Home Mangalorean News Kannada News ಲೋಕಸಭೆಯಲ್ಲಿ ಅಡಿಕೆ ಕೃಷಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ನಳಿನ್ ಕುಮಾರ್

ಲೋಕಸಭೆಯಲ್ಲಿ ಅಡಿಕೆ ಕೃಷಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ನಳಿನ್ ಕುಮಾರ್

Spread the love

ಲೋಕಸಭೆಯಲ್ಲಿ ಅಡಿಕೆ ಕೃಷಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ನಳಿನ್ ಕುಮಾರ್

ನವದೆಹಲಿ: ಸಂಸದ ನಳಿನ್ ಕುಮಾರ್ ಕಟೀಲ್ ಲೋಕಸಭೆಯ ಶೂನ್ಯವೇಳೆಯಲ್ಲಿ ಅಡಿಕೆ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸದನದ ಗಮನ ಸೆಳೆದರು.

ಅಡಿಕೆ ಕೃಷಿಯನ್ನೇ ನಂಬಿ ಬದುಕುಸಾಗಿಸುತ್ತಿರುವ ಸಾವಿರಾರು ರೈತ ಕುಟುಂಬಗಳು ಬೆಳೆದ ಅಡಿಕೆ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಕೃಷಿಕರು ಕಂಗಾಲಾಗಿರುತ್ತಾರೆ. ಕೇಂದ್ರ ಸರಕಾರವು ಈ ಕೂಡಲೇ ಮಧ್ಯಪ್ರವೇಶಿಸಿ ಅಡಿಕೆ ಬೆಳೆಗೆ ಬೆಂಬಲ ಬೆಲೆ ಮತ್ತು ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಈ ಮೂಲಕ ಕೇಂದ್ರ ಸರಕಾರವನ್ನು ಸಂಸದರು ಆಗ್ರಹಿಸಿದರು.

ದೇಶದಲ್ಲಿ ಅಡಿಕೆ ಮಧ್ಯವರ್ತಿಗಳು ಪ್ರಮುಖವಾಗಿ ನೆರೆಯ ಬಾಂಗ್ಲಾ, ಬರ್ಮಾ, ನೇಪಾಳ, ಶ್ರೀಲಂಕಾ ಹಾಗೂ ಮಲೇಶಿಯಾ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಕಸ್ಟಂ ತೆರಿಗೆ ವಂಚಿಸಿ ಗಡಿಪ್ರದೇಶದಿಂದ ಅಕ್ರಮವಾಗಿ ಆಮದು ಮಾಡಿಕೊಳ್ಳುತ್ತಿರುವುದರಿಂದ ಹಾಗೂ ಕೊಳೆರೋಗ ಮತ್ತು ಹಳದಿರೋಗಳಗಳಂತಹಾ ಮಾರಕ ರೋಗಗಳಿಗೆ ತುತ್ತಾಗಿ ಮಾರುಕಟ್ಟೆಯಲ್ಲಿ ದೇಶೀಯ ಅಡಿಕೆಗೆ ಬೆಲೆ ಕುಸಿಯುತ್ತಿದೆ. ಅಡಿಕೆ ಮಧ್ಯವರ್ತಿಗಳು ಕಸ್ಟಂ ತೆರಿಗೆ ವಂಚಿಸಿ ಮಾಡುತ್ತಿರುವ ಈ ಅಕ್ರಮ ಆಮದಿನಿಂದಾಗಿ ಕೇಂದ್ರ ಸರಕಾರಕ್ಕೆ ವರ್ಷಕ್ಕೆ ಸುಮಾರು ರೂ.5,000 ಕೋಟಿಗಿಂತಲೂ ಅಧಿಕ ನಷ್ಟ ಉಂಟಾಗುತ್ತಿದೆ.

ಆದುದರಿಂದ ವಿದೇಶಗಳಿಂದ ಆಗುತ್ತಿರುವ ಕಳಪೆ ಗುಣಮಟ್ಟದ ಅಡಿಕೆಯ ಅಕ್ರಮ ಆಮದನ್ನು ತಡೆಯುವ ಕುರಿತು ಕೇಂದ್ರ ಸರಕಾರವು ವಿಶೇಷ ಗಮನಹರಿಸುವುದು ಹಾಗೂ ಈ ಬಗ್ಗೆ ವಿಶೇಷ ತನಿಖಾದಳವನ್ನು ನೇಮಿಸುವುದು ಅಲ್ಲದೇ ಭಾರತದಲ್ಲಿ ವಿದೇಶದಿಂದ ಅಕ್ರಮವಾಗಿ ಬರುತ್ತಿರುವ ಕಳಪೆ ಗುಣಮಟ್ಟದ ಅಡಿಕೆಯನ್ನು ಸಂಪೂರ್ಣ ನಿಷೇಧಿಸುವಂತೆ ಸಂಸದರು ಕೇಂದ್ರ ಸರಕಾರವನ್ನು ಆಗ್ರಹಿಸಿದರು.


Spread the love

Exit mobile version