ವಿಜಯನಾಥ್ ಶಣೈ ಅವರ ನಿಧನಕ್ಕೆ ಮುಖ್ಯಮಂತ್ರಿ, ಸಚಿವ ಪ್ರಮೋದ್ ಶೋಕ
ಬೆಂಗಳೂರು/ಉಡುಪಿ : ಮಣಿಪಾಲದ ಪಾರಂಪಾರಿಕ ಗ್ರಾಮದ ರೂವಾರಿ ವಿಜಯನಾಥ್ ಶೆಣೈ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಪ್ರಕೃತಿ ಸೌಂದರ್ಯದ ಸೊಬಗು ಮತ್ತು ಸೊಗಸನ್ನು ಒಂದೆಡೆ ಪ್ರದರ್ಶಿಸಬೇಕು ಎಂದು ಪ್ರಯತ್ನಿಸಿ ಯಶಸ್ಸು ಕಂಡ ವಿಜಯನಾಥ್ ಶೆಣೈ ಅವರು ದಕ್ಷಿಣ ಕನ್ನಡದಲ್ಲಿನ ಸುಂದರ, ಸಾಂಪ್ರದಾಯಿಕ ಹಾಗೂ ಪಾರಂಪರಿಕ ಮನೆಗಳಲ್ಲಿನ ಸಿರಿವಂತ ವಾಸ್ತು ಶಿಲ್ಪಗಳನ್ನು ಒಂದೆಡೆ ತಂದು ಒಂದು ಪಾರಂಪರಿಕ ಗ್ರಾಮವನ್ನೇ ಸೃಷ್ಟಿಸಿದ್ದು ಅವರ ಸಾಧನೆ ಮಾತ್ರವಲ್ಲ, ಸಾಹಸವೂ ಆಗಿದೆ ಎಂದು ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ.
ವಿಜಯನಾಥ್ ಶೆಣೈ ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ವಿಜಯನಾಥ್ ಶೆಣೈ ಅವರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ಬಳಗಕ್ಕೆ ಕರುಣಿಸಲಿ ಎಂದು ಮುಖ್ಯಮಂತ್ರಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ಸಚಿವ ಪ್ರಮೋದ್ ಮಧ್ವರಾಜ್ ತೀವ್ರ ಸಂತಾಪ
ಮಣಿಪಾಲದ ಸಂಸ್ಕøತಿ ಗ್ರಾಮದ ನಿರ್ಮಾತೃ ವಿಜಯನಾಥ ಶೆಣೈ ಅವರ ನಿಧನಕ್ಕೆ , ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.