ವರ್ಷದೊಳಗೆ ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಉಡುಪಿ- ಪ್ರಮೋದ್ ಮಧ್ವರಾಜ್
ಉಡುಪಿ: ಜಿಲ್ಲೆಯಲ್ಲಿ ಪ್ರತಿ ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಒಂದು ವರ್ಷದೊಳಗೆ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಸೋಮವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯು, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ನಲ್ಲಿ ಗಮನಾರ್ಹ ಸಾಧನೆ ಮಡಿದ್ದು, ಶಿಶು ಮರಣ ಪ್ರಮಾಣ ಇಡೀ ದೇಶಧಲ್ಲೇ ಕಡಿಮೆ ಇದೆ ಹಾಗೂ ತಾಯಿ ಮರಣ ಪ್ರಮಾಣ ಸಹ ಕಡಿಮೆ ಇದೆ ಆದರೆ ಜಿಲ್ಲೆಯನ್ನು ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ತ್ಯಾಜ್ಯ ವಿಲೇವಾರಿ, ಇದೊಂದು ಸಮಸ್ಯೆ ಬಗೆಹರಿದರೆ, ಉಡುಪಿ ಜಿಲ್ಲೆ ಸಮಸ್ಯೆ ಮುಕ್ತ ಜಿಲ್ಲೆಯಾಗಲಿದೆ ಎಂದರು.
ಕಸ ಉತ್ಪಾದನೆಯಾಗದ ಸ್ಥಳ ಇಲ್ಲ, ಉತ್ಪಾದನೆಯಗುವ ಕಸವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಕುರಿತಂತೆ ವೆಲ್ಲೂರು ಶ್ರೀನಿವಾಸನ್ ಅವರು ನೀಡುತ್ತಿರುವ ತರಬೇತಿಯನ್ನು ಎಲ್ಲಾ ಜನಪ್ರತಿನಿಧಿಗಳೂ ಸಹ ಕೈ ಜೋಡಿಸಬೇಕಿದೆ, ಇದರಿಂದ ಜಿಲ್ಲೆಯಲ್ಲಿ 5000 ಉದ್ಯೋಗ ಸೃಷ್ಠಿ ಸಾಧ್ಯವಿದೆ, ಕಸವನು ಸೂಕ್ತ ರೀತಿಯಲ್ಲಿ ಪರಿವರ್ತಿಸಿ ಆರ್ಥಿಕವಾಗಿ ಲಭ ಪಡೆಯಲು, ಗೊಬ್ಬರ ತಯಾರಿಸಲು ,ಪ್ರಾಣಿಗಳಿಗೆ ಆಹಾರವಾಗಿ ನೀಡಲು ನೀಡಲು ಸಾಧ್ಯವಿದೆ, ತ್ಯಾಜ್ಯ ನಿರ್ಮೂಲನೆ ಜಿಲ್ಲೆಯ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ, ಪ್ರತಿಯೊಬ್ಬ ನಾಗರೀಕರು ತಮ್ಮಲ್ಲಿ ಉತ್ಪಾದನೆಯಾಗುವ ಕಸವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸಿದರೆ ಇಡೀ ದೇಶದಲ್ಲಿ ಉಡುಪಿ ಜಿಲ್ಲೆ ತ್ಯಾಜ್ಯ ಮುಕ್ತ ಜಿಲ್ಲೆಯಾಗಲಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಮಾತನಾಡಿ, ಸಮರ್ಪಕ ಕಸ ವಿಲೇವಾರಿ ಮನೆಗಳಿಂದಲೇ ಆರಂಭವಾಗಬೇಕು, ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಸರ್ಕಾರಿ ವಸತಿಗೃಹಗಳ ಆವರಣದಲ್ಲಿ ತ್ಯಾಜ್ಯ ಮರುಬಳಕೆ ಕುರಿತು ಅಭಿಯಾನದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ವೆಲ್ಲೂರು ಶ್ರೀನಿವಾಸನ್, ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ ಬಾಲಕೃಷ್ಣ, ಜಿ.ಪಂ.ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ , ಪೌರಾಯುಕ್ತ ಮಂಜುನಾಥಯ್ಯ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭ, ಕಾಪು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.