Home Mangalorean News Kannada News ಲೋಕಸಭಾ ಉಪ ಚುನಾವಣೆ: ಶಸ್ತ್ರಾಸ್ತ್ರಗಳ ಬಳಕೆ ನಿಷೇಧ

ಲೋಕಸಭಾ ಉಪ ಚುನಾವಣೆ: ಶಸ್ತ್ರಾಸ್ತ್ರಗಳ ಬಳಕೆ ನಿಷೇಧ

Spread the love

ಲೋಕಸಭಾ ಉಪ ಚುನಾವಣೆ: ಶಸ್ತ್ರಾಸ್ತ್ರಗಳ ಬಳಕೆ ನಿಷೇಧ

ಉಡುಪಿ: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ-2018 ಕ್ಕೆ ಸಂಬಂಧಿಸಿದಂತೆ ಚುನಾವಣೆಯ ವೇಳಾಪಟ್ಟಿಯು ಪ್ರಕಟವಾಗಿರುತ್ತದೆ. ಆ ಪ್ರಯುಕ್ತ ಅಕ್ಟೋಬರ್ 6 ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ನವೆಂಬರ್ 3 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಸಲುವಾಗಿ ಆಯುಧ ಪರವಾನಗಿ ಹೊಂದಿರುವಂತಹ ಪರವಾನಿಗೆದಾರರನ್ನು ಪೂರ್ವಭಾವಿ ಪರಿಶೀಲನೆ ಮಾಡಿ ಚುನಾವಣೆಯ ಅವಧಿಯಲ್ಲಿ ಸಾರ್ವಜನಿಕರ ಶಾಂತಿ, ಸುವ್ಯವಸ್ಥೆ ,ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಆಯುಧ ಶಸ್ತ್ರಾಸ್ತ್ರ ಮಾರಕಾಯುಧಗಳು, ಮದ್ದುಗುಂಡುಗಳನ್ನು ಹೊಂದುವುದು, ಸಾಗಿಸುವುದು ಮತ್ತು ಬಳಸುವುದರ ಮೇಲೆ ನಿರ್ಬಂದ ವಿಧಿಸಿ ಆದೇಶಿಸಲಾಗಿದೆ.

ಉಡುಪಿ ಜಿಲ್ಲಾ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸವಿರುವ ವಿಳಾಸದಲ್ಲಿ ಆಯುಧ ಪರವಾನಗಿ ಹೊಂದಿರುವ ಪರವಾನಿಗೆದಾರರು ಈ ಆದೇಶ ಹೊರಡಿಸಿದ ದಿನಾಂಕದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಳ್ಳುವವರೆಗಿನ ಅವಧಿಯಲ್ಲಿ ಯಾವುದೇ ಶಸ್ತ್ರಾಸ್ತ್ರಗಳು, ಆಯುಧಗಳು ಮತ್ತು ಮದ್ದುಗುಂಡುಗಳೊಂದಿಗೆ ಸಂಚರಿಸುವುದನ್ನು ಮತ್ತು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಆತ್ಮ ರಕ್ಷಣೆಗಾಗಿ ಮತ್ತು ಕೃಷಿ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವ ಎಲ್ಲಾ ಅಧಿಕೃತ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು (ಎಸ್.ಬಿ.ಬಿ.ಎಲ್/ಡಿ.ಬಿ.ಬಿ.ಎಲ್/ಎಸ್.ಬಿ.ಎಂ.ಎಲ್/ಡಿ.ಬಿ.ಎಂ.ಎಲ್/ಎನ್.ಪಿ.ಬಿ/ರೈಫಲ್) ಶಸ್ತ್ರ ಪರವಾನಿಗೆ ಹೊಂದಿರುವ ಎಲ್ಲಾ ವಿವಿಧ ಶಸ್ತ್ರಾಸ್ತ್ರಗಳನ್ನು ತಮ್ಮ ವಿಳಾಸ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಅಥವಾ ಅಧೀಕೃತವಾಗಿ ಪರವಾನಗಿ ಹೊಂದಿರುವ ಡೀಲರ್ ಶಿಪ್‍ಗಳಲ್ಲಿ ಮಾತ್ರ ಕಡ್ಡಾಯವಾಗಿ ವಿಳಂಬ ಮಾಡದೇ ತಕ್ಷಣವೇ ಠೇವಣಿ ಮಾಡಿ ರಶೀದಿ ಪಡೆಯಬೇಕು.

ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕದಿಂದ ಒಂದು ವಾರದ ನಂತರ ಶಸ್ತ್ರಾಸ್ತ್ರ ಠೇವಣಿ ಪಡೆದ ಠಾಣಾಧಿಕಾರಿಗಳಿಂದ ಅಥವಾ ಡೀಲರ್‍ಗಳಿಂದ ಪರವಾನಿಗೆದಾರರು ಶಸ್ತ್ರಾಸ್ತ್ರಗಳನ್ನು ಮರು ಪಡೆದುಕೊಳ್ಳಬಹುದು.

ಈ ನಿಷೇಧ ಆದೇಶವು ಸರ್ಕಾರಿ ಕರ್ತವ್ಯಕ್ಕೆ ಹಾಗೂ ಬ್ಯಾಂಕ್ ಸೆಕ್ಯೂರಿಟಿ ಸಂಸ್ಥೆಗಳ ಭದ್ರತೆ ಹಾಗೂ ಸಂರಕ್ಷತಾ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ವೇಳೆ ಶಸ್ತ್ರಾಸ್ತ್ರ ಆಯುಧ ಬಳಸುವುದಕ್ಕೆ ಅನ್ವಯವಾಗುವುದಿಲ್ಲ.

ಈ ಆದೇಶಕ್ಕೆ ವ್ಯತಿರಿಕ್ತವಾಗಿ ಹಾಗೂ ಯಾವುದೇ ರೀತಿಯ ಕಾನೂನು ಬಾಹಿರವಾಗಿ ಪರವಾನಗಿ ರಹಿತ ಶಸ್ತ್ರಾಸ್ತ್ರ/ ಆಯುಧ ಇತ್ಯಾದಿಗಳ ಸಂಗ್ರಹಣೆ ಬಳಕೆ ಸಾಗಾಟ ಮಾಡುತ್ತಿರುವ ಸುಳಿವು ದೊರಕಿದ್ದಲ್ಲಿ ಈ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ತಕ್ಷಣವೇ ಮಾಹಿತಿ ನೀಡುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version