ವಾಜಪೇಯಿ ಕಟ್ಟಿ ಬೆಳೆಸಿದ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಕಣ್ಣೀರಿಟ್ಟ ಬಿಜೆಪಿ ಉಚ್ಚಾಟಿತ ರಾಜೇಶ್ ಕಾವೇರಿ
ಕುಂದಾಪುರ: 2013ರ ವಿಧಾನಸಭಾ ಚುನಾವಣೆಯ ಸಂದರ್ಭ ಬಿಜೆಪಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅಂದು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯ ಪರ ಬಿಜೆಪಿ ಬೆಂಬಲಿತ ತಾ.ಪಂ, ಜಿ.ಪಂ ಸದಸ್ಯರು ಪ್ರಚಾರಕ್ಕಿಳಿದು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ದ ಕೆಲಸ ಮಾಡಿದ್ದರು. ಆ ವೇಳೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡ ಮುಖಂಡರನ್ನು ಯಾಕೆ ಉಚ್ಚಾಟಿಸಿಲ್ಲ. ಈ ಇಬ್ಬಗೆ ನೀತಿ ಏಕೆ ಎಂದು ರಾಜೇಶ್ ಕಾವೇರಿ ಪ್ರಶ್ನಿಸಿದರು.
ಅವರು ಶುಕ್ರವಾರ ಬೆಳಗ್ಗೆ ನಗರದ ಪಾರಿಜಾತ ಹೋಟೇಲ್ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಆರು ವರ್ಷದವರೆಗೆ ನನ್ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದ್ದಾರೆ. ಆರು ವರ್ಷ ಅಲ್ಲ, 30 ವರ್ಷ ನನ್ನನ್ನು ಉಚ್ಚಾಟನೆ ಮಾಡಿದರೂ ತೊಂದರೆ ಇಲ್ಲಾ. ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ರಾಜಕೀಯ ನನ್ನ ಆಸಕ್ತಿಯ ಕ್ಷೇತ್ರವೇ ಹೊರತು ವ್ಯವಹಾರಿಕಾ ಕ್ಷೇತ್ರವಲ್ಲ. ಕುಂದಾಪುರ ಬಿಜೆಪಿಯಲ್ಲಿ ವ್ಯಕ್ತಿಪೂಜೆ ಮಾಡುವವರಿಗೆ ಮಣೆ ಹಾಕಲಾಗುತ್ತಿದೆ. ಪಕ್ಷದ ಸಿದ್ದಾಂತ, ತತ್ವವನ್ನು ಒಪ್ಪಿಕೊಂಡು ಕೆಲಸ ಮಾಡುವವರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಪೇಮೆಂಟ್ ಕಾರ್ಯಕರ್ತರು ಪಕ್ಷದೊಳಗಿದ್ದಾರೆ ಎಂದು ರಾಜೇಶ್ ಕಾವೇರಿ ಆರೋಪಿಸಿದರು.
ನನ್ನ ಮತ್ತು ಮೋಹನ್ದಾಸ್ ಶೆಣೈಯವರನ್ನು ಕೂರಿಸಿಕೊಂಡು ಸಮಸ್ಯೆ ಬಗೆಹರಿಸಲು ಪಕ್ಷದ ಮುಖಂಡರು, ಶಾಸಕರು ಮುಂದೆ ಬರಲಿಲ್ಲ. ನನ್ನನ್ನು ಉಚ್ಛಾಟಿಸುವ ಹಕ್ಕು ಕ್ಷೇತ್ರಾಧ್ಯಕ್ಷರಿಗೆ ಹೇಗೆ ಬಂತೋ ಗೊತ್ತಿಲ್ಲ. ಉಚ್ಚಾಟನೆ ಕ್ರಮವನ್ನು ಅನುಸರಿಸುವ ಮುನ್ನ ಪಕ್ಷದ ಸಂವಿಧಾನದಂತೆ ಮುಂದುವರಿಯಬೇಕು ಎನ್ನುವ ನಿಯಮಗಳಿವೆ. ಅವೆಲ್ಲವನ್ನು ಉಲ್ಲಂಘಿಸಿ ನನ್ನ ಮೇಲೆ ಕ್ರಮಕೈಗೊಂಡಿದ್ದಾರೆ. ಇದರ ಬಗ್ಗೆ ಚುನಾವಣೆಯ ನಂತರ ನಾನು ಪ್ರತಿಕ್ರಿಯಿಸುತ್ತೇನೆ. ಸೆಂಟ್ರಲ್ ವಾರ್ಡ್ನಲ್ಲಿ ಈಗಾಗಲೇ ಪ್ರಚಾರ ಕೈಗೊಂಡಿದ್ದೇನೆ. ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಚುನಾವಣೆಯಲ್ಲಿ ನನ್ನ ಗೆಲವು ಖಚಿತ ಎಂದು ಕಾವೇರಿ ಹೇಳಿದರು.
ಕುಂದಾಪುರ ಬಿಜೆಪಿಯನ್ನು ಮುನ್ನಡೆಸಲು ಯಾರೂ ಮುಂದೆ ಬಾರದ ಸಂದರ್ಭದಲ್ಲಿ ಪಕ್ಷಕ್ಕೆ ಆಸರೆಯಾಗಿ ಮುಂದಾಳತ್ವವನ್ನು ವಹಿಸಿ ಪ್ರಮಾಣಿಕ ಜವಾಬ್ದಾರಿ ನಿಭಾಯಿಸಿದ್ದೇನೆ. ಹಲವು ಬಾರಿ ಆಯ್ಕೆಗೊಂಡ ಶಾಸಕರ ಕ್ಷೇತ್ರದಲ್ಲಿ ಬಿಜೆಪಿಗೆ ಸ್ವಂತ ಕಚೇರಿ ಇರಲಿಲ್ಲ. ಆ ಸಮಯದಲ್ಲಿ ನಾನು ಮತ್ತು ನನ್ನ ಸಮಾನಮನಸ್ಕ ಗೆಳೆಯರು ಸೇರಿ ಸ್ವಂತ ಕಚೇರಿ ಮಾಡಿಕೊಂಡು ಪಕ್ಷ, ಸಂಘಟನೆಗೆ ಒತ್ತು ನೀಡಿದ್ದೇವೆ. ಅಜಾತಶತ್ರು ನನ್ನ ನೆಚ್ಚಿನ ನಾಯಕ ವಾಜಪೇಯಿ ಕಷ್ಟದಿಂದ ಕಟ್ಟಿ ಬೆಳೆಸಿದ ಪಕ್ಷದಲ್ಲಿ ಇಂದು ಎಲ್ಲವೂ ಸರಿಯಿಲ್ಲ. ಪ್ರಶ್ನೆ ಮಾಡುವವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಕಾವೇರಿ ವಾಜಪೇಯಿಯವರನ್ನು ನೆನೆದು ಕಣ್ಣೀರಿಟ್ಟು ಕ್ಷಣಕಾಲ ಗದ್ಗದಿತರಾದರು.
ಕಳೆದ ಎರಡು ವರ್ಷಗಳಿಂದ ನನ್ನನ್ನು ಮೂಲೆಗೆ ತಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕ್ಷುಲ್ಲಕ ಕಾರಣಗಳನ್ನು ಕೊಟ್ಟು ಪಕ್ಷದ ಜವಾಬ್ದಾರಿ ಹುದ್ದೆಗಳಿಂದ ವಜಾ ಮಾಡಿದ್ದಾರೆ. ಸುಳ್ಳು ಕೇಸು ದಾಖಲಿಸಿ ಜೈಲಿಗಟ್ಟುವ ಪ್ರಯತ್ನವನ್ನೂ ನಡೆಸಿದ್ದಾರೆ. ಇದೀಗ ಪುರಸಭೆ ಚುನಾವಣೆಗೆ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನಿರಾಕರಣೆ ಮಾಡಿದ್ದಾರೆ. ಇಲ್ಲಿಯವರೆಗೂ ಪಕ್ಷಕ್ಕೆ ನಿಷ್ಠನಾಗಿದ್ದೇನೆ ಹೊರತು ಯಾವುದೇ ವ್ಯಕ್ತಿ ಪೂಜೆಯನ್ನು ಮಾಡಿರಲಿಲ್ಲ. ಅದರ ಪರಿಣಾಮವೇ ಇದಕ್ಕೆ ಸಾಕ್ಷಿ. ಕುಂದಾಪುರ ಬಿಜೆಪಿಯಲ್ಲಿ ಪಕ್ಷಕ್ಕೆ ನಿಷ್ಠರಲ್ಲದ, ಕೇವಲ ವ್ಯಕ್ತಿ ಪೂಜೆಯನ್ನಷ್ಟೆ ಮಾಡಿದ ಹಲವಾರು ಮಂದಿ ಇಂದು ಮುಂಚೂಣಿಯಲ್ಲಿದ್ದಾರೆ. ಹೀಗಾಗಿರುವುದು ದುರಂತ ಎಂದು ಕಾವೇರಿ ಅಸಮಾಧಾನ ವ್ಯಕ್ತಪಡಿಸಿದರು.