ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಬರಲಿದೆ ಸಾಗಾರಮಾಲ ಯೋಜನೆ : ಜೆ.ಆರ್.ಲೋಬೊ

Spread the love

ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಬರಲಿದೆ ಸಾಗಾರಮಾಲ ಯೋಜನೆ : ಜೆ.ಆರ್.ಲೋಬೊ

ಮಂಗಳೂರು:  ಕೂಳೂರಿನಿಂದ ತಣ್ಣೀರುಬಾವಿಯಾಗಿ ಸುಲ್ತಾನ್ ಬತ್ತೇರಿ ಮೂಲಕ ಹಳೇಬಂದರು ತಲುಪಿ ಹೆದ್ದಾರಿ ಜೋಡಿಸುವ ಸಾಗರಮಾಲ ಯೋಜನೆಗೆ ರೂಪುರೇಷೆ ಸಿದ್ಧಪಡಿಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಈ ಯೋಜನೆ ಕುರಿತು ತಮ್ಮ ಕಚೇರಿಯಲ್ಲಿ ವಿವಿಧ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಈ ಯೋಜನೆ ಪೂರ್ಣಗೊಂಡರೆ ಎನ್ ಎಂಪಿಟಿ. ಹಳೆಬಂದರು ಮತ್ತು ಹೆದ್ದಾರಿ ನಡುವೆ ಸಂಪರ್ಕ ಜೋಡಿಸುತ್ತದೆ ಎಂದರು.

ಇದು ಕಾರ್ಯರೂಪಕ್ಕೆ ಬಂದರೆ ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೂ ಹೆಚ್ಚಿನ ಒತ್ತು ಸಿಗಲಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಗೊಳ್ಳಲು ರಾಷ್ರ್ಟೀಯ ಹೆದ್ದಾರಿ, ಲೋಕೋಪಯೋಗಿ ಮತ್ತು ಬಂದರು ಇಲಾಖೆ ಅಧಿಕಾರಿಗಳು ಸಹಮತ ಹೊಂದಿ ಈ ಯೋಜನೆಯ ಅಧ್ಯಯನ ವರದಿಯನ್ನು ತಯಾರಿಸುವಂತೆ ಶಾಸಕರು ತಿಳಿಸಿದರು.

ಈಗ ಸುಲ್ತಾನ್ ಬತ್ತೇರಿ ಸಮೀಪ ತೂಗು ಸೇತುವೆ ನಿರ್ಮಿಸುವ ಕುರಿತು ಯೋಚಿಸಲಾಗಿದೆ. ತೂಗು ಸೇತು ಬದಲು ಕಾಯಂ ಆಗಿ ಸೇತುವೆ ನಿರ್ಮಾಣ ಮಾಡಿದರೆ ಉಪಯುಕ್ತವಾಗುತ್ತದೆ. ಇದಕ್ಕೆ ಭೂಮಿಗೂ ಸಮಸ್ಯೆ ಉದ್ಬವಿಸದು. ಈಗಾಗಲೇ ಸಿ ಆರ್ ಝಡ್ ವ್ಯಾಪ್ತಿಯಲ್ಲಿರುವುದರಿಂದ ಸಮಸ್ಯೆಯಿಲ್ಲ ಎಂದೂ ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ತಣ್ಣೀರುಬಾವಿಯ ರಸ್ತೆಯಲ್ಲಿ 3 ಕಿಮೀ ರಸ್ತೆಯಿರುವ ಬಗ್ಗೆ ಮತ್ತು ಈ ರಸ್ತೆಯನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆಯೂ ಅಧಿಕಾರಿಗಳು ತಿಳಿಸಿದರು.

ಸಾಗರಮಾಲ ಯೋಜನೆಯನ್ನು ಜಾರಿಗೆ ತರಲು ಸಚಿವರು ಕೂಡಾ ಆಸಕ್ತಿ ತಳೆದಿದ್ದು ಈ ಯೋಜನೆಯಡಿಯೇ ಉದ್ದೇಶಿತ ಯೋಜನೆಯೂ ಬರಬೇಕಾದರೆ ಎನ್ ಎಂಪಿಟಿ, ಹಳೆಬಂದರು ಮೂಲಕವೇ ಮುಂದುವರಿಯಬೇಕು ಎಂದು ಶಾಸಕರು ವಿವರಿಸಿದರು.

ಈ ಯೋಜನೆಯ ಬಗ್ಗೆ ಅಂದಾಜು ಪತ್ರ ತಯಾರಿಸುವ ಬಗ್ಗೆ ಧರ್ಮರಾಜ್ ಅವರಿಗೆ ಶಾಸಕರು ಆದೇಶಿಸಿ ಇದಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿಯನ್ನು ನೀಡುವಂತೆಯೂ ಅಧಿಕಾರಿಗಳಿಗೆ ಶಾಸಕ ಜೆ.ಆರ್.ಲೋಬೊ ಆದೇಶಿಸಿದರು.

ಈ ಸಭೆಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್ ಕೂಡಾ ಉಪಸ್ಥಿತರಿದ್ದು ಸೂಕ್ತ ಸಲಹೆ ನೀಡಿದರು.

12 ಕೋಟಿ ವೆಚ್ಚದಲ್ಲಿ ಉರ್ವಾ ಮಾರುಕಟ್ಟೆ : ಜೆ.ಆರ್.ಲೋಬೊ

ಮಂಗಳೂರು: ಉರ್ವಾ ಮಾರುಕಟ್ಟೆ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ಜನರು ಸಹಕಾರ ನೀಡಿದರೆ ಮಾತ್ರ ಈ ಎಲಾ ಕೆಲಸಗಳೂ ಸಾಧ್ಯ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ಉರ್ವಾ ಮಾರಿಗುಡಿ ದೇವಸ್ಥಾನದ ಬಳಿ ಇರುವ ಕಟ್ಟಪುಣಿಯನ್ನು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯಾಗಿಸಿದ್ದನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಈ ಕಾಮಗಾರಿಯನ್ನು ಮಹಾನಗರಪಾಲಿಕೆ ಸಾಮಾನ್ಯ ನಿಧಿಯಿಂದ ಪೂರ್ಣಗೊಳಿಸಲಾಗಿದ್ದು  ಇಲ್ಲಿ ಹಲವಾರು ಮನೆಗಳಿದ್ದು ರಸ್ತೆಯಿಲ್ಲದೆ ಜನರು ಕಷ್ಟಪಡುತ್ತಿದ್ದರು. ಕಟ್ಟಪುಣಿಯಲ್ಲೇ ಸಂಚರಿಸುತ್ತಿದ್ದವರು ಈಗ ರಸ್ತೆಯಾಗಿರುವುದರಿಂದ ನಿರಾತಂಕವಾಗಿ ಹೋಗಿಬರಬಹುದು. ಜನರ ಸಹಕಾರ ಇದ್ದರೆ ಯಾವುದು ಸಾಧ್ಯವಿಲ್ಲವೋ ಅವುಗಳನ್ನು ಸಾಧ್ಯವಾಗಿಸಬಹುದು ಎನ್ನುವುದಕ್ಕೇ ಈ ರಸ್ತೆ ಉದಾಹರಣೆಯಾಗಿದೆ ಎಂದರು.

ಉರ್ವಾ ಮಾರುಕಟ್ಟೆ ನಿರ್ಮಾಣವಾದರೆ ಸುಲ್ತಾನ್ ಬತ್ತೇರಿಗೆ ಹೋಗುವ ರಸ್ತೆಯೂ ಮುಂದಿನ ದಿನಗಳಲಿ ಅಭಿವೃದ್ಧಿಯಾಗುವುದು. ಈ ಮೂಲಕ ಇಡೀ ಪ್ರದೇಶ ಅಭಿವೃದ್ಧಿಯನ್ನು ಕಾಣಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ರಾಧಾಕೃಷ್ಣ, ವಾರ್ಡ್ ಅಧ್ಯಕ್ಷ ಉಮೇಶ್ ಕೋಟ್ಯಾನ್, ಕೆ ಎಸ್ ಆರ್ ಟಿಸಿ ನಿರ್ದೇಶಕ ಟಿ.ಕೆ.ಸುಧೀರ್‍, ಆನಂದ, ರಮೇಶ್ ತಂತ್ರಿ, ಪುರುಷೋತ್ತಮ, ಗಣೇಶ್ , ಪ್ರವೀಣ್, ಗುತ್ತಿಗೆದಾರ ಲಿಯಾಕತ್ ಮೊದಲಾದವರು ಉಪಸ್ಥಿತರಿದ್ದರು.


Spread the love