ವಿಟ್ಲ: ಮರಳು ಸಾಗಾಟದ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನಪ್ಪಿ ಮೂವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರಿಯ ಹೆದ್ದಾರಿಯ ಸೂರುಕುಮೇರಿಯಲ್ಲಿ ಶುಕ್ರವಾರ ಜರುಗಿದೆ.
ಪುತ್ತೂರು ನೆಹರೂ ನಗರದ ಶೇವಿರೆ ನಿವಾಸಿಗಳು ಮಂಗಳೂರು ಕಡೆಗೆ ಸಾಗುತ್ತಿದ್ದ ಆಲ್ಟೋ ಕಾರಿಗೆ ಎದುರಿನಿಂದ ಬಂದ ಲಾರಿ ಬಡಿದಿದ್ದು, ಸರಸ್ವತಿ (84) ಸ್ಥಳದಲ್ಲೇ ಮೃತಪಟ್ಟರು. ಕಾರು ಚಲಾಯಿಸುತ್ತಿದ್ದ ರಾಮಚಂದ್ರ (32), ಶ್ರೀನಿವಾಸ (52), ಕಾಂಚನ (40) ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಮಚಂದ್ರ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಎಲ್ಲ ಗಾಯಾಳುಗಳನ್ನು 108 ಮತ್ತು ಖಾಸಗಿ ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನಿಂದ ಮೈಸೂರು ಕಡೆಗೆ ಅಧಿಕ ಭಾರ ಹೊತ್ತು ಸಾಗುತ್ತಿದ್ದ ಲಾರಿ ತಿರುವಿನಲ್ಲಿ ಆಲ್ಟೋ ಕಾರಿಗೆ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಲಾರಿ ಕಾರನ್ನು 50 ಮೀ. ದೂರದವರೆಗೆ ಎಳೆದೊಯ್ದು ಚರಂಡಿಗೆ ತಳ್ಳಿದೆ. ಲಾರಿಯೂ ಪಕ್ಕದಲ್ಲಿದ್ದ ಗೋಡೆಗೆ ಬಡಿದಿದ್ದು, ಮುಂಭಾಗದ ಚಕ್ರಗಳೂ ಕಿತ್ತು ಹೋಗಿದೆ. ಸ್ಥಳೀಯರು ಸೇರುತ್ತಿದ್ದಂತೆಯೇ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಂಟ್ವಾಳ ವತ್ತ ನಿರೀಕ್ಷಕ ಬೆಳ್ಳಿಯಪ್ಪ, ವಿಟ್ಲ ಎಸ್‌ಐ ಪ್ರಕಾಶ್ ದೇವಾಡಿಗ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕ್ರೇನ್, ಜೆಸಿಬಿ ಸಹಾಯದಿಂದ ವಾಹನಗಳನ್ನು ತೆರವುಗೊಳಿಸಲಾಯಿತು.