ವಸತಿರಹಿತ ಬಡವರಿಗೆ ಮನೆ ನಿರ್ಮಾಣಕ್ಕೆ ಆದ್ಯತೆ- ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
ಮಂಗಳೂರು : ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ/ ಅರೆ ಅಲೆಮಾರಿ, ಸೂಕ್ಸ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ನಿವೇಶನ ರಹಿತರಿಗೆ ಭೂಮಿ ಮತ್ತು ಮನೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಂಟಿಯಾಗಿ ಕ್ರಿಯಾ ಯೋಜನೆ ರೂಪಿಸಿದ್ದು, ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಅವರಿಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ/ ಅರೆ ಅಲೆಮಾರಿ, ಸೂಕ್ಸ್ಮ ಮತ್ತು ಅತಿ ಸೂಕ್ಷ್ಮ ಸಮುದಾಯ ಯೋಜನೆಗಳ ಅನುಷ್ಠಾನದ ಜಲ್ಲಾ ಮಟ್ಟದ ಸಮಿತಿ ಸಭೆ, ಸಫಾಯಿ ಕರ್ಮಚಾರಿ ಪ್ರಗತಿ ಪರಿಶೀಲನಾ ಸಭೆ, ಜಿಲ್ಲಾ ಜಾಗೃತಿ ಉಸ್ತುವಾರಿ ಸಭೆ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಸಭೆ, ದೌರ್ಜನ್ಯ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಮಸ್ಯೆಗಳನ್ನು ಆಲಿಸಲು ಜನವರಿ ತಿಂಗಳಲ್ಲಿ ತಾಲೂಕು ಮಟ್ಟದಲ್ಲಿ ಸಭೆ ಕರೆದು ಸಮಸ್ಯೆ ಆಲಿಸಿ ಪರಿಹರಿಸಲು ದಿನಾಂಕ ನಿಗದಿಪಡಿಸಿದ್ದು ಎಲ್ಲರಿಗೂ ಮಾಹಿತಿ ನೀಡಿ ಭೇಟಿ ನೀಡುವುದಾಗಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹೇಳಿದರು.
ವಸತಿ ಜೊತೆಗೆ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಕೌಶಲ್ಯ ತರಬೇತಿ ನೀಡಲೂ ಯೋಜಿಸಲಾಗಿದೆ. ವಸತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳುವ ಯೋಜನೆಯಿದೆ ಎಂದರು.
ಈಗಾಗಲೇ ತಹಸೀಲ್ದಾರರಿಗೆ ಸರ್ಕಾರಿ ಭೂಮಿ ಗುರುತಿಸಲು ಸೂಚನೆ ನೀಡಲಾಗಿದೆ. ಈ ಸಂಬಂಧ ಕಾರ್ಯಪ್ರಗತಿಯಲ್ಲಿದೆ ಎಂದು ಸಹಾಯಕ ಆಯುಕ್ತರಾದ ರವಿಚಂದ್ರ ನಾಯಕ್ ಅವರು ಜಿಲ್ಲಾಧಿಕಾರಿಗಳಿಗೆ ಉತ್ತರಿಸಿದರು.
ಜಿಲ್ಲೆಯಲ್ಲಿ ಅಲೆಮಾರಿ ಜನಾಂಗದವರ ಒಟ್ಟು 814 ಕುಟುಂಬಗಳನ್ನು ಗುರುತಿಸಲಾಗಿದೆ ಎಂದು ಐಟಿಡಿಪಿ ಅಧಿಕಾರಿ ಹೇಮಲತಾ ಪ್ರಶ್ನೆಗೆ ಉತ್ತರಿಸಿದರು. ಈಗಾಗಲೇ ಕೊರಗ ಜನಾಂಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಮತ್ತು ಆರೋಗ್ಯ ಸಮೀಕ್ಷೆಗೂ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ನೀಡಿದರು.
ದೌರ್ಜನ್ಯ ತಡೆ ಕಾಯ್ದೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಹಾಗೂ ಈ ಪ್ರಕರಣಗಳ ತ್ವರಿತ ವಿಲೇಗೆ ಸಂಬಂಧಿಸಿದಂತೆ ಸಭೆಯಲ್ಲಿ ಉಪಸ್ಥಿತರಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆ ಚರ್ಚಿಸಲಾಯಿತು. ಕೆಲವು ಹಳೆಯ ಪ್ರಕರಣಗಳು ಹೈಕೋರ್ಟ್ನಲ್ಲಿ ತಡೆಯಿರುವುದರಿಂದ ವಿಳಂಬಗೊಂಡಿದೆ ಎಂದು ಅವರು ಹೇಳಿದರು.
ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಪ್ರಕರಣಗಳಿಗೆ ಮಹಾನಗರಪಾಲಿಕೆಗೆ ನಿರ್ದೇಶನಗಳನ್ನು ನೀಡಿದ ಜಿಲ್ಲಾಧಿಕಾರಿಗಳು, ಕಾರ್ಮಿಕ ಭವನ ಬೇಡಿಕೆ ಈಡೇರಿಸಲು ಅಗತ್ಯ ಮತ್ತು ತುರ್ತು ಕ್ರಮಕೈಗೊಂಡು ಮುಂದಿನ ಕಾರ್ಯಸೂಚಿಯಲ್ಲಿ ಈ ವಿಷಯ ಬರಬಾರದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಮುದಾಯದ ಮುಖಂಡರು ಕುಂದು ಕೊರತೆಗಳನ್ನು ಸಭೆಯಲ್ಲಿ ಹಂಚಿಕೊಂಡರು.