ವಿದ್ಯಾರ್ಥಿಗಳಿಗೆ ನೀಡಿದ ಭರವಸೆ ಈಡೇರಿಸಿ ಮಾದರಿ ಎನಿಸಿದ ಎಸ್ಪಿ ಸಂಜೀವ್ ಪಾಟೀಲ್!
ಉಡುಪಿ: ಉಡುಪಿ ಜಿಲ್ಲಾ ನೂತನ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಶನಿವಾರ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಲುವಾಗಿ ಮತ್ತು ಜನರೊಂದಿಗೆ ನೇರವಾಗಿ ಮಾತನಾಡುವ ಉದ್ದೇಶದಿಂದ ಆಯೋಜಿಸಿದ ಫೋನ್-ಇನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದು ಮಾದರಿ ಎನಿಸಿಕೊಂಡರು.
ಶನಿವಾರದ ಫೋನ್-ಇನ್ ಕಾರ್ಯಕ್ರಮದಲ್ಲಿ ಕಲ್ಯಾಣಪುರ ಡಾ.ಟಿ.ಎಂ.ಎ.ಪೈ. ಶಾಲೆಯ ಶಿಕ್ಷಕಿಯೊರ್ವರು ಕರೆ ಮಾಡಿ ತಮ್ಮ ಶಾಲೆಯ ಎಂಟನೇ ತರಗತಿಯ ಮಕ್ಕಳಿಗೆ ಕಾನೂನು ವ್ಯವಸ್ಥೆಯ ಕುರಿತು ಪಾಠವಿದ್ದು ವಿದ್ಯಾರ್ಥಿಗಳಿಗೆ ಕಾನೂನು ಸುವ್ಯವಸ್ಥೆ ಕುರಿತು ಎಸ್ಪಿಯವರಿಂದ ಮಾಹಿತಿ ಪಡೆಯುಲು ಫೋನ್ ಎದುರು ಕುಳಿತುಕೊಂಡಿದ್ದಾರೆ ಆದ್ದರಿಂದ ಮಾಹಿತಿ ನೀಡುವಂತೆ ವಿನಂತಿಸಿಕೊಂಡರು .
ಅದಕ್ಕೆ ಪ್ರತಿಕ್ರಿಯಿಸಿದ ಎಸ್ಪಿಯವರು ಫೋನಿನಲ್ಲಿ ಹೆಚ್ಚು ವಿಸ್ತಾರವಾಗಿ ಹೇಳಲು ಸಮಯದ ಅಭಾವವಿದ್ದು ಫೋನಿನ್ ಕಾರ್ಯಕ್ರಮ ಮುಗಿದ ಕೂಡಲೇ ತಾನೇ ಶಾಲೆಗೆ ಭೇಟಿ ನೀಡಿ ಅರ್ಧ ಗಂಟೆ ಕಾರ್ಯಕ್ರಮ ನೀಡುವುದಾಗಿ ಹೇಳೀದರು. ಅದರಂತೆಯೇ ಕೊಟ್ಟ ಮಾತಿನಂತೆ ಫೋನ್-ಇನ್ ಕಾರ್ಯಕ್ರಮ ಮುಗಿದ ಬಳಿಕ ಸಂಬಂಧಪಟ್ಟ ಶಾಲೆಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಅರ್ಧ ಗಂಟೆ ಕಾನೂನು ವ್ಯವಸ್ಥೆ, ಪೋಲಿಸ್ ಇಲಾಖೆಯ ಕುರಿತು ಮಾಹಿತಿಯನ್ನು ಹಂಚಿಕೊಂಡರು. ಇದರೊಂದಿಗೆ ಕೇವಲ ಭರವಸೆ ನೀಡಿ ಸುಮ್ಮನಾಗದೆ ಅದನ್ನು ಪೊರೈಸಿ ಮಾದರಿ ಎನಿಸಿದರು.
ಈ ಮೊದಲ ಉಡುಪಿಯಲ್ಲಿ ಎಸ್ಪಿಯಾಗಿದ್ದ ಅಣ್ಣಾಮಲೈ ಕೂಡ ವಿದ್ಯಾರ್ಥಿಗಳೊಂದಿಗೆ ಆಗಾಗ ಸಂವಾದ ನಡೆಸುವ ಮೂಲಕ ಸಮಾಜದಲ್ಲಿ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುತ್ತಿದ್ದರು ಇದರಿಂದ ವಿದ್ಯಾರ್ಥಿಗಳ ಪಾಲಿಗೆ ಇಂದಿಗೂ ರೋಲ್ ಮಾಡೆಲ್ ಆಗಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆ – 79 ಕರ್ಕಶ ಹಾರ್ನ್ ಕೇಸು ದಾಖಲು.
ಶನಿವಾರದ ಫೋನ್-ಇನ್ ಕಾರ್ಯಕ್ರಮದಲ್ಲಿ ಕರ್ಕಶ ಹಾರ್ನ್ ಸಮಸ್ಯೆಯ ಕುರಿತು ಸಾರ್ವಜನಿಕರು ಎಸ್ಪಿಯವರಲ್ಲಿ ದೂರಿಕೊಂಡಿದ್ದರು. ಅದರ ವಿರುದ್ದ ಕಾರ್ಯಚರಣೆ ನಡೆಸುವುದಾಗಿ ಭರವಸೆ ನೀಡಿದ್ದು, ಅದರಂತೆ ಪೋಲಿಸರಿಗೆ ಕ್ಷಿಪ್ರ ಕಾರ್ಯಾಚರಣೆಗೆ ಆದೇಶ ನೀಡಿದ ಅವರು ಪೋಲಿಸರು ಸಂಜೆಯ ವೇಳೆಗೆ 79 ಕರ್ಕಶ ಹಾರ್ನ್ ಬಳಸುವವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.