ವಿದ್ಯಾರ್ಥಿನಿ ಮೇಲೆ ಅತ್ಯಾಚಾರ – ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಖಂಡನೆ
ಉಡುಪಿ: ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಸಂಘಟನೆ ಖಂಡಿಸುತ್ತದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷರಾದ ಕ್ರಿಸ್ಟನ್ ಆಲ್ಮೇಡಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳ ಹೆಚ್ಚಾಗುತ್ತಿದ್ದು ವಿದ್ಯಾರ್ಥಿಗಳಿಗೆ ಅತಿಯಾಗಿ ಗಾಂಜಾ ಲಭಿಸುತ್ತಿದ್ದು ಇದನ್ನು ಸೇವಿಸುವುದರ ಪರಿಣಾಮ ಇಂತಹ ಸರಣಿ ಘಟನೆಗಳು ಮರುಕಳಿಸುತ್ತಿವೆ. ಇತ್ತೀಚೆಗೆ ದೇರಳಕಟ್ಟೆಯಲ್ಲಿ ನಡೆದ ಕೊಲೆ ಯತ್ನದಲ್ಲಿಯೂ ಅಪರಾಧಿ ಅಮಲು ಪದಾರ್ಥ ಸೇವನೆ ಮಾಡಿ ಅಂತಹ ಪೈಶ್ಯಾಚಿಕ ಕೃತ್ಯ ನಡೆಸಿದ್ದಾನೆ. ಪುತ್ತೂರಿನಲ್ಲಿ ನಡೆದ ಅತ್ಯಾಚಾರ ಘಟನೆಯಲ್ಲೂ ಅತ್ಯಾಚಾರಿಗಳು ಅಮಲು ಪದಾರ್ಥ ಸೇವನೆ ಮಾಡಿ ಜಿಲ್ಲೆ ತಲೆತಗ್ಗಿಸುವಂತ ಕೆಲಸ ಮಾಡಿದ್ದಾರೆ ಎನ್ನಲಾಗಿದ್ದು ಈ ಬಗ್ಗೆ ಇಲಾಖೆ ಸೂಕ್ತ ತನಿಖೆ ನಡೆಸಬೇಕಾಗಿದೆ.
ಆರೋಪಿಗಳ ಕೃತ್ಯವು ಅತ್ಯಂತ ಹೇಯವಾಗಿದೆ. ಅತ್ಯಾಚಾರವೆಸಗಿ ಅದರ ವಿಡಿಯೋ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದರಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗಿದ್ದು, ಅತ್ಯಾಚಾರಿಗಳು ಯಾವುದೇ ಸಂಘಟನೆಗೆ ಸೇರಿದ್ದರೂ ಕೂಡ, ಯಾವುದೇ ಶಕ್ತಿಗಳ ಒತ್ತಡಕ್ಕೆ ಒಳಗಾಗದೆ ಅತ್ಯಾಚಾರವನ್ನು ಎಸಗಿದ ಆರೋಪಿಗಳಿಗೆ ಶೀಘ್ರ ಶಿಕ್ಷೆ ನೀಡಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿಕೊಡಬೇಕು ಮತ್ತು ಅಮಲು ಪದಾರ್ಥಗಳ ಸಾಗಾಟವನ್ನು ತಡೆಗಟ್ಟಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಶಿಕ್ಷೆ ಆಗದೆ ಇದ್ದಲ್ಲಿ ಜಿಲ್ಲಾಯಾದ್ಯಾಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.