ಲೋಕಸಭಾ ಚುನಾವಣೆಗೆ ಅಭ್ಯರ್ಥಿ; ಹೈಕಮಾಂಡ್ ಅಂತಿಮ ತೀರ್ಮಾನ -ಸಚಿವ ಖಾದರ್
ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ನಾನು ಅಭ್ಯರ್ಥಿಯಲ್ಲ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿಂದು ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಅವರು ಸಚಿವರು ಈ ರೀತಿ ಪ್ರತಿಕ್ರಿಯಿಸಿದರು.
ಲೋಕ ಸಭೆಯ ಚುನಾವಣೆಗೆ ಸಂಬಂಂಧಿಸಿದಂತೆ ಯಾರು ಅಭ್ಯರ್ಥಿ ಎಂದು ಅಂತಿಮವಾಗಿ ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಅಭ್ಯರ್ಥಿಯನ್ನು ಆರಿಸುವ ಬಗ್ಗೆ ಮಾಹಿತಿ ಸಂಗ್ರಹ ನಡೆಯುತ್ತಿದೆ. ಪಕ್ಷ ಯಾರ ಹೆಸರನ್ನೂ ಇನ್ನೂ ಅಂತಿಮಗೊಳಿಸಿಲ್ಲ. ಹೈಕಮಾಂಡ್‌ರ ತೀರ್ಮಾನಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಸಚಿವ ಖಾದರ್ ತಿಳಿಸಿದರು.
ಮಂಗಳೂರು ಸಂಸದರು ಮತ್ತು ಪಕ್ಷದ ಮುಖಂಡರಾಗಿದ್ದ ಆಸ್ಕರ್ ಫೆರ್ನಾಂಡಿಸ್, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿಯವರು ಜಿಲ್ಲೆಯಲ್ಲಿ ಯಾವುದೇ ಜಾತಿ, ಮತ ಧರ್ಮ ನೋಡದೆ ಕಾರ್ಯನಿರ್ವಹಿಸಿದ ನಾಯಕರಾಗಿ ನಮಗೆ ಮಾದರಿಯಾಗಿದ್ದಾರೆ. ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ ಇದೇ ಹಾದಿಯಲ್ಲಿ ಸಾಗಿ ಬಂದವರು. ಬಡವರ ಕೆಲಸವನ್ನು ತಾರತಮ್ಯ ಮಾಡದೆ ಮಾಡುತ್ತಾ ಬಂದವರು ಎಂದರು.
ಮುಕ್ಕಚ್ಚೇರಿ-ಸೋಮೇಶ್ವರ-ಉಚ್ಚಿಲ-ತಲಪಾಡಿ ಸಮುದ್ರ ಕಿನಾರೆಯಲ್ಲಿ ಕಡಲ್ಕೊರೆತ ತಡೆಗೋಡೆ ಕಾಮಗಾರಿ ಮಾರ್ಚ್ ಒಂದರಿಂದ ಚಾಲನೆಗೊಳ್ಳಲಿದೆ ಎಂದು ಸಚಿವ ಖಾದರ್ ಹೇಳಿದರು.
ನಗರದಲ್ಲಿ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸುವ ಅವಧಿಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಹಂತದಲ್ಲಿ ಸೂಕ್ತ ಸಮಯ ನಿಗದಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.