ವಿಜಯ ಬ್ಯಾಂಕ್ ವೀಲಿನ ಕರಾವಳಿಗೆ ಮಾಡುತ್ತಿರುವ ಅನ್ಯಾಯ – ಐವನ್ ಡಿಸೋಜಾ

Spread the love

ವಿಜಯ ಬ್ಯಾಂಕ್ ವೀಲಿನ ಕರಾವಳಿಗೆ ಮಾಡುತ್ತಿರುವ ಅನ್ಯಾಯ – ಐವನ್ ಡಿಸೋಜಾ

ಮಂಗಳೂರು : ವಿಜಯ ಬ್ಯಾಂಕ್ ಕರಾವಳಿಯ ಹೆಮ್ಮೆಯ ಬ್ಯಾಂಕ್. ಜನಪರವಾಗಿ, ರೈತರಿಗಾಗಿ ಹುಟ್ಟಿಕೊಂಡ ಬ್ಯಾಂಕನ್ನು ವಿಲೀನಗೊಳಿಸಿ ಹೆಸರು ಬದಲಾಯಿಸುವುದು ಕರಾವಳಿಗೆ ಮಾಡುತ್ತಿರುವ ಅನ್ಯಾಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ದೂರಿದರು.

ನಗರದ ಪ್ರತಿಷ್ಠಿತ ವಿಜಯ ಬ್ಯಾಂಕನ್ನು ನಷ್ಟದಲ್ಲಿರುವ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡ ಜತೆ ವಿಲೀನಗೊಳಿಸುವುದನ್ನು ವಿರೋಧಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಪುರಭವನದ ಎದುರಿನ ಗಾಂಧಿ ಪ್ರತಿಮೆಗೆ ಹೂಮಾಲೆ ಹಾಕುವ ಮೂಲಕ ಉಪವಾಸ ಸತ್ಯಾಗ್ರಹ ಆರಂಭಗೊಂಡಿತು.

ವಿಜಯ ಬ್ಯಾಂಕ್ ಸ್ಥಾಪಕ ಎ.ಬಿ.ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಐವನ್ ಡಿಸೋಜ, 4000 ಕೋಟಿ ರೂ.ಗಳಿಗೂ ಅಧಿಕ ನಷ್ಟದಲ್ಲಿರುವ ಬ್ಯಾಂಕ್ ಜತೆ ಲಾಭದಲ್ಲಿರುವ ಬ್ಯಾಂಕ್ ವಿಲೀನಗೊಳಿಸುವುದು ಖಂಡನೀಯ ಎಂದರು.

ದೇಶದಲ್ಲಿ ಈಗಾಗಲೇ ವಿಲೀನಗೊಂಡ ಬ್ಯಾಂಕ್ ಗಳು ಯಾವುದೂ ಲಾಭದಲ್ಲಿಲ್ಲ. ವಿಲೀನದಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ ಎಂದ ಅವರು ಈಗಾಗಲೆ ವಿಲೀನಗೊಳಿಸಿದ ಬ್ಯಾಂಕ್ ಗಳ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತ ಪತ್ರವನ್ನು ಕೇಂದ್ರ ಸರಕಾರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಸಕಾರಣವಿಲ್ಲದೆ ಕರಾವಳಿಯ ಬ್ಯಾಂಕ್ ವಿಲೀನದ ಬಗ್ಗೆ ಸಂಸದರು ಮೌನವಾಗಿರುವುದು ಬೇಸರ ತಂದಿದೆ. ವಿಲೀನ ಪ್ರಕ್ರಿಯೆ ಹಿಂಪಡೆಯುವವರೆಗೆ ಹೋರಾಟ ಮುಂದುವರಿಯಲಿದೆ. ಪ್ರಾಣ ನೀಡಿಯಾದರೂ ಸರಿ ವಿಲೀನವನ್ನು ತಡೆಯಲಾಗುವುದು ಎಂದು ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.

ಕಪ್ಪು ಪಟ್ಟಿ ಧರಿಸಿ ನಡೆದ ಪ್ರತಿಭಟನೆಯಲ್ಲಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಮಂಗಳೂರು ವಿಭಾಗದ ಅಧ್ಯಕ್ಷ ಸುರೇಂದ್ರನ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಉಪಮೇಯರ್ ಮುಹಮ್ಮದ್ ಕೆ., ಶಶಿಧರ್ ಹೆಗ್ಡೆ, ಸದಾಶಿವ ಉಳ್ಳಾಲ್, ಅಶೋಕ್ ಡಿ.ಕೆ. ಮೊದಲಾದ ಮುಖಂಡರು ಭಾಗವಹಿಸಿದ್ದರು.


Spread the love