ವಾಟ್ಸಾಪ್ ಮೂಲಕ ಕೋಮು ಸಾಮರಸ್ಯ ಕದಡಲು ಯತ್ನ; ಒರ್ವನ ಬಂಧನ
ಪುತ್ತೂರು: ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸಂದೇಶಗಳನ್ನು ಹರಿಯಬಿಟ್ಟು ಧರ್ಮಗಳ ನಡುವೆ ಸಾಮರಸ್ಯ ಕದಡಿದ ಆರೋಪದಲ್ಲಿ ಪೋಲಿಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಕೊಡಗು ಜಿಲ್ಲೆ ಮಡಿಕೇರಿ ಕೊಯಿನಾಡು ಗ್ರಾಮದ ಮಿಥುನ್ ಕೆ.ಬಿ. (28) ಎಂದು ಗುರುತಿಸಲಾಗಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಟಣಿಗೆ ಮುಡ್ನೂರು ಗೊಲಿತ್ತಡಿ ಎಂಬಲ್ಲಿ ಮೇ 20ರಂದು ಕಾಸರಗೋಡು ಮೂಲದ ರಾಜೇಂದ್ರ ಎ ಬಿ ಎಂಬವರು ಚಲಾಯಿಸುತ್ತಿದ್ದ ಬಸ್ಸಿಗೆ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರ ರಸ್ತೆಗೆ ಬಿದ್ದು ಗಾಯವಾಗಿತ್ತು. ಬಸ್ಸಿನ ನಿರ್ವಾಹಕ ನಾಗರಾಜ ಎಂಬವರು ಸವಾರನನ್ನು ಆಸ್ಪತ್ರೆಗೆ ದಾಖಲಿಸಲು ವಾಹನಕ್ಕಾಗಿ ಕಾಯುತ್ತಿದ್ದರು. ಈ ಸಂದರ್ಭ ಗಾಳಿಮುಖದ ಮುನಾಫ್, ನಿಝಾದ್ ಹಾಗೂ ಇತರ ಇಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಗಳ ಪೈಕಿ ಮುನಾಫ್ ಜೀವ ಬೆದರಿಕೆ ಒಡ್ಡಿದ್ದಾನೆಂದು ಆರೋಪಿಸಲಾಗಿತ್ತು.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿ, ಆರೋಪಿಗಳಾದ ಕಾಸರಗೋಡು ನಿವಾಸಿಗಳಾದ ಮುನಾಫ್, ನಿಝಾದ್ ನಟ್ಟಣಿಗೆ ಮಡ್ನೂರಿನ ಶಾಹುಲ್ ಹಮೇದ್ ಎಂಬವರನ್ನು ಮೇ 22 ರಂದು ಪೋಲಿಸರು ಗಾಳಿ ಮುಖದಲ್ಲಿ ದಸ್ತಗಿರಿ ಮಾಡಿದ್ದರು. ಇದೇ ಘಟನೆಗೆ ಸಂಬಂಧಿಸಿ ಮೇ 21 ರಂದು ನೆಟ್ಟಣಿಗೆ ಮಡ್ನೂರು ಗ್ರಾಮದ ಪರಿಸರ ಜನರ ಮೊಬೈಲ್ ವಾಟ್ಸಾಪ್ ಗಳಲ್ಲಿ ಬ್ರೇಕಿಂಗ್ ನ್ಯೂಸ್ ಗಾಳಿಮುಖ ಪರಿಸರದಲ್ಲಿ ಮತಾಂಧರ ಅಟ್ಟಹಾಸ್ ಎಂಬ ಶೀರ್ಷಿಕೆಯಡಿ ಪುತ್ತೂರು ತಾಲೂ ಗಾಳಿಮುಖ ಗೋಳಿತ್ತಡಿ ಪರಿಸರದ ಕೆಲವು ಮತಾಂಧರಿಂದ ಹಿಂಜಾವೇ ಈಶ್ವರ ಮಂಗಲ ಕಾರ್ಯಕರ್ತ ನಾಗರಜ್ ಕಲ್ಲಾಜೆ ಎಂಬವರ ಮೇಲೆ ಮಾರಾಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು ಎಂಬುದಾಗಿ ಸಂದೇಶ ಹರಿದಾಡುತ್ತಿದ್ದವು. ಈ ಬಗ್ಗೆ ವಿಚಾರ ತಿಳಿದ ಪೋಲಿಸರು ಪ್ರಕರಣ ದಾಖಲಿಸಿದ್ದರು.
ಸದ್ರಿ ಪ್ರಕರಣದಲ್ಲಿ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಮೇ 22 ರಂದು ಮಿಥುನ್ ಕೆ.ಬಿ ಎಂಬಾತನನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆದು ಗಾಯಗೊಂಡು ರಸ್ತೆಗೆ ಬಿದ್ದಿದ್ದು, ಬಸ್ಸು ನಿರ್ವಾಹಕ ಮತ್ತು ಚಾಲಕ ಶೀಘ್ರವಾಗಿ ಆಸ್ಪತ್ರೆಗೆ ರವಾನಿಸರದಿರುವುದನ್ನು ಗಮನಿಸಿ ಸ್ಥಳೀಯರು ಕೋಪಗೊಂಡು ಬಸ್ಸಿನ ನಿರ್ವಾಹಕನಿಗೆ ಹಲ್ಲೆ ನಡೆಸಿದ್ದಾರೆಯೇ ಹೊರತು ಕೋಮುದ್ವೇಷದಿಂದ ಅಲ್ಲ ಎಂದು ಪೋಲಿಸರು ತಿಳಿಸಿದ್ದಾರೆ.