Home Mangalorean News Kannada News ವಾರಾಹಿ ಸಂತ್ರಸ್ಥರಿಗೆ ವಾರದಲ್ಲಿ ಪರಿಹಾರ ನೀಡಿ- ಪ್ರಮೋದ್ ಮಧ್ವರಾಜ್

ವಾರಾಹಿ ಸಂತ್ರಸ್ಥರಿಗೆ ವಾರದಲ್ಲಿ ಪರಿಹಾರ ನೀಡಿ- ಪ್ರಮೋದ್ ಮಧ್ವರಾಜ್

Spread the love

ವಾರಾಹಿ ಸಂತ್ರಸ್ಥರಿಗೆ ವಾರದಲ್ಲಿ ಪರಿಹಾರ ನೀಡಿ- ಪ್ರಮೋದ್ ಮಧ್ವರಾಜ್

ಉಡುಪಿ: ವಾರಾಹಿ ಯೋಜನೆಯ ಸಂತ್ರಸ್ಥರಿಗೆ ಒಂದು ವಾರದೊಳಗೆ ಅವರಿಗೆ ದೊರೆಯಬೇಕಾದ ಪರಿಹಾರಗಳನ್ನು ನೀಡುವಂತೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಗುರುವಾರ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ, ವಾರಾಹಿ ಯೋಜನಾ ಪ್ರದೇಶಗಳಿಗೆ ಜೂನ್ 3 ರಂದು ಭೇಟಿ ನೀಡಿ ನಡೆಸಿದ, ಪ್ರಗತಿ ಪರಿಶೀಲನಾ ಸಭೆಯಲ್ಲಿ ನೀಡಲಾದ ನಿರ್ದೇಶನಗಳ ಪಾಲನೆ ಹಾಗೂ ಸಾರ್ವಜನಿಕರಿಂದ ಸ್ವೀಕರಿಸಿದ ದೂರುಗಳ ಪ್ರಗತಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಕ್ಕುಂಜೆ ಗ್ರಾಮದ ಸಾದಮ್ಮ ಶೆಡ್ತಿ ಎಂಬುವವರ 24 ಸೆಂಟ್ಸ್ ಜಮೀನಿನನ್ನು ಈ ಹಿಂದೆ ಭೂ ಸ್ವಾಧೀನದಿಂದ ಕೈಬಿಟ್ಟಿದ್ದು, ಆದರೆ ಪ್ರಸ್ತುತ ಅವರಿಗೆ ಯಾವುದೇ ಮಾಹಿತಿ ನೀಡದೆ ಅವರ ಜಮೀನಿನಲ್ಲಿ ಕಾಮಗಾರಿ ನೆಡೆಸಿದ್ದು, ಯಾವುದೇ ಪರಿಹಾರ ನೀಡದ ಕುರಿತು ಪರಿಶೀಲನೆ ನಡೆಸಿದ ಸಚಿವರು, ವಾರಾಹಿ ಮುಖ್ಯ ಇಂಜಿನಿಯರರು ಈ ಕುರಿತು ಪರಿಶೀಲನೆ ನೆಡಸಿ , ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡು ಒಂದು ವಾರದೊಳಗೆ ವರದಿ ನೀಡಿ, ವಾರಾಹಿ ಯೋಜನೆಗೆ ಸಂಬಂದಪಟ್ಟ ಸಾರ್ವಜನಿಕರ ದೂರುಗಳು, ಭೂ ಸ್ವಾಧೀನ ಕುರಿತ ದೂರುಗಳು ಹಾಗೂ ಸೂಕ್ತ ಪರಿಹಾರ ನೀಡುವ ಕುರಿತಂತೆ ಎಲ್ಲಾ ಪ್ರಕರಣಗಳನ್ನು ಯಾವುದೇ ಹಂತದಲ್ಲಿ ಒಂದು ವಾರದೊಳಗೆ ಇತ್ಯರ್ಥ ಪಡಿಸುವಂತೆ ಹಾಗೂ ಅಧಿಕಾರಿಗಳು ತಮ್ಮಲ್ಲಿಗೆ ಬಂದ ಸಾರ್ವಜನಿಕರ ಅರ್ಜಿಗಳು ವಿಲೇವಾರಿಯಾಗುವವರೆಗೂ ಕಾಯೊನ್ಮುಖರಾಗಿರುವಂತೆ ಸಚಿವರು ಸೂಚಿಸಿದರು.

ಹಾರ್ದಳ್ಳಿ- ಮಂಡಳ್ಳಿ ಬಳಿ ವಾರಾಹಿ ಯೋಜನೆಯಡಿ ನಿರ್ಮಿಸಲಾಗಿರುವ ಸರ್ವಿಸ್ ರಸ್ತೆಗೆ ಕೆಲವರು ಅಕ್ರಮವಾಗಿ ಬೇಲಿ ಹಾಕಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿರುವ ಕುರಿತಂತೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ 24 ಗಂಟೆಯೊಳಗೆ ಬೇಲಿ ತೆರವುಗೊಳಿಸಿ , ಸಂಬಂಪಟ್ಟವರ ವಇರುದ್ದ ಕ್ರಮ ಕೈಗೊಳ್ಳುವಂತೆ ಕೋಟಾ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಗೆ ಸಚಿವರು ಸೂಚಿಸಿದರು.

ಅಧಿಕಾರಿಗಳು ವಾರಾಹಿ ಪ್ರದೇಶದ ರೈತರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕಾರ್ಯ ನಿರ್ವಹಿಸಿ , ಆ ಭಾಗದ ಜನರ ಸಹಭಾಗಿತ್ವದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಿ ಎಂದು ಸಚಿವರು ತಿಳಿಸಿದರು.

ವಾರಾಹಿ ಯೋಜನೆಯಿಂದ 15000 ಹೆಕ್ಟೆರ್ ಕೃಷಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಿದ್ದರೂ , ಕಳೆದ 37 ವರ್ಷದಲ್ಲಿ ಕೇವಲ 4100 ಹೆಕ್ಟೇರ್ ಗೆ ಮಾತ್ರ ನೀರು ಒದಗಿಸಲಾಗಿದೆ, ಹಲವು ಗ್ರಾಮಗಳಿಗೆ ಇನ್ನೂ ನೀರಾವರಿ ಸೌಲಭ್ಯ ದೊರೆತಿಲ್ಲ, ಗ್ರಾಮಗಳಿಗೆ ನೀರು ಬರುವ ಕುರಿತು ಸ್ಪಷ್ಟಪಡಿಸುವಂತೆ ಗ್ರಾಮಸ್ಥರು ಕೋರಿದರು.

74 ಉಳ್ಳೂರು ನಲ್ಲಿ 60 ಮೀ ಆಳದಲ್ಲಿ ವಾರಾಹಿ ಸುರಂಗ ಕಾಲುವೆ ನಿರ್ಮಾಣ ಮಾಡಿದ್ದು, ಇದರಿಂದ ಸಮೀಪದ ಎಲ್ಲಾ ಬಾವಿಗಳಲ್ಲಿ ಅಂರ್ತಜಲ ಖಾಲಿಯಾಗಿ ಬಾವಿಗಳು ಒಣಗಿವೆ, ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಇದೆ ಹೀಗಾದರೆ ಇಲ್ಲಿ ವಾಸಿಸುವುದು ಹೇಗೆ ಎಂದು ಗೀತಾಲಕ್ಷ್ಮಿ ಎಂಬುವವರು ದೂರಿದರು, ಈ ಕುರಿತಂತೆ ಉಳ್ಳೂರು ನಿಂದ 4.5 ಕಿಮೀ ದೂರ ಇರುವ ವಾರಾಹಿ ಹೊಳೆಯಿಂದ ಪೈಪ್ ಲೈನ್ ಮೂಲಕ ನೀರು ಒದಗಿಸಲು 50 ಲಕ್ಷದ ಕಾಮಗಾರಿ ಕೈಗೊಳ್ಳಲು ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ವಾರಾಹಿ ಮುಖ್ಯ ಇಂಜಿನಿಯರ್ ಪದ್ಮನಾಭ ತಿಳಿಸಿದರು.

ಎಡದಂಡೆಯಲ್ಲಿ ನೀರು ಬಿಡುವ ಬಗ್ಗೆ ಅನಿಶ್ಚತತೆ ಇದೆ , ಕಾಲುವೆಯಲ್ಲಿ ನೀರು ಬಿಡುವ ಬಗ್ಗೆ ಅಧಿಕಾರಿಗಳು ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡುವಂತೆ ಹಾಗೂ ಬಾಕಿ ಕಾಮಗಾರಿಯನ್ನು ಶೀಘ್ರದಲ್ಲಿ ಮುಕ್ತಯಾಗೊಳಿಸುವಂತೆ ರೈತರು ಕೋರಿದರು, ಎಡದಂಡೆಯಲ್ಲಿ 32-38 ಕಿಮೀ ಟೆಂಡರ್ ಆಗಿದ್ದು ಕಾಮಗಾರಿ ನಡೆಯುತ್ತಿದೆ, ಮಾರ್ಚ್ 18 ರೊಳಗೆ ಮುಕ್ತಯಗೊಳ್ಳಲಿದೆ, 7 ಡಿಸ್ಟ್ರಿಬ್ಯೂಷನ್‍ಗಳ ಕಾಮಗಾರಿ ಪ್ರಗತಿಯಲ್ಲಿದೆ, 38-44 ಕಿಮೀ ಕೊನೆಯ ಹಂತ ಆಗಿದ್ದು ಇದು ಮುಕ್ತಾಯಗೊಂಡರೆ ತೆಕ್ಕಟ್ಟೆಯ ವರೆಗೆ ನೀರಾವರಿ ಸೌಲಭ್ಯ ದೊರೆಯಲಿದೆ, ಬಲದಂಡೆಯಲ್ಲಿ 70 ಎಕ್ರೆ ಅರಣ್ಯ ಭೂಮಿ ಇದ್ದು, ಈ ಕುರಿತು ನಿರಾಪೇಕ್ಷಣೆ ದೊರೆತಲ್ಲಿ ಬಲದಂಡೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ವಾರಾಹಿ ಯೋಜನೆಯ ಸಂಬಂದ ಇದುವರಿವಿಗೂ ಬಾಕಿ ಇರುವ ಪ್ರಕರಣ ಮತ್ತು ಇಂದು ಸ್ವೀಕರಿಸಿರುವ ಪ್ರಕರಣಗಳನ್ನು ಮುಂದಿನ ಸಭೆ ನಡೆಯುವ ಅಕ್ಟೋಬರ್ 28 ರೊಳಗೆ ಮುಕ್ತಾಯಗೊಳಿಸಿ ವರದಿ ನೀಡುವಂತೆ ಸಚಿವರು ಸೂಚಿಸಿದರು.

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ನಿಧನದ ಪ್ರಯುಕ್ತ ಸಂತಾಪ ಸೂಚಕವಾಗಿ ಮೌನಾಚರಣೆ ಸಲ್ಲಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಹಾಗೂ ಮಧ್ಯಾಹ್ನದ ಸಭೆಯನ್ನು ರದ್ದುಗೊಳಿಸಲಾಯಿತು.

ಸಭೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ ಚಂದ್ರ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಜಯಶ್ರೀ ಮೊಗವೀರ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್ ಉಪಸ್ಥಿತರಿದ್ದರು.


Spread the love

Exit mobile version