Home Mangalorean News Kannada News ವಾಯ್ಲೆಟ್ ಪಿರೇರಾ ಸೇರಿದಂತೆ 10 ಮಂದಿ ಮಹಿಳಾ ಸಾಧಕಿಯರಿಗೆ  ಸ್ತ್ರೀ ಸಾಧನಾ ಪ್ರಶಸ್ತಿ – 2018

ವಾಯ್ಲೆಟ್ ಪಿರೇರಾ ಸೇರಿದಂತೆ 10 ಮಂದಿ ಮಹಿಳಾ ಸಾಧಕಿಯರಿಗೆ  ಸ್ತ್ರೀ ಸಾಧನಾ ಪ್ರಶಸ್ತಿ – 2018

Spread the love

ವಾಯ್ಲೆಟ್ ಪಿರೇರಾ ಸೇರಿದಂತೆ 10 ಮಂದಿ ಮಹಿಳಾ ಸಾಧಕಿಯರಿಗೆ  ಸ್ತ್ರೀ ಸಾಧನಾ ಪ್ರಶಸ್ತಿ – 2018

ಮಂಗಳೂರು: ಮ್ಯಾಂಗಲೊರಿಯನ್ ಡಾಟ್ ಕಾಮ್ ಇದರ ಮ್ಹಾಲಕರು ಹಾಗೂ ಸಂಪಾದಕಿಯಾಗಿರುವ ವಾಯ್ಲೆಟ್ ಪಿರೇರಾ ಸೇರಿದಂತೆ ಹತ್ತು ಮಂದಿ ಮಹಿಳಾ ಸಾಧಕರಿಗೆ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಕೊಡ ಮಾಡುವ ಕೆನರಾ ಕೆಥೊಲಿಕ್ ಮಹಿಳಾ ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ ಎಂದು ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಅಧ್ಯಕ್ಷರಾದ ಅನಿಲ್ ಲೋಬೊ ಹೇಳಿದರು ನಗರದ ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರ್ಚ್ 4 ರಂದು ಮಂಗಳೂರಿನ ಸಂತ ಆಗ್ನೆಸ್ ವಿಶೇಷ ಮಕ್ಕಳ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದರು. ಸಮ್ಮೇಳನದಲ್ಲಿ ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಸುಮಾರು 7 ಸಾವಿರ ಮಹಿಳೆಯರು ಭಾಗವಹಿಸಲಿದ್ದಾರೆ ಎಂದರು.

ಪ್ರಶಸ್ತಿ ಪಡೆದವರ ವಿವರ ಇಂತಿದೆ.

ಕೃಷಿ ಕ್ಷೇತ್ರದ ಸ್ತ್ರೀ ಸಾಧಕಿ: ಪಾವ್ಲಿನ್ ಪ್ಲೊಸ್ಸಿ ಪಿಂಟೊ, ತಾಕೊಡೆ -ತಾಕೊಡೆಯ ಲೆಸ್ಲಿ ಪಿಂಟೊರವರ ಪತ್ನಿಯಾದ ಪಾವ್ಲಿನ್ ಪ್ಲೊಸ್ಸಿ ಪಿಂಟೊರವರಿಗೆ ಚಿಕ್ಕಂದಿನಿಂದಲೂ ಕೃಷಿಯೆಂದರೆ ವಿಶೇಷ ಆಸಕ್ತಿ.  ಕಳೆದ 25 ವರ್ಷಗಳಿಂದ ಕೃಷಿ ಹಾಗೂ ಸಾಗುವಳಿ ಮಾಡುವ ಅವರು ತೋಟದಲ್ಲಿ ಭತ್ತ, ತೆಂಗು, ಅಡಿಕೆ, ರಬ್ಬರ್, ಕರಿಮೆಣಸು, ಬಾಳೆ ಹಾಗೂ ಹಣ್ಣುಗಳಾದ ಮಾವು, ಹಲಸು, ಚಿಕ್ಕು, ಪೇರಳೆ, ಗೇರು, ನೇರಳೆ ಹಾಗೂ ಇತರ ಜಾತಿಯ ಮರಗಳು ಇವೆ. ಇದಲ್ಲದೆ ವೀಳ್ಯದೆಲೆ ಹಾಗೂ ಅನೇಕ ತರದ ತರಕಾರಿಗಳನ್ನೂ ಅವರು ಬೆಳೆಸುತ್ತಾರೆ.  ಸಾವಯವ ಕೃಷಿಯಲ್ಲಿ ಅವರಿಗೆ ವಿಶೇಷ ಆಸಕ್ತಿ.  ಹೈನುಗಾರಿಕೆಯನ್ನು ನಡೆಸುವ ಅವರು 3 ವರ್ಷಗಳ ಕಾಲ ಬಿರಾವ್ ಹಾಲಿನ ಸೊಸಾಯಿಟಿಯ ನಿರ್ದೇಶಕರಾಗಿದ್ದರು.  ಮಂಗಳೂರು ಆಕಾಶವಾಣಿಯಲ್ಲಿ ಅವರ ಸಂದರ್ಶನ ಪ್ರಸಾರವಾಗಿದೆ.  ಬಿ.ಎ. ಪದವೀಧರರಾಗಿರುವ ಪ್ಲೋಸ್ಸಿಯವರು ಆಟೋಟಗಳಲ್ಲಿಯೂ ಅನೇಕ ಬಹುಮಾನಗಳನ್ನೂ ಗೆದ್ದಿದ್ದಾರೆ. ತಮ್ಮ ಕೆಲಸದ ಒತ್ತಡದ ನಡುವೆಯೂ ಅವರು ಸಮಾಜ ಸೇವೆಯನ್ನು ಮಾಡಿರುತ್ತಾರೆ.

ವಿಶೇಷ ಸಾಮಥ್ರ್ಯದ ಸ್ತ್ರೀ ಸಾಧಕಿ: ಜೆಸ್ಲಿನ್ ಎಲಿಜಾಬೆತ್ ಮೇರಿ ಲುವಿಸ್  : ಕಲ್ಯಾಣಪುರ -ಬಾಲ್ಯದಿಂದಲೆ ಭಿನ್ನ ಸಾಮಥ್ರ್ಯದ ಶಿಶುವಾಗಿ ಬೆಳೆದು ಬಂದ ಜೆಸ್ಲಿನ್ ಎಲಿಜಾಬೆತ್ ಮೇರಿ ಲುವಿಸ್ ಬರೇ 20 ಶೇಕಡದಷ್ಟೇ ಶ್ರವಣ ಸಾಮಥ್ರ್ಯ ಹೊಂದಿರುವ ಇವರು ಮೌಖಿಕ ಶಕ್ತಿಯನ್ನು ಹೊಂದಿರುವುದಿಲ್ಲ. ಅದಾಗ್ಯೂ ಚೆನ್ನೈ, ಕಲ್ಯಾಣುಪುರ, ಬೆಂಗಳೂರು, ಮುಂಬಾಯಿ ಮುಂತಾದ ಕಡೆ ಅವರು ತಮ್ಮ ಶಿಕ್ಷಣ ಪೂರೈಸಿದರು. ಟೈಪಿಂಗ್, ಕಂಪ್ಯೂಟರ್, ಟೇಲರಿಂಗ್, ಎಂಬ್ರೋಯ್ಡರಿ, ಫ್ಲವರ್ ಮೇಕಿಂಗ್, ಅಡುಗೆ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ತರಬೇತಿ ಸಂಪಾದಿಸಿದರು. ತನ್ನ ತರಬೇತಿಯನ್ನು ಪೂರೈಸಿದ ನಂತರ ಕೇರಳದಲ್ಲಿ ಬ್ಯೂಟೀಶಿಯನ್ ಆಗಿ ಸೇವೆ ಸಲ್ಲಿಸಿದರು. ಉಡುಪಿ ಹಾಗೂ ಮಣಿಪಾಲದಲ್ಲಿ ಜೆ’ಸ್ ಬ್ಯೂಟಿ ಸ್ಪಾ ಎಂಡ್ ಸೆಲೂನ್ ನಲ್ಲಿ 9 ವರ್ಷದಿಂದ ಬ್ಯೂಟೀಶಿಯನ್ ಆಗಿ ದುಡಿಯುತ್ತಿದ್ದಾರೆ. ಈ ಕೇಂದ್ರದಿಂದ ತರಬೇತಿ ಪಡೆದ ವಿದ್ಯಾರ್ಥಿಗಳ ಪೈಕಿ 5 ಜನರು ಭಿನ್ನ ಸಾಮಥ್ರ್ಯದವರಾಗಿರುತ್ತಾರೆ.  ಎನ್ನುವುದು ಅಭಿಮಾನದ ವಿಷಯವಾಗಿದೆ.

ಶಿಕ್ಷಣ ಕ್ಷೇತ್ರದ ಸ್ತ್ರೀ ಸಾಧಕಿ : ಕುಮಾರಿ ಜುಲಿಯಾನಾ ಲೋಬೊ :  ದೇರೆಬೈಲ್ -ಸೈಂಟ್ ಅಗ್ನೇಸ್ ಕಾಲೇಜ್ ಮಂಗಳೂರಿನಿಂದ ಗಣಿತಶಾಸ್ತ್ರದಲ್ಲಿ ಬಿ ಎ ಪದವಿಯನ್ನು ಪಡೆದ ಇವರು ವೃತ್ತಿ ಜೀವನದ ಆರಂಭದಲ್ಲಿ 5 ವರ್ಷ ಶಿಕ್ಷಕಿಯಾಗಿ ಅಪಾರ ಪರಿಶ್ರಮ ತೋರಿಸಿ ಬ್ಯಾಚಲರ್ ಆಫ್ ಟೀಚಿಂಗ್ ಪದವಿ ಸಂಪಾದಿಸಿದರು. ನಂತರ ಇವರು ಅಪೊಸ್ತಲಿಕ್ ಕಾರ್ಮೆಲ್ ಭಗಿನಿಯರಿಂದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸೆಳೆಯಲ್ಪಟ್ಟರು. ಕುಂದಾಪುರ, ಶ್ರೀಲಂಕಾ ಹಾಗೂ ಮಂಗಳೂರು ಬೆಂದೂರಿನ ಕಾರ್ಮೆಲ್ ಶಿಕ್ಷಣ ಸಂಸ್ಥೆಗಳಲ್ಲಿ ನಿಷ್ಟಾವಂತ ಹಾಗೂ ವಿದ್ಯಾರ್ಥಿ ಕೇಂದ್ರಿತ ಶಿಕ್ಷಕಿಯಾಗಿ ಹೆಸರಾಂತರಾದರು. ನಂತರ ಕಪಿತಾನಿಯೊ ಹೈಸ್ಕೂಲ್ ಆಂಜೆಲೊರ್, ಸೈಂಟ್ ಎಲೋಶಿಯಸ್  ಕೊಡಿಯಾಲ್‍ಬಯ್ಲ್ ಹಾಗೂ ರೊಜಾರಿಯೊ ಹೈಸ್ಕೂಲಿನಲ್ಲಿ ಗಣಿತ ಶಿಕ್ಷಕಿಯಾಗಿ ಪ್ರಖ್ಯಾತರಾದರು. ಸಾವಿರಾರು ವಿದ್ಯಾರ್ಥಿಗಳಿಗೆ ಗಣಿತ ಶಿಕ್ಷಣ ನೀಡಿರುವ ಇವರು ಪ್ರಸ್ತುತ 92 ವರ್ಷಗಳ ಪ್ರಾಯದ ಸಂಜೆ ಜೀವನವನ್ನು ನಡೆಸುತ್ತಿದ್ದು. ಹಲವಾರು ವಿದ್ಯಾರ್ಥಿಗಳಿಂದ ಸುತ್ತುವರೆದು ಸುಖಜೀವನ ನಡೆಸುತ್ತಿದ್ದಾರೆ.

ಉದ್ಯಮ ಕ್ಷೇತ್ರದ ಸ್ತ್ರೀ ಸಾಧಕಿ : ಇವ್ಲಾಲಿಯ ಡಿ`ಸೋಜಾ: ಬಿಜೈ -ಮಂಗಳೂರಿನ ಇವ್ಲಾಲಿಯಾ ಡಿ`ಸೋಜಾರವರು ನಾಡಿನ ಒಬ್ಬ ಯಶಸ್ವಿ ಉದ್ಯಮಿ ಆಗಿರುತ್ತಾರೆ. ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಪ್ರತಿಷ್ಠಿತ ಹಾಗೂ ಅತ್ಯುತ್ತಮ ಟೂರ್ ಆಪರೇಟರುಗಳ ಪಯ್ಕಿ ಇವರ ಸಂಸ್ಥೆ ‘ಲಿಯಾ ಟ್ರಾವೆಲ್ಸ್ ಆಂಡ್ ಟೂರ್ಸ್’ ಒಂದು.  ಸಾಮಾನ್ಯ ಪ್ರಯಾಣದ ಎಲ್ಲಾ ರೀತಿಯ ವ್ಯವಹಾರಗಳೊಂದಿಗೆ ನವ ಮಂಗಳೂರು ಬಂದರಿಗೆ ಆಗಮಿಸುವ ಐಷಾರಾಮಿ ಕ್ರೂಸ್ ಹಡಗುಗಳ ಆಧಿಕೃತ ಪ್ರತಿನಿಧಿಗಳಾಗಿ ವಾರ್ಷಿಕ ಸುಮಾರು 20-25 ಸಾವಿರ ವಿದೇಶಿ ಪ್ರವಾಸಿಗರನ್ನು ನಾಡಿಗೆ ಆಕರ್ಷಿಸುತ್ತಾರೆ. ಇವರು ವಿಮಾಣ ನಿಲ್ದಾಣ ಪ್ರಾಧಿಕಾರದ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದಾರೆ. ತಮ್ಮ ಬಿಎಸ್‍ಸಿ ಪದವಿ ಶಿಕ್ಷಣದ ನಂತರ ಮುಂಬಾಯಿಯ ಐಐಟಿಸಿ ಹಾಗೂ ಏರ್ ಇಂಡಿಯಾ ಕಾಲೆಜ್‍ನಿಂದ ‘ಟ್ರಾವೆಲ್ ಹಾಗೂ ಟೂರಿಸಂ’ನಲ್ಲಿ ವೃತ್ತಿಪರ ಡಿಪ್ಲೊಮಾ ಪಡೆದರು. ಆಥ್ಲೆಟಿಕ್ಸ್ ಹಾಗೂ ಬಾಸ್ಕೆಟ್‍ಬಾಲ್ ಕ್ರೀಡೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರಾಷ್ಟ್ರೀಯ ಕಾಲೆಜ್ ತಂಡವನ್ನೂ ಪ್ರತಿನಿಧಿಸಿದ್ದಾರೆ,  ಕೆನರಾ ಚೇಂಬರ್ ಆಫ್ ಕಾಮರ್ಸ್‍ನಲ್ಲಿ ಮಹಿಳಾ ಉದ್ಯಮಿಗಳ ಉಪ ಸಮಿತಿಯ ಅಧ್ಯಕ್ಷರು ಹಾಗೂ ರಚನಾ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿದ್ದಾರೆ.  ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿದ್ದಾರೆ.  ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಇತರ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಉತ್ತಮ ಕಾರ್ಯ ನಿರ್ವಾಹಕಿಯಾಗಿರುವ ಅವರು ಹೆಸರುವಾಸಿ ಟೋಸ್ಟ್ ಮಾಸ್ಟರ್ ಕೂಡಾ ಆಗಿದ್ದಾರೆ.  ಈಗಾಗಲೇ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.

ಸರ್ಕಾರಿ ಸೇವೆಯ ಕ್ಷೇತ್ರದ ಸಾಧಕಿ: ಲಿನೆಟ್ ಕ್ಯಾಸ್ತೆಲಿನೊ ನಿತ್ಯಾಧರನಗರ: ತೀರಾ ಬಡ ಮತ್ತು ಸಾಮಾನ್ಯ ಸಾಮಾಜಿಕ ಹಿನ್ನಲೆಯಿಂದ ಬೆಳೆದು ಬಂದ ಇವರು ಹಲವು ಸಂಘರ್ಷಗಳ ನಡುವೆಯೂ ಉನ್ನತ ಶಿಕ್ಷಣ ಸಂಪಾದಿಸಿದರು. ಮಹಿಳೆಯರು ಪೋಲೀಸು ಖಾತೆಗೆ ಆಕರ್ಷಿತರಾಗದೆ ಇದ್ದ ಆ ಕಾಲದಲ್ಲಿ ಜೀವನದ ಪಂಥಾಹ್ವಾನ ಸ್ವೀಕರಿಸಿ 1993 ರಲ್ಲಿ ಪೋಲೀಸು ಖಾತೆಗೆ ಸೇವೆಗೆ ಸೇರಿದರು. ಇವರ ಪ್ರಾಮಾಣಿಕ ಮತ್ತು ನಿಷ್ಟಾವಂತ ಸೇವೆಯನ್ನು ಗೌರವಿಸಿ ಅವರಿಗೆ ವಿವಿಧ ಭಡ್ತಿಗಳನ್ನು ನೀಡಲಾಯ್ತು. ಪ್ರಸ್ತುತ ಎಸಿಸ್ಟೆಂಟ್ ಸಬ್ ಇನ್‍ಸ್ಪೆಕ್ಟರ್ ಆಗಿ ಶ್ರಮಿಸುತ್ತಿರುವ ಇವರು ತಮ್ಮ ಹುದ್ದೆಯಲ್ಲಿರುತ್ತಾ ಕಾನೂನಿನ ಮತ್ತು ನ್ಯಾಯದ ಸುರಕ್ಷೆಗಾಗಿ ನಿರಂತರ ದುಡಿದಿರುತ್ತಾರೆ.  ಬಡಬಗ್ಗರಿಗೆ ನ್ಯಾಯ ಒದಗಿಸಲು ತನ್ನ ಎಲ್ಲಾ ಶಕ್ತಿಗಳನ್ನು ವ್ಯಯಿಸಿರುವ ಇವರು ಜನಾನುರಾಗಿಯೂ ಆಗಿರುತ್ತಾರೆ. ಒಬ್ಬ ಸಮರ್ಥ ಸರ್ಕಾರಿ ಅಧಿಕಾರಿಯಾಗಿದ್ದ ಇವರು ತನ್ನ ಬಿಡುವಿನ ಕಾಲದಲ್ಲಿ ಸಮುದಾಯದ ಹಲವಾರು ಸಂಘ ಸಂಸ್ಥೆಗಳ ಮೂಲಕ ಜನಸೇವೆಯಲ್ಲಿ ತೊಡಗಿರುತ್ತಾರೆ.

ಆರೋಗ್ಯ ಕ್ಷೇತ್ರದ ಸ್ತ್ರೀ ಸಾಧಕಿ : ಮೇರಿ ವಾಸ್, ದೇರೆಬೈಲ್: ದೆರೆಬೈಲಿನ ಮೇರಿ ವಾಸ್‍ರವರು ನರ್ಸಿಂಗ್ ಕ್ಷೇತ್ರದಲ್ಲಿ 43 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುತ್ತಾರೆ. ಪಿಯುಸಿ ಶಿಕ್ಷಣ ಮುಗಿಸುತ್ತಲೇ ನರ್ಸಿಂಗ್ ಹಾಗೂ ಸೂಲಗಿತ್ತಿಯ ಸೇವೆಯಲ್ಲಿ ತರಬೇತಿಯನ್ನು ಅವರು ಪಡೆದರು. 1974 ರಲ್ಲಿ ಸ್ಟಾಫ್ ನರ್ಸ್ ಆಗಿ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಲ್ಲಿ ಸೇವೆಗೆ ಸೇರಿದರು. 2 ವರ್ಷ ಚಿತ್ರದುರ್ಗ ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿ ಸೇವೆ ಆರಂಭಿಸಿ, 1976 ರಿಂದ 1990 ರ ತನಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಹಾಗೂ ನಂತರ 2 ವರುಷ ಇ.ಎಸ್.ಐ. ಆಸ್ಪತ್ರೆಯಲ್ಲಿ ಸೇವೆ ನೀಡಿ ಸ್ವಯಂ ನಿವೃತ್ತಿ ತೆಗೆದು ಕೊಂಡರು. 80 ರ ದಶಕದಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ರಕ್ತ ನಿಧಿ ಹೆಲ್ಪ್ ಲಾಯ್ನ್ ಸ್ಥಾಪಿಸಿದ ತಂಡದ ಸದಸ್ಯೆಯಾಗಿದ್ದರು.  ಎರಡು ವರುಷ ಸೌದಿ ಅರೇಬಿಯದ ಡಿಫೆನ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ನಂತರ 15 ವರುಷ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯಲ್ಲಿ ನರ್ಸಿಂಗ್ ಸುಪರ್‍ವೈಸರ್ ಆಗಿ ಸೇವೆ ಸಲ್ಲಿಸಿದರು.  ಪ್ರಸ್ತುತ ಕಳೆದ ಹತ್ತು ವರುಷಗಳಿಂದ ಮಂಗಳೂರು ಯೆನೆಪೆÇೀಯ ಆಸ್ಪತ್ರೆಯಲ್ಲಿ ನರ್ಸಿಂಗ್ ಸುಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.  ಆಸ್ಪತ್ರೆಯ ವಿವಿಧ ವಿಭಾಗಳಲ್ಲಿ ಸೇವೆ ಸಲ್ಲಿಸಿದ್ದಕ್ಕೋಸ್ಕರ ಅವರಿಗೆ ವಿವಿಧ ಪ್ರಶಸ್ತಿಗಳು ಲಭಿಸಿವೆ.

ಸಾಹಿತ್ಯ ಮತ್ತು ಕಲಾ ಕ್ಷೇತ್ರದ ಸ್ತ್ರೀ  ಸಾಧಕಿ :  ಮರ್ಲಿನ್ ರಸ್ಕಿನ್ಹಾ : ನಾಗೋರಿ -ನಾಡಿನಾದ್ಯಂತ ಟೆರ್ರಕೊಟ್ಟಾ ಕಲೆಗೆ ಹೆಸರಾಗಿರುವ ಆಂಜೆಲೊರ್ ಮಂಗಳೂರಿನ  ಮರ್ಲಿನ್ ರಸ್ಕಿನ್ಹಾ ತನ್ನ ಮೆಟ್ರಿಕ್ ಶಿಕ್ಷಣದ ನಂತರ ಮುಂಬಾಯಿಯ ಪ್ರತಿಷ್ಟಿತ ಜೆ ಜೆ ಸ್ಕೂಲ್ ಆಫ್ ಆರ್ಟ್ಸ್‍ನಿಂದ ಕಲಾ ವಿಷಯದಲ್ಲಿ ಡಿಪ್ಲೋಮಾ ಪಡೆದರು. ಬೆಂಗಳೂರು ಮತ್ತು ಮುಂಬಾಯಿಯ ಹೆಸರಾಂತ ಕಂಪೆನಿಗಳಲ್ಲಿ ಕಮರ್ಶಿಯಲ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ ಇವರು ಕರಾವಳಿಯ ಪ್ರಖ್ಯಾತ ಕಲಾ ಸಂಸ್ಥೆ ಸಾಯ್ಮನ್ ಆಂಡ್ ಕಂಪೆನಿಯ ಆರ್ಥರ್ ರಸ್ಕೀನ್ಹಾರೊಡನೆ ವಿವಾಹವಾದರು. ಕಲಾತ್ಮಕ ಪಾತ್ರೆ ಪಗಡಗಳ ವಿನ್ಯಾಸ ಮತ್ತು ಅಲಂಕಾರಿಕ ಸೊಬಗು ಸಾಮಾಗ್ರಿಗಳ ತಯಾರಿಕೆಯಲ್ಲಿ ಇವರು ಎತ್ತಿದ ಕೈ ಆದರು. ನಿರಂತರ ಸಂಶೋಧನೆ ಮತ್ತು ಅಧ್ಯಯನಗಳ ಮೂಲಕ ಹೊಸ ಹೊಸ ಜನಾಗತ್ಯದ ಆಕರ್ಷಕ ವಸ್ತುಗಳ ವಿನ್ಯಾಸ ಮಾಡುವುದರಲ್ಲಿ ಇವರು ಅಪಾರ ಪರಿಶ್ರಮ ಹೊಂದಿದರು. ಆಧುನಿಕ ಆಭರಣ ವಿನ್ಯಾಸ, ಮನೋಕರ್ಷಕ ವಸ್ತುಗಳ ವಿನ್ಯಾಸದಲ್ಲಿ ಇವರದು ಎತ್ತಿದ ಕೈ ಆಗಿದೆ. ಇವರು ಕರ್ನಾಟಕ ಹ್ಯಾಂಡಿಕ್ರಾಪ್ಟ್ಸ್ ಮತ್ತು ಆರ್ಟಿಸನ್ಸ್ ಇದರ ಸ್ಥಾಪಕ ಸದಸ್ಯರಾಗಿದ್ದಾರೆ. ತಮ್ಮ ಸ್ವಂತ ನಾಯಕತ್ವದಲ್ಲಿ ಹಲವಾರು ಪೇಂಯ್ಟಿಂಗ್ ಶಿಭಿರಗಳನ್ನು ಸಂಯೋಜಿಸಿರುತ್ತಾರೆ. ಹಲವಾರು ನಗರಗಳಲ್ಲಿ ಲಲಿತ ಕಲಾ ಪ್ರದರ್ಶನಗಳನ್ನು ಸಂಯೋಜಿಸಿರುತ್ತಾರೆ. ಬಡತನದ ಮತ್ತು ಇತರ ಒತ್ತಡಗಳಿಂದ ತಮ್ಮ ಶಿಕ್ಷಣವನ್ನು ಸಂಪೂರ್ಣ ಪೂರೈಸಲಾಗದ ಮಹಿಳೆಯರಿಗೆ ಟೆರ್ರಕೊಟ್ಟ ವಸ್ತು ತಯಾರಿ ತರಬೇತಿ ನೀಡಿ ಅವರು ತಮ್ಮ ಜೀವನಕ್ಕೆ ಹೊಸ ದಾರಿ ಕಂಡುಕೊಳ್ಳುವಲ್ಲಿ ಅನುಕೂಲವಾಗಿರುತ್ತಾರೆ.

ವೃತ್ತಿಪರ ಕ್ಷೇತ್ರದ ಸ್ತ್ರೀ ಸಾಧಕಿ : ವಾಯ್ಲೆಟ್ ಜೆ ಪಿರೇರಾ: ಬೆಂದುರ್

ಹಲವಾರು ಸಂಘರ್ಷಗಳ ನಡುವೆಯೂ ಕಳೆದ 15 ವರ್ಷಗಳಿಂದ ‘ಮೆಂಗಲೋರಿಯನ್ ಡಾಟ್ ಕಾಮ್’ ಎಂಬ ಕರಾವಳಿಯ ಹೆಸರಾಂತ ವಿದ್ಯುನ್ಮಾನ ಮಾಧ್ಯಮ ನಿಭಾಯಿಸುತ್ತಿರುವ ಇವರು ಸಮಾಜದಲ್ಲಿ ಧನಾತ್ಮಕ ಪತ್ರಗಾರಿಕೆಯನ್ನು ಮುನ್ನಡೆಸುತ್ತಿದ್ದಾರೆ. ಪತ್ರಗಾರಿಕೆಯೊಂದಿಗೆ ಸಮಾಜಸೇವೆಯಲ್ಲಿ ಅಪಾರ ಪರಿಶ್ರಮ ಹೊಂದಿರುವ ಇವರು ‘ಪರಿವರ್ತನಾ ಚಾರಿಟೇಬಲ್ ಟ್ರಸ್ಟ್’ ನ ಮುಖಾಂತರ ಮಂಗಳಮುಖಿಯರ ಬದುಕಿನಲ್ಲಿ ಹೊಸ ಬೆಳಕನ್ನು ಚೆಲ್ಲಲು ಶ್ರಮಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ನ್ಯಾಯ ಒದಗಿಸಲು ಅವರು ದುಡಿಯುತ್ತಿದ್ದಾರೆ. ಫಾತಿಮಾ ಎಜ್ಯುಕೇಶನ್ ಸಂಸ್ಥೆಯ ಮೂಲಕ ಅವರು ಹೆಚ್ ಐ ವಿ ಭಾದಿತ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಒದಗಿಸಲು ಅವರು ದುಡಿಯುತ್ತಿದ್ದಾರೆ.

ಸಮಾಜ ಸೇವೆಯ ಕ್ಷೇತ್ರದ ಸ್ತ್ರೀ ಸಾಧಕಿ: ಕುಮಾರಿ ರೆಮಿಡಿಯಾ ಡಿಸೋಜಾ, ಬೆಳ್ಮಣ್ : ಬೆಳ್ಮಣಿನ ರೆಮಿಡಿಯಾ ಡಿಸೋಜಾರವರು ಕಳೆದ ನಲ್ವತ್ತು ವರ್ಷಗಳಿಂದ ಸಮಾಜ ಸೇವೆಯಲ್ಲಿ ತನ್ನನೇ ತೊಡಗಿಸಿಕೊಂಡಿಸಿದ್ದಾರೆ. ಕಥೊಲಿಕ್ ಸಭಾ ಹಾಗೂ ಮಾನಸ ಟ್ರಸ್ಟಿನ ಸ್ಥಾಪಕ ಸದಸ್ಯರಾಗಿ, ಆಡಳಿತ ಟ್ರಸ್ಟಿಯಾಗಿ ಅವರು 9 ವರ್ಷ ಮಾನಸ ಪುನರ್ವಸತಿ ಕೇಂದ್ರವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಉಡುಪಿ ಜಿಲ್ಲೆಯ ಜಿಲ್ಲಾ ಪಂಚಾಯತಿಯ ಪ್ರಥಮ ಮಹಿಳಾ ಅಧ್ಯಕ್ಶರಾಗಿ ಅಪಾರ ಜನಮನ್ನಣೆಗಳಿಸಿದ್ದಾರೆ. ಭೂ ನ್ಯಾಯ ಮಂಡಳಿ, ಜಿಲ್ಲಾ ಪರಿಷಧ್ ಹಾಗೂ ಜಿಲ್ಲಾ ಪಂಚಾಯತಿಯ ಸದಸ್ಯರಾಗಿ ಅವರು ಅನೇಕ ದೀನ ದಲಿತರಿಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಎಸ್.ವಿ.ಪಿ ಸಂಘಟನೆಯ ಸದಸ್ಯರಾಗಿ ಬಡವರ, ಅಶಕ್ತರ ಹಾಗೂ ನಿರ್ಗತಿಕರ ಸೇವೆ ಮಾಡಿದ್ದಾರೆ. ಅವರಿಗೆ ಈ ತನಕ ರೋಟರಿ, ಪಿಂಗಾರ ಪ್ರಶಸ್ತಿ ಹಾಗೂ ಇತರ ಸಂಘ ಸಂಸ್ತೆಗಳಿಂದ ಪುರಸ್ಕಾರ ಲಭಿಸಿದೆ.

ಕ್ರೀಡಾ ಕ್ಷೇತ್ರದ ಸ್ತ್ರೀ ಸಾಧಕಿ: ಶ್ರೀಮತಿ ಜೊಯ್ಲಿನ್ ಮ್ಯೂರಲ್ ಲೋಬೊ ಶಿರ್ತಾಡಿ :ಟ್ರಿಪಲ್ ಜಂಪ್ ಕ್ರೀಡೆಯಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಕ್ರೀಡಾ ಸಾಧನೆ ಮಾಡಿರುವ ಶಿರ್ತಾಡಿಯ ಜೊಯ್ಲಿನ್ ಮ್ಯೂರಲ್      ಲೋಬೊರವರು ರಾಜ್ಯ ಮಟ್ಟದಲ್ಲಿ ವೈಯಕ್ತಿಕ ಚಾಂಪಿಯನ್‍ಶಿಪ್ ಪಡೆದಿರುತ್ತಾರೆ. ಎಲ್‍ಐಸಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಅವರು 5 ಬಾರಿ ವೈಯಕ್ತಿಕ ಚಾಂಪಿಯನ್‍ಶಿಪ್ ಪಡೆದಿರುತ್ತಾರೆ. ರಾಜ್ಯ ಸರ್ಕಾರದಿಂದ ಈ ಬಾಬ್ತು ಅವರಿಗೆ ಪುರಸ್ಕಾರ ಲಭಿಸಿದೆ.

 


Spread the love

Exit mobile version