೆ ಆದ್ಯತೆಯಲ್ಲಿ ಸೌಲಭ್ಯ- ಪ್ರಮೋದ್ ಮಧ್ವರಾಜ್

Spread the love

ಲಿಂಗತ್ವ ಅಲ್ಪಸಂಖ್ಯಾತರಿಗೆ ಆದ್ಯತೆಯಲ್ಲಿ ಸೌಲಭ್ಯ- ಪ್ರಮೋದ್ ಮಧ್ವರಾಜ್

ಉಡುಪಿ: ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪ ಸಂಖ್ಯಾತರು ತಮಗೆ ಸಂಬಂಧಪಟ್ಟ ಯೋಜನೆಗಳಿಗೆ ಸಲ್ಲಿಸುವ ಅರ್ಜಿಗಳನ್ನು ಒಂದು ವಾರದೊಳಗೆ ಇತ್ಯರ್ಥ ಪಡಿಸುವಂತೆ ಸಂಬಂದಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಮೀನುಗಾರಿಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸೂಚಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಮತ್ತು ಅಭಿವೃದ್ದಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಿಂಗತ್ವ ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಆ ಮೂಲಕ ಅವರ ನೋವುಗಳಿಗೆ ಸ್ಪಂದಿಸಿದೆ ಮಾತ್ರವಲ್ಲದೆ ಅವರು ಸಮಾಜದಿಂದ ಏಕಾಂಗಿ ಎಂಬ ಭಾವನೆ ಬರದಂತೆ ಅವರಲ್ಲಿ ಆತ್ಮವಿಶ್ವಾಸ ಮತ್ತು ಮಾನಸಿಕ ದೃಢತೆಯನ್ನು ಮೂಡಿಸುತ್ತಿದೆ, ಅಧಿಕಾರಿಗಳೂ ಸಹ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಸಚಿವರು ಸೂಚಿಸಿದರು.

ಲಿಂಗತ್ವ ಅಲ್ಪ ಸಂಖ್ಯಾತರಿಗೆ ಜಿಲ್ಲೆಯಲ್ಲಿ ಮೈತ್ರಿ, ಸ್ವಉದ್ಯೋಗ ಮತ್ತು ವಸತಿ ಯೋಜನೆಯ ಪ್ರಯೋಜನ ಕೆಲವೇ ಮಂದಿಗೆ ದೊರೆತಿದ್ದು ಎಲ್ಲರಿಗೂ ಯೋಜನೆಗಳ ಪ್ರಯೋಜನ ಒದಗಿಸುವಂತೆ ಸಂಜೀವ ವಂಡ್ಸೆ ಕೋರಿದರು, ಲಿಂಗತ್ವ ಅಲ್ಪ ಸಂಖ್ಯಾತರು ವಿವಿಧ ಯೋಜನೆಗಳಿಗೆ ಸಲ್ಲಿಸುವ ಅರ್ಜಿಗಳ ಕುರಿತಂತೆ ಅರ್ಹ ಎಲ್ಲರಿಗೂ ಸೌಲಭ್ಯ ಒದಗಿಸುವಂತೆ ಸೂಚಿಸಿದ ಸಚಿವರು, ನಿವೇಶನ ಹಂಚಿಕೆಯಲ್ಲಿ, ಈಗಾಗಲೇ ನಿವೇಶನ ರದ್ದುಪಡಿಸಿರುವ ಪಟ್ಟಿಯಲ್ಲಿ ಆದ್ಯತೆಯ ಮೇಲೆ ಇವರಿಗೆ ನಿವೇಶನ ನೀಡುವಂತೆ ಎಲ್ಲಾ ತಹಸೀಲ್ದಾರ್‍ಗಳಿಗೆ ಸೂಚಿಸಿದರು, ಸ್ವ ಉದ್ಯೋಗ ಕೈಗೊಳ್ಳುವ ಉದ್ದೇಶಕ್ಕಾಗಿ , ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುರುತಿಸಲಾಗುವ ವೆಂಡರ್ ಝೋನ್ ನಲ್ಲಿ ವಿಕಲಚೇತನರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರಿಗೆ ಆದ್ಯತೆ ನೀಡುವಂತೆ ಜಿಲ್ಲಾ ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭಾ ಗೆ ಸೂಚಿಸಿದ ಸಚಿವರು, ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳುವ ಸಿಬ್ಬಂದಿಗಳಲ್ಲಿ ಅರ್ಹ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಅವಕಾಶ ನೀಡುವ ಕುರಿತು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ಅವರಿಗೆ ತಿಳಿಸಿದರು.

ಲಿಂಗತ್ವ ಅಲ್ಪ ಸಂಖ್ಯಾತರು ಸ್ವ ಉದ್ಯೋಗ ಕೈಗೊಳ್ಳಲು ಜಿಲ್ಲೆಗೆ ನೀಡಿರುವ ಗುರಿ ಕಡಿಮೆ ಇದ್ದು, ಅರ್ಹರು ಹೆಚ್ಚಾಗಿರುವ ಕಾರಣ ಇತರೆ ಜಿಲ್ಲೆಗಳಲ್ಲಿ ಉಳಿಕೆಯಾಗುವ ಗುರಿಯನ್ನು ವರ್ಗಾಯಿಸುವಂತೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಸಚಿವರು, ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪ ಸಂಖ್ಯಾತರ ನಿಖರ ಸಂಖ್ಯೆ ಅರಿಯುವ ಕುರಿತಂತೆ ಸರ್ವೆ ನಡೆಸುವಂತೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕಚೇರಿ ಪ್ರಾರಂಭಿಸಲು ಸೂಕ್ತ ಸ್ಥಳಾವಕಾಶ ಗುರುತಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಲಿಂಗತ್ವ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆಯ ಕುರಿತಂತೆ ಒಂದು ತಿಂಗಳ ಒಳಗೆ ಕಾರ್ಯಾಗಾರ ಏರ್ಪಡಿಸಿ, ಕಾಯ್ದೆಯ ಪ್ರಯೋಜನಗಳನ್ನು ಹಾಗೂ ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ದೊರೆಯುವ ಎಲ್ಲಾ ರೀತಿಯ ಯೋಜನೆಗಳ ಮಾಹಿತಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಪಾಶಿ, ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್, ಅಪರ ಜಿಲ್ಲಾಧಿಕಾರಿ ಅನುರಾಧ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದವರು ಉಪಸ್ಥಿತರಿದ್ದರು.


Spread the love

Exit mobile version