ವಿಟ್ಲ ಪೊಲೀಸರಿಂದ 200 ದನದ ಚರ್ಮ, 8 ದನಗಳು ಪೊಲೀಸ್ ವಶಕ್ಕೆ
ವಿಟ್ಲ: ವಿಟ್ಲ ಪೊಲೀಸರ ತಂಡ ಅಕ್ರಮ ಕಸಾಯಿಖಾನೆ ಮೇಲೆ ದಾಳಿ ನಡೆಸಿ 200 ದನದ ಚರ್ಮ, 8 ಗೋವುಗಳ ಸಹಿತ ಹಲವು ವಾಹನಗಳನ್ನು ವಶಕ್ಕೆ ಪಡೆದ ಘಟನೆ ಸಾಲೆತ್ತೂರಿನಲ್ಲಿ ಗುರುವಾರ ನಡೆದಿದೆ.
ಕೊಳ್ನಾಡು ಕಟ್ಟತ್ತಿಲ ಮಠ ನಿವಾಸಿ ಹಾರಿಸ್ ಯಾನೇ ಮಹಮ್ಮದ್ ಹಾರೀಸ್ (22)ನನ್ನು ಪೊಲೀಸರು ಬಂಧಿಸಿದ್ದಾರೆ.
ದನ ಕಳ್ಳತನದ ಮಾಹಿತಿ ಆಧರಿಸಿ ಪೊಲೀಸರ ತಂಡ ಕೊಳ್ನಾಡಿನ ಮನೆಯೊಂದಕ್ಕೆ ದಾಳಿ ನಡೆಸಿದ ಸಂದರ್ಭ ಹಾರೀಸ್ ಪರಾರಿಯಾಗಲು ಯತ್ನಿಸಿದ ವೇಳೆ ತೋಟದಲ್ಲಿ ಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದಾನೆ. ಈ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ಸಮಯದಲ್ಲಿ ಆತ ಪೊಲೀಸ
ರಿಗೆ ಕಸಾಯಿಖಾನೆ ಕುರಿತಾಗಿ ಸಮಗ್ರ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಆತ ನೀಡಿದ ಮಾಹಿತಿ ಆಧರಿಸಿ ಸಾಲೆತ್ತೂರು ಐತ್ತಕುಮೇರು ಭಾಗಕ್ಕೆ ಪೊಲೀಸ್ ತಂಡ ದಾಳಿ ನಡೆಸಿದ್ದು, ಅಲ್ಲಿ 8 ಗೋವು, 200 ದನದ ಚರ್ಮ ಸ್ಥಳದಲ್ಲಿ ಪತ್ತೆಯಾಗಿದೆ. ಅಕ್ರಮವಾಗಿ ಕಸಾಯಿಖಾನೆ ನಡೆಸಲು ಬಳಸಿದ್ದರೆನ್ನಲಾದ ನಾಲ್ಕು ದ್ವಿಚಕ್ರ ವಾಹನ, ಆಟೊ, ಅಶೋಕ್ ಲೈಲ್ಯಾಂಡ್ ವಾಹನ ಸೇರಿದಂತೆ ಮಾಂಸ ಮಾಡಲು ಬಳಸುವ ಹಲವು ಸಾಮಗ್ರಿಗಳನ್ನು ಸ್ಥಳದಲ್ಲಿ ವಶಕ್ಕೆ ಪಡೆದಿದ್ದಾರೆ.