ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಮಂಗಳೂರು: ವಾಮಂಜೂರಿನ ಕರಾವಳಿ ಕಾಲೇಜು ಆಫ್ ಫಾರ್ಮಸಿ ಬಸ್ಸು ತಂಗುದಾಣದ ಸಮೀಪದಲ್ಲಿ ಹೊಂಡಾ ಆಕ್ಟಿವಾ ಮತ್ತು ಸುಝುಕಿ ಆಕ್ಸೆಸ್ ಸ್ಕೂಟರಿನಲ್ಲಿ ಬಂದು ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಯುವಕರನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಕುಂಜತ್ ಬೈಲು ನಿವಾಸಿ ದೀಪಕ್ (23) ಮತ್ತು ಪ್ರಜ್ವಲ್ (20) ಎಂದು ಗುರುತಿಸಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಿದ್ದಗೌಡ ಭಜಂತ್ರಿ ಇವರು ತಮಗೆ ದೊರೆತ ಖಚಿತ ವರ್ತಮಾನದ ಮೇರೆಗೆ ದಸ್ತಗಿರಿ ಮಾಡಿ ಸದ್ರಿ ಆರೋಪಿಗಳ ವಶದಲ್ಲಿದ್ದ ಸುಮಾರು 35 ಗ್ರಾಂ ಗಾಂಜಾ ಹಾಗೂ ಆರೋಪಿಗಳು ಗಾಂಜಾ ಮಾರಾಟ ಮಾಡುವರೇ ಬಂದಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಮತ್ತು ಆಕ್ಸಿಸ್ 125 ಸ್ಕೂಟರನ್ನು ಸ್ವಾಧೀನಪಡಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಸ್ತುತ ಆರೋಪಿಗಳು ಮಾನ್ಯ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಮಂಗಳೂರು ನಗರದಲ್ಲಿ ಗಾಂಜಾ-ಮಾದಕವಸ್ತುವಿನ ದಂಧೆಯನ್ನು ಮಟ್ಟ ಹಾಕುವರೇ ಪೊಲೀಸು ಆಯುಕ್ತರು, ಮಂಗಳೂರು ನಗರ ಮತ್ತು ಪೊಲೀಸು ಉಪಾಯುಕ್ತರು ಮಂಗಳೂರು ನಗರ ಇವರ ಕಟ್ಟುನಿಟ್ಟಿನ ಆದೇಶದ ಮೇರೆಗೆ, ಸಹಾಯಕ ಪೊಲೀಸು ಆಯುಕ್ತರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸು ಆಯುಕ್ತರಾದ ಶ್ರೀ.ರಾಮರಾವ್ ರವರ ಮಾರ್ಗದರ್ಶನದಲ್ಲಿ , ಮಂಗಳೂರು ಗ್ರಾಮಾಂತರ ಪೊಲೀಸು ಠಾಣಾ ಪೊಲೀಸು ನಿರೀಕ್ಷಕರಾದ ಸಿದ್ದಗೌಡ ಭಜಂತ್ರಿ ಇವರು ನಡೆಸಿದ ಈ ಧಾಳಿಯಲ್ಲಿ ಮಂಗಳೂರು ಗ್ರಾಮಾಂತರ ಠಾಣಾ ಸಿಬ್ಬಂದಿಯವರಾದ ಸುಧೀರ್, ಕುಶಾಲ್ ಹೆಗ್ಡೆ, ಲತೇಶ್ ನಾಯ್ಕರವರು ಸಹಕರಿಸಿದ್ದರು.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಟಿ.ಆರ್.ಸುರೇಶ್, ಐ.ಪಿ.ಎಸ್. ರವರ ನಿರ್ದೇಶನದಂತೆ, ಮಾನ್ಯರಾದ ಹನುಮಂತರಾಯ (ಐಪಿಎಸ್) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಉಮಾ ಪ್ರಶಾಂತ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ ಸದ್ರಿ ಕಾರ್ಯಾಚರಣೆಯನ್ನು ನಡೆಸಲಾಗಿರುತ್ತದೆ.