ಲೋಕಸಭಾ ಚುನಾವಣೆಯಲ್ಲಿ ದಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ – ಸಲೀಂ ಅಹ್ಮದ್

Spread the love

ಲೋಕಸಭಾ ಚುನಾವಣೆಯಲ್ಲಿ ದಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ – ಸಲೀಂ ಅಹ್ಮದ್

ಮಂಗಳೂರು: ಫೆ.17 ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ರವಿವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

 

ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಭಾಗವಹಿಸಿ ನಾಯಕರನ್ನುದ್ದೇಶಿಸಿ ಮಾತನಾಡಿ, ಫೆ.17 ರಂದು ಮಂಗಳೂರಿನಲ್ಲಿ ಐತಿಹಾಸಿಕ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಪ್ರತಿ ಬೂತ್ ಗಳಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೆರಗು ಮೂಡಿಸಬೇಕು. ಕಾಂಗ್ರೆಸ್ ಶಕ್ತಿ ಉಭಯ ಜಿಲ್ಲೆಯಲ್ಲಿ ಭದ್ರವಾಗಿದೆ ಎನ್ನುವ ಸಂದೇಶವನ್ನು ರಾಜ್ಯಕ್ಕೆ ರವಾನಿಸಬೇಕು ಎಂದು ಕರೆ ನೀಡಿದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಕಾಂಗ್ರೆಸ್ ಚುನಾವಣಾ ಪ್ರಚಾರ ಚುರುಕುಗೊಂಡಿದ್ದು, ಕಾರ್ಯಕರ್ತರು ಹುಮ್ಮಸಿನಿಂದ ಕೆಲಸ ಮಾಡುತ್ತಿದ್ದಾರೆ. ಈ ಎರಡು ಉಭಯ ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾಜಿ ಸಚಿವರಾದ ಬಿ.ರಮಾನಾಥ್ ರೈ, ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೊ, ಐವನ್ ಡಿಸೋಜ, ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ.ಮೋಹನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ಪದ್ಮರಾಜ್.ಆರ್, ಮಮತಾ ಗಟ್ಟಿ, ಕೃಪಾ ಆಳ್ವಾ, ಮುಖಂಡರಾದ ಶಶಿಧರ್ ಹೆಗ್ಡೆ, ಭರತ್ ಮುಂಡೋಡಿ, ಸುರೇಶ್ ಬಲ್ಲಾಳ್, ಸದಾಶಿವ ಉಳ್ಳಾಲ್, ಮನೋಹರ್ ರಾಜೀವ್, ವಿಶ್ವಾಸ್ ದಾಸ್, ಶಾಹುಲ್ ಹಮೀದ್, ಶಾಲೆಟ್ ಪಿಂಟೋ, ಡಾ. ಶೇಖರ್ ಪೂಜಾರಿ, ಸುಹಾನ್ ಆಳ್ವಾ, ಪ್ರವೀಣ್ ಆಳ್ವ, ಮೋಹನ್ ಕೋಟ್ಯಾನ್, ಪಿ.ಸಿ.ಜಯರಾಮ್, ಬೇಬಿ ಕುಂದರ್, ಜೆ.ಅಬ್ದುಲ್ ಸಲೀಂ ಮತ್ತಿತರರು ಉಪಸ್ಥಿತರಿದ್ದರು.

ಸಭೆ ಆರಂಭಕ್ಕೂ ಮುನ್ನ ಇತ್ತೀಚಿಗೆ ಅಗಲಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪದ್ಮನಾಭ ನರಿಂಗಾನ, ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯೆ ಥೆರಸಾ ಪಿಂಟೋ, ಸೇವಾದಳದ ಸಂಘಟಕ ಶಿವರಾಜ್ ಸಿಂಧ್ಯ, ಬಾಬು ಶೆಟ್ಟಿ ಮರವೂರು, ಮಾಜಿ ಉಪಮೇಯರ್ ಜ್ಯೂಲಿಯಾನ ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಎಸ್. ಅಬ್ದುಲ್ಲಾ ಅವರ ಧರ್ಮ ಪತ್ನಿಗೆ ಸಂತಾಪ ಸೂಚಿಸಲಾಯಿತು.


Spread the love