ವಾಹನಗಳು ಶುಲ್ಕವನ್ನು ಕಟ್ಟಿ ಸಂಚರಿಸುವಾಗ ಸೂಕ್ತವಾಗಿ ಹೆದ್ದಾರಿ ನಿರ್ವಹಣೆ ಮಾಡಿ – ಡಿಸಿ ಡಾ. ಕೆ ವಿದ್ಯಾಕುಮಾರಿ

Spread the love

ವಾಹನಗಳು ಶುಲ್ಕವನ್ನು ಕಟ್ಟಿ ಸಂಚರಿಸುವಾಗ ಸೂಕ್ತವಾಗಿ ಹೆದ್ದಾರಿ ನಿರ್ವಹಣೆ ಮಾಡಿ – ಡಿಸಿ ಡಾ. ಕೆ ವಿದ್ಯಾಕುಮಾರಿ

  • ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯನ್ನು ಕಾಲಕಾಲಕ್ಕೆ ನಿರ್ವಹಿಸುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ

ಉಡುಪಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ರಸ್ತೆಯ ನಿರ್ವಹಣೆಯನ್ನು ಕಾಲಕಾಲಕ್ಕೆ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಗುತ್ತಿಗೆದಾರರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಳೆಯಿಂದಾಗಿ ಉಂಟಾದ ಹೊಂಡ ಗುಂಡಿಗಳನ್ನು ದುರಸ್ಥಿ ಮಾಡುವ ಬಗ್ಗೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳು ಶುಲ್ಕವನ್ನು ಕಟ್ಟಿ ಸಂಚರಿಸುತ್ತವೆ. ಸದರಿ ವಾಹನಗಳು ಸರಾಗವಾಗಿ ಸಂಚರಿಸಲು ಅನುಕೂಲವಾಗುವಂತೆ ಹೆದ್ದಾರಿ ನಿರ್ವಹಣೆಯನ್ನು ಮಾಡಬೇಕು. ಮಾನ್ಸೂನ್ ಮಳೆಯಿಂದಾಗಿ ರಸ್ತೆಯಲ್ಲಿ ಹೊಂಡಗಳು ಬಿದ್ದಿವೆ ಹಾಗೂ ರಸ್ತೆ ಬದಿಯ ಬೀದಿದೀಪಗಳು ನಿರ್ವಹಣೆ ಸರಿಯಿಲ್ಲ ಎನ್ನುವ ದೂರುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿವೆ. ಕೂಡಲೇ ಈ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.

ಸ್ಥಳೀಯ ಜನರು ರಸ್ತೆ ಕುಂದುಕೊರತೆ ಬಗ್ಗೆ ದೂರು ನೀಡಿದಾಗ ಅವುಗಳಿಗೆ ಸ್ಪಂದಿಸಿ, ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ನಿರ್ವಹಣೆ ಕಾಮಗಾರಿಗಳನ್ನು ಆಗಿಂದಾಗ್ಗೆ ಸಮನ್ವಯದೊಂದಿಗೆ ಕೈಗೊಂಡು ಕಾರ್ಯನಿರ್ವಹಿಸಿದಾಗ ಜಿಲ್ಲಾಡಳಿತಕ್ಕೆ ದೂರುಗಳು ಬರುವುದಿಲ್ಲ. ಸಣ್ಣಪುಟ್ಟ ವಿಷಯಕ್ಕೆ ಸಭೆ ಕರೆದು ನಿಮಗೆ ಪ್ರತೀ ಬಾರಿ ಸೂಚಿಸಲು ಆಗುವುದಿಲ್ಲ. ಗುತ್ತಿಗೆದಾರರು, ಅಧೀನ ಸಿಬ್ಬಂದಿಗಳಿಗೆ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಸಂಬಂಧ ಸಮಸ್ಯೆಗಳಿಗೆ ಸ್ಪಂದಿಸಲು ಸೂಚನೆ ನೀಡಿ, ಕಾರ್ಯನಿರ್ವಹಿಸಿದಾಗ ಮಾತ್ರ ಸಮಸ್ಯೆಗಳು ಬಗೆಹರಿಯುತ್ತವೆ. ಇದಕ್ಕೆ ಒತ್ತು ನೀಡಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕುಂದು ಕೊರತೆಗೆ ಸಂಬಂಧಿಸಿದಂತೆ ಆನ್ಲೈನ್ ಆಪ್ ಅನ್ನು ನಿರ್ವಹಣೆ ಮಾಡುತ್ತಿದ್ದಾರೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಇದಕ್ಕೆ ಸಾರ್ವಜನಿಕರು ಅಪ್ಲೋಡ್ ಮಾಡುವುದು ಸೂಕ್ತ ಎಂದ ಅವರು, ಟೋಲ್ನ ಸಮೀಪದ 5 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ವಿನಾಯಿತಿ ಈ ಹಿಂದೆ ನೀಡಿದ ರೀತಿಯಲ್ಲಿ ನೀಡಲಾಗುತ್ತದೆ. ಆದರೆ ವಾಣಿಜ್ಯ ವಾಹನಗಳಿಗೆ ಇದು ಅನ್ವಯಿಸುವುದಿಲ್ಲ ಎಂದರು.

ಬ್ರಹ್ಮಾವರದಲ್ಲಿ ಸರ್ವೀಸ್ ರಸ್ತೆ, ಮೀಡಿಯನ್ ಓಪನಿಂಗ್, ಮೇಲ್ಸೇತುವೆ ವ್ಯವಸ್ಥೆ ಬೇಕು ಎನ್ನುವ ಬಗ್ಗೆ ಸ್ಥಳೀಯ ಜನರು ಮನವಿ ಮಾಡುತ್ತಿದ್ದಾರೆ. ಇವುಗಳನ್ನು ಬಗ್ಗೆ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದ ಅವರು, ರಸ್ತೆ ವಿಭಜಕ ತೆರವಿಗೆ, ರಸ್ತೆ ಸುರಕ್ಷತಾ ಸಭೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ವರದಿ ಆಧರಿಸಿ, ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಭಾಗವಹಿಸಿದ ಸ್ಥಳೀಯ ಪ್ರತಿನಿಧಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳ ರಿಪೇರಿ, ದಾರಿ ದೀಪಗಳ ನಿರ್ವಹಣೆ, ರಸ್ತೆಯ ಬದಿಯಲ್ಲಿ ಬೆಳೆದಿರುವ ಹುಲ್ಲುಗಳ ತೆರವು, ಪಾದಚಾರಿ ರಸ್ತೆ ನಿರ್ವಹಣೆ, ರಸ್ತೆಯ ಶೋಲ್ಡರ್ ನಿರ್ವಹಣೆ, ಬಿಳಿ ಪಟ್ಟಿ ಬಳಿಯುವುದು ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ತಹಶೀಲ್ದಾರರು, ಗುತ್ತಿಗೆದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments